ಕನ್ನಡಪ್ರಭ ವಾರ್ತೆ ಕೊಪ್ಪಳ
ಲಿಖಿತ ಭರವಸೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಮರಣಾಂತ ಉಪವಾಸ ಕುಳಿತಿರುವ ಹಿರಿಯ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲರವರ ಪ್ರಾಣ ಉಳಿಸಲು ತಕ್ಷಣ ಭರವಸೆ ಈಡೇರಿಸಬೇಕು. ರೈತರ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿಗೆ ಕಾನೂನು ಜಾರಿ, ಸಾಲ ಮನ್ನಾ ಮುಂತಾದ ಆಗ್ರಹಗಳನ್ನು ಈಡೇರಿಸುವಂತೆ ಒತ್ತಾಯಿಸಿ ನ. 26 ರಿಂದ ಪಂಜಾಬ್-ಹರ್ಯಾಣ ಗಡಿಯಲ್ಲಿ ಹಿರಿಯ ರೈತ ನಾಯಕ 70 ವರ್ಷ ವಯಸ್ಸಿನ ಜಗಜಿತ್ ಸಿಂಗ್ ದಲ್ಲೇವಾಲ ಆಮರಣಾಂತ ಉಪವಾಸ ನಡೆಸುತ್ತಿದ್ದಾರೆ. ಈ ಉಪವಾಸ ಸತ್ಯಾಗ್ರಹ 48ನೇ ದಿನಕ್ಕೆ ಕಾಲಿಟ್ಟಿದೆ. ದೆಹಲಿ ರೈತ ಹೋರಾಟದ ಸಂದರ್ಭದಲ್ಲಿ ರೈತರ ಜೀವನ ಹಾಗೂ ಕೃಷಿ ರಕ್ಷಣೆಗೆ ಬಹಳ ಅಗತ್ಯವಿದ್ದ ಕರಾಳ ಕೃಷಿ ಕಾಯ್ದೆಗಳ ರದ್ದತಿ, ಕನಿಷ್ಠ ಬೆಂಬಲ ಬೆಲೆ ಖಾತರಿಗೆ ಕಾನೂನು ಸೇರಿದಂತೆ ಹಲವು ಹಕ್ಕೊತ್ತಾಯ ಮುಂದಿಟ್ಟಿತ್ತು. ಹಕ್ಕೊತ್ತಾಯಗಳನ್ನು ಈಡೇರಿಸಲು ಲಿಖಿತ ಭರವಸೆ ನೀಡಿತ್ತು. ಆದರೆ ಇದುವರೆಗೂ ಅವುಗಳನ್ನು ಈಡೇರಿಸಿಲ್ಲ. ಕೂಡಲೇ ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬಂಡಾಯ ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರು, ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಬಸವರಾಜ ಶೀಲವಂತರ್, ಕಾರ್ಮಿಕ ಸಂಘಟನೆಯ ರಾಜ್ಯ ನಾಯಕ ಕೆ,ಬಿ,ಗೋನಾಳ, ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್, ಅಲೆಮಾರಿ ಬುಡಕಟ್ಟು ಮಹಾಸಭಾ ಜಿಲ್ಲಾಧ್ಯಕ್ಷ ಸಂಜಯ್ ದಾಸ್ ಕೌಜಗೇರಿ, ರಾಮಲಿಂಗಯ್ಯ ಶಾಸ್ತ್ರಿ ಮಠ, ಸುಂಕಪ್ಪ ಗದಗ, ಪಾಮಣ್ಣ ಕೆ., ಮಲ್ಲಾಪುರ, ಆಟೋ ಸಂಘಟನೆಯ ನಾಯಕ, ಮಖಬೂಲ್ ರಾಯಚೂರು, ಶಿವಪ್ಪ ಹಡಪದ್, ಬಸವರಾಜ ಪೂಜಾರ, ರಾಜಪ್ಪ ಪೂಜಾರ್, ಫಕೀರಮ್ಮ, ಪ್ರಕಾಶ ಹೊಳೆಪ್ಪನವರ್, ಗಾಳೆಪ್ಪ ಮುಂಗೊಲಿ ಇತರರಿದ್ದರು.