ಹೊಸಪೇಟೆ: ಉದ್ಯಮಿಗಳು ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳುವುದು ಅಪರೂಪ. ಆದರೆ, ವಿಜಯನಗರದಲ್ಲಿ ಉದ್ಯಮಿಗಳೇ ಸೇರಿ ರೋಟರಿ ಕ್ಲಬ್‌ಅನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಜತೆಗೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವುದು ಎಲ್ಲರಿಗೂ ಅನುಕರಣೀಯವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ತಿಳಿಸಿದರು.
ನಗರದ ರೋಟರಿ ಕ್ಲಬ್‌ನಲ್ಲಿ ಮಂಗಳವಾರ ವಿ. ರಾಮಿರೆಡ್ಡಿ ರೋಟರಿ ಐಸಿಯು ಆ್ಯಂಬುಲೆನ್ಸ್ ಲೋಕಾರ್ಪಣೆಗೊಳಿಸಿ ಮಾತನಾಡಿ, ಗುತ್ತಿಗೆದಾರ ತಿರುಪತಿ ನಾಯ್ಡು ಅವರು ಹಿಂದೆ ಮುಂದೆ ಆಲೋಚಿಸದೇ ₹35 ಲಕ್ಷ ನೀಡಿ ಐಸಿಯು ಆ್ಯಂಬುಲೆನ್ಸ್ ದಾನದ ರೂಪದಲ್ಲಿ ನೀಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಹೊಸಪೇಟೆಯಲ್ಲಿ ಉದ್ಯಮಿಗಳೇ ಸೇರಿ ಆರೋಗ್ಯ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ರೋಟರಿ ಕ್ಲಬ್ ಮೂಲಕ ದಾನ ಮಾಡುತ್ತಿದ್ದಾರೆ. ಈ ಕಾರ್ಯವನ್ನು ರೋಟರಿ ಕ್ಲಬ್‌ನ ಎಲ್ಲ ಸದಸ್ಯರು ಮುಂದುವರಿಸಿಕೊಂಡು ಹೋಗಬೇಕು ಎಂದರು.ಸರ್ಕಾರದ ವಿವಿಧ ಇಲಾಖೆ ಹಾಗೂ ಜಿಲ್ಲಾಡಳಿತದ ಹಣವನ್ನು ಎಸ್‌ಬಿಐ ಬ್ಯಾಂಕ್‌ನಲ್ಲಿ ಖಾತೆಗಳನ್ನು ತೆರೆಯಲಾಗಿದೆ. ನಾವು ಬ್ಯಾಂಕ್‌ನಲ್ಲಿ ವಹಿವಾಟು ನಡೆಸುತ್ತಿರುವುದರಿಂದ ಬ್ಯಾಂಕ್‌ನ ಸಿಎಸ್‌ಆರ್ ಫಂಡ್‌ನಲ್ಲಿ ನಮ್ಮ ಜಿಲ್ಲೆ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಕೋರಿಕೊಂಡಿರುವೆ. ಸರ್ಕಾರದ ಕೆಲಸದ ಜತೆಗೆ ಬ್ಯಾಂಕುಗಳು ಹಾಗೂ ಖಾಸಗಿ ಸಂಸ್ಥೆಗಳು ಕೈಜೋಡಿಸಿದಾಗ ಅಭಿವೃದ್ಧಿ ಸಾಧ್ಯವಾಗಲಿದೆ. ವಿಜಯನಗರ ಜಿಲ್ಲೆ ಅಭಿವೃದ್ಧಿಗಾಗಿ ನಾನು ಜಿಲ್ಲಾಧಿಕಾರಿಯಾಗಿ ಕೈಜೋಡಿಸಿ ನಮಿಸಿ, ಸಿಎಸ್‌ಆರ್ ಫಂಡ್‌ನ ಅನುದಾನ ಪಡೆದರೆ ತಪ್ಪಲ್ಲ. ಇದರಿಂದ ನೂರಾರು ಬಡವರಿಗೆ ಬೆಳಕಾಗಲಿದೆ. ಜಿಲ್ಲಾಧಿಕಾರಿ ಎಂದು ಭಾವಿಸದೇ ಜಿಲ್ಲೆ ಜನರಿಗಾಗಿ ನಾನು ಕೂಡ ಸಿಎಸ್‌ಆರ್ ಫಂಡ್ ಪಡೆದು ಉದ್ಧಾರ ಮಾಡುತ್ತಿರುವೆ ಎಂದರು.
ವಿ. ರಾಮಿರೆಡ್ಡಿ ರೋಟರಿ ಐಸಿಯು ಆ್ಯಂಬುಲೆನ್ಸ್ ಅಧ್ಯಕ್ಷ ಸಯ್ಯದ್ ನಾಜಿಮುದ್ದೀನ್, ರೋಟೇರಿಯನ್ ಜಿಲ್ಲಾ ಗವರ್ನರ್ ಮಾಣಿಕ್ ಪವಾರ್, ಡಿಎಚ್‌ಒ ಡಾ. ಶಂಕರ್ ನಾಯ್ಕ, ವೈದ್ಯ ಡಾ. ಭಾಸ್ಕರ್, ಐಸಿಯು ಆ್ಯಂಬುಲೆನ್ಸ್ ದಾನಿ ತಿರುಪತಿ ನಾಯ್ಡು, ರೋಟರಿ ಕ್ಲಬ್ ಅಧ್ಯಕ್ಷ ಸತ್ಯನಾರಾಯಣ, ಕಾರ್ಯದರ್ಶಿ ದಾದಾಪೀರ್, ರೋಟರಿ ಕ್ಲಬ್‌ನ ಅಶ್ವಿನ್ ಕೋತ್ತಂಬ್ರಿ, ರಾಜೇಶ್ ಕೋರಿಶೆಟ್ಟಿ, ವಿಜಯ್ ಸಿಂದಗಿ ಮತ್ತಿತರರಿದ್ದರು.