ಗದಗ: ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದ ಆತ್ಮವೇ ನಮ್ಮ ಸಂವಿಧಾನ. ನಮ್ಮ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೆ ಸಮಾನ ಅವಕಾಶ ಕಲ್ಪಿಸಲಾಗಿದೆ. ಸಮಾನತೆ ಮತ್ತು ಸಾಮಾಜಿಕ ನ್ಯಾಯವೇ ಸಂವಿಧಾನದ ಸಂದೇಶವಾಗಿದೆ ಎಂದು ಡಾ.ತೋಂಟದ ಸಿದ್ದರಾಮ ಸ್ವಾಮಿಗಳು ಹೇಳಿದರು.
ರಾಜ್ಯ ಸಂಸ್ಥೆ ಸಿಸ್ಲೆಪ್ ಧಾರವಾಡದ ನಿರ್ದೇಶಕ ಡಾ. ಬಿ.ಕೆ.ಎಸ್.ವರ್ಧನ್ ಮಾತನಾಡಿ, ಭಾರತದ ಸಂವಿಧಾನ ರಚಿಸಿದ ಡಾ. ಬಿ.ಆರ್.ಅಂಬೇಡ್ಕರ್ 1979 ನ. 26 ರಂದು ಭಾರತದ ಸಂವಿಧಾನ ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ. ಅಂತೇಯೇ ಈ ದೇಶದ ಕಟ್ಟಕಡೆಯ ಹಳ್ಳಿಯ ಮನುಷ್ಯನು ಇಂದು ಪವಿತ್ರ ವೇದಿಕೆಯಲ್ಲಿ ನಿಂತು ಮಾತನಾಡುವ ಸ್ವಾತಂತ್ರ್ಯ ನಮ್ಮ ಸಂವಿಧಾನ ಕೊಟ್ಟಿದೆ. ಸರ್ವಧರ್ಮಗಳಿಗೂ ಸ್ವಾತಂತ್ರ‍್ಯ ಸಮಾನತೆ ಮತ್ತು ಭಾತೃತ್ವಭಾವದಿಂದ ಮುನ್ನಡೆಯುವ ಅಂಶ ನಮ್ಮ ಸಂವಿಧಾನ ಒಳಗೊಂಡಿದೆ ಎಂದರು.
ಈ ವೇಳೆ ಗುರುನಾಥ ಸುತಾರ ಹಾಗೂ ಸವಿತಾ ಗುಡ್ಡದ ಅವರಿಂದ ವಚನ ಸಂಗೀತ ನಡೆಯಿತು. ಧರ್ಮಗ್ರಂಥ ಪಠಣವನ್ನು ದಿನ್ನಿ, ವಚನ ಚಿಂತನ ಉಮಾ ಬಸನಗೌಡ ಬಿನ್ನಾಳ ನಡೆಸಿಕೊಟ್ಟರು. ದಾಸೋಹ ಸೇವೆಯನ್ನು ನಿವೃತ್ತ ಪಿಎಸ್‌ಐ ಎಚ್.ಎಚ್.ನೀಲಗುಂದ ವಹಿಸಿಕೊಂಡಿದ್ದರು.ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಆರ್.ಎಸ್. ಬುರಡಿ, ಎಂ.ಎಂ. ರಡ್ಡೇರ, ಅಂದಾನಪ್ಪ ವಡಿಗೇರಿ, ಜಿ.ಎಲ್. ಬಾರಾಟಕ್ಕೆ, ವಿ.ವಿ. ನಡುವಿನಮನಿ, ಶಂಕರ್ ಹಡಗಲಿ, ಎಂ.ಎಸ್. ಕಂಬಳಿ, ಡಾ. ಉಮೇಶ ಪುರದ, ವೀರಣ್ಣ ಗೋಟಡಕಿ ಇದ್ದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ ಸ್ವಾಗತಿಸಿದರು. ಮಂಜುಳಾ ಹಾಸಲಕರ ನಿರೂಪಿಸಿದರು. ಐ.ಬಿ.ಬೆನಕೊಪ್ಪ ಪರಿಚಯಿಸಿದರು.