ಸಾಮಾಜಿಕ ಬದಲಾವಣೆ ಶಾಂತಿಯಿಂದಾಗಬೇಕು

KannadaprabhaNewsNetwork | Published : Nov 25, 2024 1:02 AM

ಸಾರಾಂಶ

ಸಮಾಜದಲ್ಲಿ ಮಾನವೀಯತೆ ಎನ್ನುವುದು ಬಹು ಮುಖ್ಯ ಮೌಲ್ಯವಾಗಿದ್ದು, ಪ್ರತಿಯೊಬ್ಬರೂ ಮಾನವೀಯತೆ ರೂಢಿಸಿಕೊಂಡರೆ ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸುತ್ತದೆ. ಮಾನವರಾಗಿ ಹುಟ್ಟಿದಾಗ ಅವರ ಜೀವನ ಪಥದಲ್ಲಿ ಮಾನವೀಯತೆ ಅಳವಡಿಸಿಕೊಂಡು ಸಾಯುವಾಗ ಮಾನವರಾಗಿ ಸತ್ತರೆ ಅದಕ್ಕಿಂತ ಉನ್ನತ ಗೌರವ ಬೇರೊಂದಿಲ್ಲ.

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ಶಾಂತಿಯಿಂದ ದೇಶದಲ್ಲಿ ಬದಲಾವಣೆ ಬಂದರೆ ಅದರಿಂದ ಯಾವುದೇ ರೀತಿ ಯಾರಿಗೂ ತೊಂದರೆಯಿಲ್ಲ, ಆದರೆ ಕ್ರಾಂತಿಯಿಂದ ಬದಲಾವಣೆ ಬರುವುದಾದರೆ ಅದರಿಂದ ದೇಶದ ಎಲ್ಲರಿಗೂ ನಷ್ಟ ಆಗಲಿದೆ ಎಂದು ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಗಡೆ ಹೇಳಿದರು. ನಗರದ ರೈಲು ನಿಲ್ದಾಣದ ರಸ್ತೆಯ ಶ್ರೀ ಭುವನೇಶ್ವರಿ ವೃತ್ತದಲ್ಲಿ ಲಿಯೋ ಕ್ಲಬ್ ಆಫ್ ಕಿರಣ ಹಾಗೂ ಎಂವಿಜೆ ಮೆಡಿಕಲ್ ಕಾಲೇಜು ಸಹಯೋಗದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಬೃಹತ್ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿ, ಕ್ರಾಂತಿಯಿಂದ ದೇಶದಲ್ಲಿ ಬದಲಾವಣೆ ಬಂದದ್ದೇ ಆದರೆ ದೇಶ ಇಪ್ಪತ್ತೈದು ರಾಷ್ಟ್ರಗಳಾಗಿ ಮಾರ್ಪಾಡು ಆಗುತ್ತದೆ ಎಂದರು. ಮಾನವೀಯತೆ ಬೆಳೆಸಿಕೊಳ್ಳಿ

ಸಮಾಜದಲ್ಲಿ ಮಾನವೀಯತೆ ಎನ್ನುವುದು ಬಹು ಮುಖ್ಯ ಮೌಲ್ಯವಾಗಿದ್ದು, ಪ್ರತಿಯೊಬ್ಬರೂ ಮಾನವೀಯತೆ ರೂಢಿಸಿಕೊಂಡರೆ ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸುತ್ತದೆ. ಮಾನವರಾಗಿ ಹುಟ್ಟಿದಾಗ ಅವರ ಜೀವನ ಪಥದಲ್ಲಿ ಮಾನವೀಯತೆ ಅಳವಡಿಸಿಕೊಂಡು ಸಾಯುವಾಗ ಮಾನವರಾಗಿ ಸತ್ತರೆ ಅದಕ್ಕಿಂತ ಉನ್ನತ ಗೌರವ ಬೇರೊಂದಿಲ್ಲ ಎಂದರು.

ರಾಜ್ಯಗಳನ್ನು ಪ್ರತ್ಯೇಕ ರಾಷ್ಟ್ರಗಳನ್ನಾಗಿಸಿ ನಾವೂ ಪ್ರಧಾನಿಗಳಾಗಬೇಕು ಎಂದು ದೇಶದ ಬಹುತೇಕ ರಾಜಕಾರಣಿಗಳು ಕಾಯುತ್ತಿದ್ದಾರೆ. ಹಾಗಾಗಿ ಯುವಜನತೆ ನಮ್ಮ ಹಿರಿಯರು ಕಲಿಸಿಕೊಟ್ಟ ಮಾನವೀಯ ಮೌಲ್ಯಗಳನ್ನು ತಮ್ಮ ತಮ್ಮ ಜೀವನಗಳಲ್ಲಿ ಅಳವಡಿಸಿಕೊಳ್ಳಬೇಕೆಂದ ಅವರು, ಯುವಕರು ಸನ್ಮಾರ್ಗದಲ್ಲಿ ಸಾಗಬೇಕು, ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕೆಂದರು.ಆರೋಗ್ಯ ತಪಾಸಣೆ:

ಆರೋಗ್ಯ ಶಿಬಿರದಲ್ಲಿ ಸುಮಾರು 270 ಕ್ಕೂ ಹೆಚ್ಚು ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಈ ಸಂದರ್ಭದಲ್ಲಿ ತುಮಕೂರಿನ ನಾಗರೀಕ ಜಾರಿ ನಿರ್ದೇಶನಾಲಯದ ಪೊಲೀಸ್ ಅಧೀಕ್ಷಕ ಕೆ.ಎನ್.ರಮೇಶ್, ಗ್ರೇಡ್ 2 ತಹಸೀಲ್ದಾರ್ ಪೂರ್ಣಿಮಾ, ಪ್ರಥಮ ದರ್ಜೆ ಕಾಲೇಜು ಸಹ ಪ್ರಾಧ್ಯಾಪಕ ಡಾ.ವೆಂಕಟೇಶ್, ಕ್ರೆಸೆಂಟ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ತಮೀಮ್, ಲತಾ ಪಾಲಿ ಕ್ಲಿನಿಕ್‌ ವೈದ್ಯೆ ಡಾ.ಲತಾ, ಲಿಯೋ ಕ್ಲಬ್ ಆಫ್ ಕಿರಣ ಅಧ್ಯಕ್ಷ ಶ್ರೀಕಾಂತ್, ಕಾರ್ಯದರ್ಶಿ ಲೋಕೇಶ್ ಮತ್ತಿತರರು ಹಾಜರಿದ್ದರು.

Share this article