ಕನ್ನಡಪ್ರಭ ವಾರ್ತೆ ಹೊಳಲ್ಕೆರೆ ಹದಿನೆಂಟು ವರ್ಷ ತುಂಬಿದ ಎಲ್ಲ ವಯಸ್ಕರು ಕಾಲಕಾಲಕ್ಕೆ ನಡೆಯುವ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರಾಗಿರುತ್ತಾರೆ. ಮೊದಲು ಮತಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಿರಿ ನಂತರ ಭಾರತ ಚುನಾವಣಾ ಆಯೋಗದಿಂದ ಓಟರ್ ಕಾರ್ಡ್ ಪಡೆದು ಮತ ಚಲಾಯಿಸಬೇಕು ಎಂದು ಅಮೃತಾಪುರ ಬೂತ್ ಮಟ್ಟದ ಅಧಿಕಾರಿ ಟಿ.ಪಿ.ಉಮೇಶ್ ಹೇಳಿದರು.ಹೊಳಲ್ಕೆರೆ ತಾಲೂಕು ಅಮೃತಾಪುರ ಹಾಗೂ ಗೌರೀಪುರದಲ್ಲಿ ಮತಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯದಲ್ಲಿ ತೊಡಗಿರುವ ಅವರು ಗ್ರಾಮದ ಜನರಿಗೆ ಮತಪಟ್ಟಿಗೆ ಹೆಸರು ನೋಂದಾವಣೆ ಹಾಗೂ ಮತದಾನದ ಮಹತ್ವ ಕುರಿತು ತಿಳಿಸಿದರು.
ಭಾರತ ಚುನಾವಣಾ ಆಯೋಗ ಈಗ ವರ್ಷಪೂರ್ತಿ ಮತಪೆಟ್ಟಿಗೆ ನೋಂದಾಯಿಸಲು ಅರ್ಹ ವಯಸ್ಕರಿಗೆ ಅವಕಾಶ ನೀಡಿದೆ. ಜೊತೆಗೆ ವಿಶೇಷ ಪರಿಷ್ಕರಣೆ ದಿನಗಳನ್ನು ನಿಗದಿಗೊಳಿಸಿ ಮತಪಟ್ಟಿಗೆ ಎಲ್ಲ ವಯಸ್ಕರು ದಾಖಲಾಗಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಭಾರತ ದೇಶದ ಪ್ರಜಾಪ್ರಭುತ್ವ ಬಲಗೊಳಿಸಲು ಈ ಸದಾವಕಾಶವನ್ನು ಎಲ್ಲ ಸಾರ್ವಜನಿಕರು ಬಳಸಿಕೊಳ್ಳಬೇಕು ಎಂದು ತಿಳಿಸಿದರು. ಈ ವಿಶೇಷ ಪರಿಷ್ಕರಣೆಯ ಎರಡು ದಿನಗಳಲ್ಲಿ ಅಮೃತಾಪುರದಲ್ಲಿ ಸಾವು ಸಂಭವಿಸಿದ ಐದು ಮತದಾರರನ್ನು ಗುರುತಿಸಿ ಮತಪಟ್ಟಿಯಿಂದ ತೆಗೆಯಲು ಮತ್ತು ತಲಾ ಇಬ್ಬರು ಮತದಾರರ ದಾಖಲೆ ತಿದ್ದುಪಡಿ ಹಾಗೂ ಹೊಸ ಸೇರ್ಪಡೆಗೆ ಕ್ರಮ ಕೈಗೊಳ್ಳಲಾಯಿತು ಎಂದು ಬೂತ್ ಮಟ್ಟದ ಅಧಿಕಾರಿ ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಟಿ.ಪಿ.ಉಮೇಶ್ ತಿಳಿಸಿದರು.