ಈಡಿಗರದೊಡ್ಡಿಯಲ್ಲಿ ಇಂದು ಸಮಾಜಮುಖಿ ಕಾರ್ಯಕ್ರಮ: ಕದಲೂರು ಲೋಕೇಶ್

KannadaprabhaNewsNetwork | Published : Jan 15, 2025 12:47 AM

ಸಾರಾಂಶ

ತಿಮ್ಮದಾಸ್ ಗ್ರೂಪ್ಸ್ ಮಾಲೀಕರಾದ ಸಿ.ಟಿ.ಶಂಕರ್ ಅವರು, ಕೋವಿಡ್ ವೇಳೆ ಉಚಿತ ಆಂಬ್ಯುಲೆನ್ಸ್ ವಾಹನ, ನೂರಾರು ಹಳ್ಳಿಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ಸ್ಯಾನಿಟೈಸರ್ ಸಿಂಪಡಣೆ, ಸೊಮನಹಳ್ಳಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಿಗೆ ಸ್ವಂತ ಹಣದಲ್ಲಿ ಬೀದಿ ದೀಪಗಳಿಗೆ ಎಲ್.ಇ.ಡಿ ಬಲ್ಬ್‌ಗಳ ಅಳವಡಿಕೆ ಕೈಗೊಂಡಿದ್ದನ್ನು ಸ್ಮರಿಸಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ಮದ್ದೂರು ತಾಲೂಕಿನ ಆತಗೂರು ಹೋಬಳಿಯ ಈಡಿಗರದೊಡ್ಡಿ ಗ್ರಾಮದಲ್ಲಿ ಜ.15ರಂದು ವಿವಿಧ ಸಮಾಜ ಮುಖಿ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಟ್ರಸ್ಟ್‌ನ ಕಾರ್ಯದರ್ಶಿ ಕದಲೂರು ಲೋಕೇಶ್ ತಿಳಿಸಿದರು.

ತಿಮ್ಮದಾಸ್ ಗ್ರೂಪ್ಸ್ ಮಾಲೀಕ, ಮುಗಿಲು ಸೇವಾ ಟ್ರಸ್ಟ್ ಅಧ್ಯಕ್ಷ ಸಿ.ಟಿ.ಶಂಕರ್ ಅಭಿಮಾನಿ ಬಳಗದಿಂದ ತಾಲೂಕಿನ ತುಮಕೂರು- ಮದ್ದೂರು ಹೆದ್ದಾರಿಯ ಕೆಸ್ತೂರು ಸಮೀಪದ ಈಡಿಗರದೊಡ್ಡಿ ಗ್ರಾಮದಲ್ಲಿ ಆಯೋಜಿಸಿರುವ ಕಾರ್ಯಕ್ರಮ ಸಂಬಂಧ ವೇದಿಕೆ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಅಂದು ಬೆಳಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧೆಡೆಗಳಿಂದ ಸುಮಾರು ಐದು ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು, ಈಗಾಗಲೇ ಅಗತ್ಯ ಪೂರ್ವ ಸಿದ್ಧತೆ ಕೈಗೊಂಡಿರುವುದಾಗಿ ವಿವರಿಸಿದರು.

ತಿಮ್ಮದಾಸ್ ಗ್ರೂಪ್ಸ್ ಮಾಲೀಕರಾದ ಸಿ.ಟಿ.ಶಂಕರ್ ಅವರು, ಕೋವಿಡ್ ವೇಳೆ ಉಚಿತ ಆಂಬ್ಯುಲೆನ್ಸ್ ವಾಹನ, ನೂರಾರು ಹಳ್ಳಿಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ಸ್ಯಾನಿಟೈಸರ್ ಸಿಂಪಡಣೆ, ಸೊಮನಹಳ್ಳಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಿಗೆ ಸ್ವಂತ ಹಣದಲ್ಲಿ ಬೀದಿ ದೀಪಗಳಿಗೆ ಎಲ್.ಇ.ಡಿ ಬಲ್ಬ್‌ಗಳ ಅಳವಡಿಕೆ ಕೈಗೊಂಡಿದ್ದನ್ನು ಸ್ಮರಿಸಿದರು.

ಆತಗೂರು ಹೋಬಳಿಯ ಮಲ್ಲನಕುಪ್ಪೆ ಸರ್ಕಾರಿ ಶಾಲೆಗೆ ನೆರೆಹೊರೆ ಗ್ರಾಮಗಳಿಂದ ಆಗಮಿಸುವ ಮಕ್ಕಳ ಹಿತದೃಷ್ಟಿಯಿಂದ ವಾಹನವೊಂದನ್ನು ಕೊಡುಗೆಯಾಗಿ ನೀಡಿದ್ದು, ಸಕಾಲಕ್ಕೆ ಶಾಲೆಗೆ ತಲುಪಲು ಮತ್ತು ಶೈಕ್ಷಣಿಕ ಮಟ್ಟ ಉನ್ನತಿಗೆ ಕಾರಣವಾಗಿದೆ ಎಂದು ಬಣ್ಣಿಸಿದರು.

ಆತಗೂರು ಹೋಬಳಿ ವ್ಯಾಪ್ತಿ ವಿವಿಧ ಗ್ರಾಮಗಳ ದೇವಾಲಯಗಳ ಜೀರ್ಣೋದ್ಧಾರ, ಪ್ರತಿಭಾನ್ವಿತ ಹಾಗೂ ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಧನ ಸಹಾಯ ಇನ್ನಿತರೆ ಸಮಾಜಮುಖಿ ಕಾರ್ಯಗಳ ಜತೆಗೆ ಈ ವ್ಯಾಪ್ತಿ ಹಳ್ಳಿಗಳ ಜನಸಾಮಾನ್ಯರ ಹಿತದೃಷ್ಟಿಯಿಂದ ಸಾಕಷ್ಟು ಸೇವಾ ಕೈಂಕರ್ಯ ಕೈಗೊಂಡಿರುವುದಾಗಿ ಹೇಳಿದರು.

ಸೋಮನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ, ಗ್ರಾಪಂ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾಗಿ ಸರ್ಕಾರದಿಂದ ಲಭ್ಯ ಅನುದಾನದೊಟ್ಟಿಗೆ ತುರ್ತು ಸಂದರ್ಭಗಳಲ್ಲಿ ಸ್ವಂತ ಹಣದಲ್ಲೇ ನಿಸ್ವಾರ್ಥ ಸೇವೆ ಮೂಲಕ ಜನರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಮಾದರಿ ಆಗಿದ್ದಾಗಿ ಹೇಳಿದರು.

ತಿಮ್ಮದಾಸ್ ಗ್ರೂಪ್ ಮಾಲೀಕರಾದ ಸಿ.ಟಿ.ಶಂಕರ್ ಸಮಾಜ ಸೇವೆ ಜತೆಗೆ ತಮ್ಮ ಸಂಸ್ಥೆಯಲ್ಲಿ ದುಡಿಯುತ್ತಿರುವ ನೂರಾರು ಮಂದಿಗೆ ಆಸರೆಯಾಗಿದ್ದಾರೆ. ಇವರ ನಿಸ್ವಾರ್ಥ ಸೇವೆಗೆ ಮನಸೋತ ಟ್ರಸ್ಟ್‌ನ ಪದಾಧಿಕಾರಿಗಳು, ಅಭಿಮಾನಿಗಳು, ಹಿತೈಷಿಗಳು, ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಮುಂದಾಗಿರುವುದಾಗಿ ಹೇಳಿದರು.

ಬೆಳ್ಳಿಗದೆ:

ಗಣ್ಯರ ಸಮ್ಮುಖದಲ್ಲಿ ಜ.15ರ ಬುಧವಾರ ಆಯೋಜಿಸಿರುವ ಕಾರ್ಯಕ್ರಮದ ವೇಳೆ ಸಿ.ಟಿ.ಶಂಕರ್ ಅವರಿಗೆ ಬೆಳ್ಳಿ ಗದೆ ವಿತರಿಸಿ ಅಭಿನಂದಿಸುವುದಾಗಿ ತಿಳಿಸಿದರು.

ಸಾಧಕರಿಗೆ ಅಭಿನಂದನೆ:

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಅಭಿನಂದನೆ, ರೈತರಿಗೆ ಉಚಿತ ತೆಂಗಿನ ಸಸಿ ವಿತರಣೆ, ಮದ್ದೂರು ಪಟ್ಟಣ, ಭಾರತೀನಗರ, ಕೆಸ್ತೂರು, ಸರ್ಕಾರಿ ಆಸ್ಪತ್ರೆಗಳ ಒಳರೋಗಿಗಳಿಗೆ ಹಣ್ಣು ಹಂಪಲು, ತಾಲೂಕಿನ ಬೋರಾಪುರದ ಆಶ್ರಯದಾಮದ ಮಕ್ಕಳಿಗೆ ಊಟೋಪಚಾರ, ವಳಗೆರೆಹಳ್ಳಿ ವಯೋವೃದ್ಧರ ಪಾಲನಾ ಕೇಂದ್ರಕ್ಕೆ ಆಹಾರ, ಹೊದಿಕೆ ವಿತರಣೆ ನೆರವೇರಿಸುವುದಾಗಿ ಹೇಳಿದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಗಾಯಕರಿಂದ ರಸಮಂಜರಿ ಕಾರ್ಯಕ್ರಮ, ದಿನಚರಿ ಬಿಡುಗಡೆ, ಅಭಿನಂದನೆ ಇನ್ನಿತರೆ ಕಾರ್ಯಕ್ರಮಗಳಿವೆ. ಸರ್ವರಿಗೂ ಬುಧವಾರ ಮಧ್ಯಾಹ್ನ ಭೋಜನ ವ್ಯವಸ್ಥೆಯಿದ್ದು ಐದು ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆಂದರು.

ಉದ್ಘಾಟನೆ:

ಸಮಾರಂಭವನ್ನು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಸಿ.ಪಿ.ಯೋಗೇಶ್ವರ್ ಉದ್ಘಾಟಿಸುವರು. ಶಾಸಕ ಕೆ.ಎಂ.ಉದಯ್ ಅಧ್ಯಕ್ಷತೆ ವಹಿಸುವರು. ಮಾಜಿ ಸಂಸದ ಡಿ.ಕೆ.ಸುರೇಶ್ ಸಾಧಕರಿಗೆ ಸನ್ಮಾನ, ಪರಿಕರಗಳ ವಿತರಣೆ ಮಾಡಲಿರುವುದಾಗಿ ತಿಳಿಸಿದರು.

ಅತಿಥಿಗಳಾಗಿ ಮನ್ಮುಲ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ತೈಲೂರು ಚಲುವರಾಜು, ಅಣ್ಣೂರು ರಾಜೀವ್ ಇತರ ಗಣ್ಯರು ಪಾಲ್ಗೊಳ್ಳಲಿರುವುದಾಗಿ ತಿಳಿಸಿದರು.

Share this article