ಕನ್ನಡಪ್ರಭ ವಾರ್ತೆ ಸುರಪುರ
ನಗರದ ಕಡ್ಲಪ್ಪನವರ ನಿಷ್ಠಿ ವಿರಕ್ತಮಠದಲ್ಲಿ ಲಿಂ.ಮಲ್ಲಿಕಾರ್ಜುನ ಸ್ವಾಮೀಜಿಯ 48ನೇ ವರ್ಷದ ಪುಣ್ಯಸ್ಮರಣೋತ್ಸವ ನಿಮಿತ್ತ ಹಮ್ಮಿಕೊಂಡಿರುವ ಶರಣರ ಚರಿತಾಮೃತ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ರಾಜ್ಯದಲ್ಲಿ ವೀರಶೈವ ಮಠಗಳು ಯಾವುದೇ ಜಾತಿ, ಮತ ಭೇದವಿಲ್ಲದೆ ಸಕಲ ಸಮುದಾಯದವರನ್ನು ಸಮಾನವಾಗಿ ಕಾಣುತ್ತಿವೆ ಎಂದರು.
ಜ್ಞಾನ ಮತ್ತು ಅನ್ನ ದಾಸೋಹ ಪರಂಪರೆ ಧ್ಯೇಯವಾಗಿಸಿಕೊಂಡಿರುವ ವೀರಶೈವ ಮಠಗಳು ಸಮಾಜದ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿವೆ. 1908ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಸಂಸ್ಥಾಪಕರಾದ ಹಾನಗಲ್ ಕುಮಾರಸ್ವಾಮಿಯವರು ಅಸಂಖ್ಯಾತರ ಬದುಕಿನಲ್ಲಿ ಜ್ಞಾನದ ದೀಪ ಬೆಳಗಿಸಿದ ಮಹಾನ್ ತಪಸ್ವಿಗಳು. ಸಹಸ್ರ ಸಂಖ್ಯೆಯ ಅಂಧ, ಅನಾಥ ಮಕ್ಕಳು ಬೆಳಗುವುದಕ್ಕೆ ಪ್ರೇರಣೆ ನೀಡಿದರು. ಅವರ ಸೇವೆ ಅವಿಸ್ಮರಣೀಯ. ಶಿರಸಂಗಿ ಲಿಂಗರಾಜ ದೇಸಾಯಿ ಕೂಡ ಕರ್ನಾಟಕ ಲಿಂಗಾಯತ ಏಜುಕೇಷನ್ ಸೊಸೈಟಿ ಸ್ಥಾಪಿಸಿ ಶಿಕ್ಷಣಕ್ಕೆ ಆದ್ಯತೆ ನೀಡಿದರು ಎಂದರು.ಮಠಗಳು ಸಂಸ್ಕೃತಿ, ಸಂಸ್ಕಾರದ ಕೇಂದ್ರಗಳಾಗಿವೆ. ಮಠಗಳ ಬೆಳವಣಿಗೆಗೆ ದಾನ, ದೇಣಿಗೆ ಜೊತೆಯಲ್ಲಿ ಭಕ್ತರ ಕಂಕಣಬದ್ಧವಾದ ಸೇವೆ ಕೂಡ ಅವಶ್ಯಕವಾಗಿದೆ. ಇಂದು ದೂರದರ್ಶನ, ಮೊಬೈಲ್ ಹೆಚ್ಚು ಬಳಕೆ ಬೇಸರದ ಸಂಗತಿಯಾಗಿದೆ. ಮಠಗಳಲ್ಲಿ ಪುರಾಣ, ಪ್ರವಚನ, ಸಾಮಾಜಿಕ, ಧಾರ್ಮಿಕ ಕಾರ್ಯಗಳು ನಿರಂತರವಾಗಿ ನಡೆಯಬೇಕು. ಭಕ್ತರ ಪಾಲ್ಗೊಳ್ಳುವಿಕೆಯು ಕೂಡ ಅಷ್ಟೇ ಮಹತ್ವದಾಗಿದೆ ಎಂದು ನುಡಿದರು.
ಇಂದು ಜೀವನ ಮತ್ತು ಆಹಾರ ಪದ್ಧತಿ ಬದಲಾಗಿ ಕಾಯಿಲೆಗಳಿಗೆ ಆಹ್ವಾನ ನೀಡುತ್ತಿದೆ. ದೈಹಿಕ ಶ್ರಮ ಇಲ್ಲವಾಗಿದೆ. ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದ್ದು ಜೀವನಶೈಲಿ ಸರಿಪಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಆರೋಗ್ಯದ ಬಗ್ಗೆ ನಿರ್ಲಕ್ಷ್ಯಬೇಡ ಎಂದು ಪೂಜ್ಯರು ಸಲಹೆ ನೀಡಿದರು.