ಜಾತಿ, ಧರ್ಮಕ್ಕಿಂತಲೂ ಮಿಗಿಲಾಗಿದ್ದು ಸಮಾಜ ಸೇವೆ

KannadaprabhaNewsNetwork | Published : May 25, 2024 12:51 AM

ಸಾರಾಂಶ

ಮೇಲುಕೋಟೆ ರಾಮಾನುಜಾಚಾರ್ಯರ ಕರ್ಮಭೂಮಿಯಾಗಿದ್ದು, ಇಲ್ಲಿನ ಸ್ಮಾರಕಗಳು ಮತ್ತು ಕೊಳಗಳು ದೇವಾಲಯಗಳ ಸುತ್ತಮುತ್ತ ಸ್ವಚ್ಚಗೊಳಿಸಿ ಪರಿಸರ ಜಾಗೃತಿ ಮೂಡಿಸುವ ಕಾರ್ಯವನ್ನು ವಿದ್ಯಾಪ್ರಚಾರ ಸಂಘದ ರಾಷ್ಟ್ರೀಯ ಸೇವಾಯೋಜನೆಯ ಘಟಕ ಪ್ರತಿವರ್ಷ ಮಾಡಿಕೊಂಡು ಬಂದಿದೆ. ನಿಸ್ವಾರ್ಥ ಮನೋಭಾವದಿಂದ ಮಾಡುವ ಸೇವಾ ಕಾರ್ಯ ಯಶಸ್ವಿಯಾಗುತ್ತದೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಜಾತಿ, ಧರ್ಮಕ್ಕಿಂತಲೂ ಮಿಗಿಲಾದ ಸಮಾಜ ಸೇವೆಯ ಮಹತ್ವವನ್ನು ರಾಷ್ಟ್ರೀಯ ಸೇವಾಯೋಜನೆ ವಿದ್ಯಾರ್ಥಿಗಳಿಗೆ ಕಲಿಸುತ್ತದೆ ಎಂದು ಪಾಂಡವಪುರ ವಿದ್ಯಾಪ್ರಚಾರ ಸಂಘದ ಗೌರವಕಾರ್ಯದರ್ಶಿ ಕೆ.ವಿ.ಬಸವರಾಜು ಹೇಳಿದರು.

ಮೇಲುಕೋಟೆಯಲ್ಲಿ ವಿಜಯ ಪ್ರಥಮ ದರ್ಜೆ ಕಾಲೇಜು ಒಂದು ವಾರಗಳಕಾಲ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾಯೋಜನೆ ವಾರ್ಷಿಕ ವಿಶೇಷ ಶಿಬಿರಿದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ಪ್ರತಿಫಲಾಪೇಕ್ಷೆ ಹಾಗೂ ಬೇಧಭಾವವಿಲ್ಲದೆ ಸಮಾಜಸೇವೆ ಮಾಡಲು ಎನ್ಎಸ್ಎಸ್ ಶಿಬಿರದ ಮೂಲಕ ಕಲಿಯಬಹುದು ಎಂದರು.

ಮೇಲುಕೋಟೆ ರಾಮಾನುಜಾಚಾರ್ಯರ ಕರ್ಮಭೂಮಿಯಾಗಿದ್ದು, ಇಲ್ಲಿನ ಸ್ಮಾರಕಗಳು ಮತ್ತು ಕೊಳಗಳು ದೇವಾಲಯಗಳ ಸುತ್ತಮುತ್ತ ಸ್ವಚ್ಚಗೊಳಿಸಿ ಪರಿಸರ ಜಾಗೃತಿ ಮೂಡಿಸುವ ಕಾರ್ಯವನ್ನು ವಿದ್ಯಾಪ್ರಚಾರ ಸಂಘದ ರಾಷ್ಟ್ರೀಯ ಸೇವಾಯೋಜನೆಯ ಘಟಕ ಪ್ರತಿವರ್ಷ ಮಾಡಿಕೊಂಡು ಬಂದಿದೆ. ನಿಸ್ವಾರ್ಥ ಮನೋಭಾವದಿಂದ ಮಾಡುವ ಸೇವಾ ಕಾರ್ಯ ಯಶಸ್ವಿಯಾಗುತ್ತದೆ. ಇತರರಿಗೂ ದಾರಿದೀಪವಾಗುತ್ತದೆ ಎಂದರು.

ಪಾಂಡವಪುರದಲ್ಲಿ ವಿದ್ಯಾಪ್ರಚಾರ ಸಂಘ ಸ್ಥಾಪಿಸಿದ ಶಾಲಾ ಕಾಲೇಜಿನಲ್ಲಿ ಲಕ್ಷಾಂತರ ಮಂದಿ ವ್ಯಾಸಂಗ ಮಾಡಿದ್ದಾರೆ. ಗ್ರಾಮೀಣ ಪ್ರದೇಶದ ಬಡಮಕ್ಕಳ ಶಿಕ್ಷಣಕ್ಕೆ ಆಶಾದೀಪವಾಗಬೇಕೆಂಬ ಹಂಬಲದಿಂದ ಆರಂಭವಾದ ಸಂಸ್ಥೆ 75 ವಸಂತಗಳನ್ನು ಪೂರೈಸಿ ಸೇವೆ ಮಾಡುತ್ತಾ ಬಂದಿದೆ ಎಂದರು.

ಶಿಬಿರಾಧಿಕಾರಿ ಡಾ.ಎನ್.ಕೆ ವೆಂಕಟೇಗೌಡ ಮಾತನಾಡಿ, ಮೇಲುಕೋಟೆ ಮಳೆ ನೀರು ಕೊಯ್ಲಿಗೆ ರಾಜ್ಯದಲ್ಲೇ ಮಾದರಿಯಾದ ಸ್ಥಳ ಇಲ್ಲಿನ ಕಲ್ಯಾಣಿಗಳು, ಮಂಟಪಗಳು, ದೇವಾಲಯಗಳು ದಿನನಿತ್ಯ ಸಹಸ್ರಾರು ಭಕ್ತರನ್ನು ಆಕರ್ಷಿಸುತ್ತದೆ ಎಂದರು.

ರಾಷ್ಟ್ರೀಯ ಸೇವಾಯೋಜನೆಯ ಶಿಬಿರದ ವೇಳೆ ಸ್ಮಾರಕಗಳು, ಕಲ್ಯಾಣಿ ಸುತ್ತಮುತ್ತ, ಪ್ರಮುಖವಾಗಿ ಅನ್ನದಾನಭವನದ ಸುತ್ತಮುತ್ತ ಹಾಗೂ ಶತಮಾನದ ಶಾಲೆ ಆವರಣವನ್ನು ಸ್ವಚ್ಛಮಾಡಲು ಯೋಜಿಸಿದ್ದೇವೆ ಎಂದರು.

ಶಿಬಿರವು ಮೇ 29ರವರೆಗೆ ನಡೆಯಲಿದೆ. ಶಿಭಿರಾರ್ಥಿಗಳು ಸೇವಾಮನೋಭಾವನೆಯಿಂದ ಕಾರ್ಯ ಚಟುವಟಿಕೆಯಲ್ಲಿ ಭಾಗಿಯಾಗಬೇಕು. ಶಿಬಿರಕ್ಕೆ ದೇವಾಲಯ, ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್ ನಾಗರಾಗರಾಜು, ಅಹೋಬಿಲಮಠದ ಶಶಿಕುಮಾರ್, ಬಾಲಕರ ಶಾಲೆ ಮುಖ್ಯಶಿಕ್ಷಕ ಸಂತಾನಂ ಹಾಗೂ ಗ್ರಾಮಸ್ಥರು ಬೆನ್ನೆಲುಬಾಗಿದ್ದಾರೆ ಎಂದರು.

ಈ ವೇಳೆ ಎನ್ ಎಸ್ ಎಸ್ ಶಿಬಿರವನ್ನು ಮೇಲುಕೋಟೆ ದೇಗುಲದ ಇಒ ಮಹೇಶ್ ಉದ್ಘಾಟಿಸಿದರು. ವಿಜಯ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಕೃಷ್ಣಮೂರ್ತಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಉಮೇಶ್, ಉಪಪ್ರಾಂಶುಪಾಲ ರಮೇಶ್, ಖಜಾಂಚಿ ರಾಮೇಗೌಡ, ಮೇಲುಕೋಟೆ ಬಾಲಕರ ಶಾಲೆ ಮುಖ್ಯಶಿಕ್ಷಕ ಸಂತಾನರಾಮನ್ ನಿವೃತ್ತ ಮುಖ್ಯಶಿಕ್ಷಕ ಅಣ್ಣೇಗೌಡ ಮತ್ತಿತರರು ಭಾಗವಹಿಸಿದ್ದರು.

Share this article