ಕನ್ನಡಪ್ರಭ ವಾರ್ತೆ ಕುಶಾಲನಗರ
ಪತ್ರಿಕೆ ಮಾಧ್ಯಮಗಳು ವಸ್ತುನಿಷ್ಠ ವರದಿ ಮಾಡಿದಲ್ಲಿ ಮಾತ್ರ ಸಮಾಜ ಸುಧಾರಣೆ ಕಾಣಲು ಸಾಧ್ಯವಾಗಲಿದೆ ಎಂದು ಮಾಜಿ ಸಚಿವ ಎಂ ಪಿ ಅಪ್ಪಚ್ಚು ರಂಜನ್ ಅಭಿಪ್ರಾಯ ಪಟ್ಟರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ, ಕುಶಾಲನಗರ ಪ್ರೆಸ್ ಕ್ಲಬ್ ಟ್ರಸ್ಟ್ ಹಾಗೂ ರಾಷ್ಟ್ರೀಯ ಅಪರಾಧ ತಡೆ ಮತ್ತು ಮಾನವ ಹಕ್ಕುಗಳ ಭಾರತ ಪರಿಷತ್
ಸಹಯೋಗದೊಂದಿಗೆ ನಡೆದ ಪತ್ರಿಕಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಇಂದಿನ ಸಮಾಜದ ಪ್ರಗತಿಗೆ ಪತ್ರಿಕಾ ರಂಗದ ಪಾತ್ರ ಮಹತ್ವದ್ದಾಗಿದೆ. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗದ ಜೊತೆಗೆ ಪತ್ರಿಕಾ ರಂಗವೂ ಕೂಡ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿದೆ. ಯಾವುದೇ ಕ್ಷೇತ್ರದಲ್ಲಿ ಲೋಪ ದೋಷಗಳು ಕಂಡುಬಂದಲ್ಲಿ ಪತ್ರಿಕಾ ರಂಗ ತನ್ನ ವರದಿ ಮೂಲಕ ಇತರ ರಂಗಗಳಿಗೆ ಎಚ್ಚರಿಸುವ ಕೆಲಸ ಮಾಡುತ್ತದೆ ಎಂದು ಹೇಳಿದರು.
ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಸಮಾಜದಲ್ಲಿ ಶಿಕ್ಷಕ, ವಿಜ್ಞಾನಿ, ಪತ್ರಕರ್ತ, ಕೃಷಿಕ, ಸೈನಿಕ ಹಾಗೂ ವೈದ್ಯರ ಪಾತ್ರ ಬಹಳ ಮುಖ್ಯವಾದುದು. ಸಮಾಜದ ನಾಲ್ಕನೇ ಅಂಗವಾದ ಪತ್ರಿಕಾ ರಂಗಕ್ಕೆ ತನ್ನದೇ ಆದ ಸ್ಥಾನವಿದ್ದು, ಇದರ ಪಾವಿತ್ರ್ಯತೆಯನ್ನು ಕಾಪಾಡುವ ಮೂಲಕ ಸಮಾಜದಲ್ಲಿ ಸಾಮಾಜಿಕ ನ್ಯಾಯ ಕಾಪಾಡಬೇಕು ಎಂದು ಹೇಳಿದರು.
ಸಮಾಜದಲ್ಲಿರುವ ಸಾಮಾಜಿಕ ಅನಿಷ್ಟ ಪದ್ಧತಿಗಳು ಬದಲಾವಣೆ ಆಗದ ಹೊರತು ಸಮಾಜದ ಸಮರ್ಪಕ ಬದಲಾವಣೆ ಸಾಧ್ಯವಿಲ್ಲ ಎಂದರು.ನಿವೃತ್ತ ಪ್ರಾಂಶುಪಾಲ ಡಾ ಜೆ.ಸೋಮಣ್ಣ ಮಾತನಾಡಿ, ಪತ್ರಿಕೆಗಳು ಇಂದು ಪ್ರಚಲಿತ ವಿದ್ಯಮಾನಗಳು ಹಾಗೂ ಸಮಸ್ಯೆಗಳ ಬಗ್ಗೆ ವಿರೋಧ ಪಕ್ಷದ ರೀತಿಯಲ್ಲಿ ಕೆಲಸ ಮಾಡುವ ಮೂಲಕ ಜನರ ಸಮಸ್ಯೆಗಳ ಬೆಳಕು ಚೆಲ್ಲಿ ಸಾಮಾಜಿಕ ನ್ಯಾಯವನ್ನು ಒದಗಿಸಬೇಕು ಎಂದರು.
ರಾಷ್ಟ್ರೀಯ ಅಪರಾಧ ತಡೆ ಮತ್ತು ಮಾನವ ಹಕ್ಕುಗಳ ಭಾರತ್ ಪರಿಷತ್ ರಾಷ್ಟ್ರೀಯ ಸಂಯೋಜಕ ಜೆ ಅಲ್ಬರ್ಟ್ ಮನೋರಾಜ್ ಮಾತನಾಡಿ ಯುವ ಪೀಳಿಗೆ ಅಪರಾಧ, ಮಾನವ ಹಕ್ಕುಗಳ ಉಲ್ಲಂಘನೆ, ಭ್ರಷ್ಟಾಚಾರ ಸೇರಿದಂತೆ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.ರಾಜಕೀಯ ಹಾಗೂ ವಿವಿಧ ಚಟುವಟಿಕೆಗಳಿಗೆ ಯುವ ಸಮೂಹವನ್ನು ಕರತಂದು ದಾರಿ ತಪ್ಪಿಸುವ ಕೆಲಸವಾಗುತ್ತಿದೆ.
ದುಶ್ಚಟಗಳಿಂದ ದೂರ ಮಾಡಲು ಪೋಷಕರು ತಮ್ಮ ಮಕ್ಕಳನ್ನು ಶಿಕ್ಷಣದ ಮೂಲಕ ಉತ್ತಮ ಭವಿಷ್ಯ ರೂಪಿಸಲು ಮುಂದಾಗ ಬೇಕೆಂದು ಸಲಹೆ ನೀಡಿದ ಅವರು ಭ್ರಷ್ಟಾಚಾರ ಮುಕ್ತ ದೇಶವನ್ನಾಗಿಸಲು ಸಂಘಟನೆ ಜೊತೆ ಕೈಜೋಡಿಸಬೇಕೆಂದರು.ಪ್ರೆಸ್ ಕ್ಲಬ್ ಟ್ರಸ್ಟ್ ಅಧ್ಯಕ್ಷ ಎಚ್ ಎಂ ರಘು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕಾವೇರಿ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭ ಕುಶಾಲನಗರ ತಹಸೀಲ್ದಾರ್ ಕಿರಣ್ ಜಿ ಗೌರಯ್ಯ, ಮಾನವ ಹಕ್ಕುಗಳ ಭಾರತ್ ಪರಿಷತ್ ನ ಸಂಸ್ಥಾಪಕ ಅಧ್ಯಕ್ಷ ಡಾ ಜಾನ್ ಜೆ ಸ್ಯಾಮುವೆಲ್ ಕಿಮ್, ಪ್ರಮುಖರಾದ ಕೆ ಕೆ ಮಂಜುನಾಥ್, ನಟೇಶ್ ಗೌಡ, ಬರಮಣ್ಣ ಟಿ ಬೆಟಗೇರಿ ಮತ್ತಿತರರು ಇದ್ದರು.