ಕಾಯಕ ಶರಣರ ಜಯಂತಿ । ಕಾರಯಕದೊಂದಿಗೆ ವಚನ ಮೂಲಕ ಸಮಾಜಕ್ಕೆ ಕೊಡುಗೆ
ಕಾಯಕ ಶರಣರು ನಡೆ-ನುಡಿಗೆ ಅಂತರವಿಲ್ಲದಂತೆ ಬದುಕಿದವರು. ತಮ್ಮ ಕಾಯಕ ನಿಷ್ಟೆಯ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದ ಮಹಾನ್ ಪುರುಷ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿಯಾಗಿ ಏರ್ಪಡಿಸಿದ್ದ ಕಾಯಕ ಶರಣರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾಯಕ ಶರಣರು ಕೇವಲ ತಮ್ಮ ಉದ್ಧಾರಕ್ಕಾಗಿ ಅಲ್ಲ. ಸಮಾಜದ ಉದ್ಧಾರಕ್ಕಾಗಿ ಶ್ರಮಿಸಿದವರು. ಕಾಯಕದ ಮೂಲತತ್ವ ಅರಿತು ಕಾರ್ಯವೆಸಗಿದವರು ಈ ಕಾಯಕ ಶರಣರು. 12ನೇ ಶತಮಾನ ಸಮಾಜದಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದ ಯುಗ. ಕಾಯಕ ಶರಣು ಸೇರಿದಂತೆ ಶರಣರು ತಮ್ಮ ವೃತ್ತಿ ಜೊತೆಗೆ ಸಮಾಜ ಸುಧಾರಕರಾಗಿ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.ಕಾಯಕ ಮಾಡುತ್ತ ಅದಕ್ಕೆ ಪೂರಕವಾಗಿ ವಚನ ಬರೆಯುತ್ತ. ಜನರಿಗೆ ತಿಳುಸುತ್ತ ಹೋದ ಸಾಧಕರು. ಇಂತಹ ವಚನಗಳನ್ನು, ಶರಣರ ತತ್ವಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ವ್ಯವಸ್ಥೆ ಮಾಡಬೇಕು. ತುಳಿತಕ್ಕೊಳಗಾದ ಸಮಾಜದ ಏಳ್ಗೆಗೆ ಶ್ರಮಿಸಿದವರು, ಸಮಾಜದಲ್ಲಿನ ಅಂಕು ಡೊಂಕು ತಿದ್ದಿದವರು, ಕಾಯಕವೇ ಶ್ರೇಷ್ಠ ಎಂದು ಸಾರಿದವರು ಕಾಯಕ ಶರಣರು ಎಂದರು.
ಶಿಕಾರಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ.ಸೋಮಶೇಖರ್ ಶಿಮೊಗ್ಗಿ ಉಪನ್ಯಾಸ ನೀಡಿ, ಮಾದಾರ ಚೆನ್ನಯ್ಯ, ಮಾದಾರ ದೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಉರಿಲಿಂಗ ಪೆದ್ದಿ, ಗುಡ್ಡಯ್ಯ ಇನ್ನೂ ಮುಂತಾದ ಶರಣರು ತಳ ಸಮುದಾಯದ ಪ್ರತಿನಿಧಿಗಳು. ವಿವಿಧ ವರ್ಗಗಳಿಂದ ಬಂದ ಇವರು ವಿವಿಧ ಕಾಯಕದಲ್ಲಿ ನಿಷ್ಠರಾಗಿ ದುಡಿಯುತ್ತ, ಕಾಯಕದ ಮೂಲಕ, ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಪ್ರಯತ್ನಿಸಿದವರು ಎಂದರು.
ವಚನ ಸಾಹಿತ್ಯ ನಮ್ಮ ಸಮಾಜಕ್ಕೆ ಒಂದು ವಿಶೇಷ ಕೊಡುಗೆ. ಸ್ಥಾವರ ಸಂಸ್ಕೃತಿಯನ್ನು ಅಂದಿನ ಬಸವಾದಿ ಶರಣರು ವಿರೋಧಿಸಿದ್ದರು. ಅದನ್ನು ಇಂದು ವಿಜೃಂಭಿಸಲಾಗುತ್ತಿದೆ. ಅದರರ್ಥ ವಚನಗಳನ್ನು ಇನ್ನೂ ಅರ್ಥ ಮಾಡಿಕೊಂಡಿಲ್ಲವೆಂದು ತೋರುತ್ತದೆ ಎಂದರು.
ಉಪ ವಿಭಾಗಾಧಿಕಾರಿ ಸತ್ಯನಾರಾಯಣ ಮಾತನಾಡಿ, ಕಾಯಕ ಶರಣರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಸಮಾಜದ ಏಳ್ಗೆಯಲ್ಲಿ ಪಾಲ್ಗೊಳ್ಳೋಣ ಎಂದರು.