ಸರ್ಕಾರಿ ಕನ್ನಡ ಶಾಲೆಗಳ ಉಳಿವಿಗೆ ಸಮಾಜ ಸೇವಕಿ ಕನ್ನಿಕಾ ಸೇವೆ

KannadaprabhaNewsNetwork | Published : Mar 15, 2025 1:03 AM

ಸಾರಾಂಶ

ಕನ್ನಡ ಶಾಲೆಗಳ ಉಳಿವಿಗಾಗಿ ಮಗಳು ಮಾಡುತ್ತಿರುವ ಕೆಲಸಕ್ಕೆ ತಂದೆ ಎಚ್.ಬಿ.ರಾಮಕೃಷ್ಣ ಕೂಡ ಸಾಥ್ ನೀಡಿದ್ದಾರೆ. ಮಗಳ ಬಗ್ಗೆ ಅಪಾರ ಭರವಸೆಯನ್ನಿಟ್ಟುಕೊಂಡಿರುವ ಅವರು ಕನ್ನಿಕಾ ಅವರ ಸಮಾಜಸೇವೆಯನ್ನು ಕಂಡು ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಪ್ರಸ್ತುತ ದಿನಗಳಲ್ಲಿ ಕನ್ನಡ ಶಾಲೆಗಳ ಬಲವರ್ಧನೆಗೆ ಮಹಿಳೆಯೊಬ್ಬರು ಪಣ ತೊಟ್ಟು ಸಾಧ್ಯವಾದಷ್ಟು ಸೇವೆ ಸಲ್ಲಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ನಗರದ ಕನ್ನಿಕಾ ಶಿಲ್ಪ ನವೋದಯ ತರಬೇತಿ ಸಂಸ್ಥೆಯ ಸಂಸ್ಥಾಪಕಿ ಎಚ್.ಆರ್.ಕನ್ನಿಕಾ ಸರ್ಕಾರಿ ಶಾಲೆಗಳಿಗೆ ನಾವಿನ್ಯತೆಯನ್ನು ತಂದುಕೊಡುವಲ್ಲಿ ನಿರತರಾಗಿರುವ ಮಹಿಳೆಯಾಗಿದ್ದಾರೆ. ಬಣ್ಣ ಕಳೆದುಕೊಂಡಿರುವ ಸರ್ಕಾರಿ ಶಾಲೆಗಳಿಗೆ ಹೊಸದಾಗಿ ಬಣ್ಣ ಮಾಡಿಸುವುದು. ಕಂಪ್ಯೂಟರ್‌ಗಳ ಕೊಡುಗೆ, ರಂಗಮಂದಿರ ನಿರ್ಮಾಣ, ಡಿಕ್ಷನರಿಗಳ ವಿತರಣೆ, ಕ್ರೀಡಾ ಸಾಮಗ್ರಿಗಳು, ಪಠ್ಯಪುಸ್ತಕಗಳು, ವಾಟರ್ ಫಿಲ್ಟರ್, ಧ್ವನಿವರ್ಧಕಗಳ ವಿತರಣೆ, ಪೀಠೋಪಕರಣಗಳು ಹೀಗೆ ಹಲವಾರು ರೀತಿಯಲ್ಲಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ನೆರವಾಗುತ್ತಿದ್ದಾರೆ.

ಖಾಸಗಿ ಶಾಲೆಯ ಮಕ್ಕಳಿಗೆ ಶೈಕ್ಷಣಿಕವಾಗಿ ಎಲ್ಲಾ ರೀತಿಯ ಅನುಕೂಲಗಳಿರುತ್ತವೆ. ಆದರೆ, ಹಲವಾರು ಕೊರತೆಗಳ ನಡುವೆಯೂ ಸರ್ಕಾರಿ ಶಾಲೆಯ ಮಕ್ಕಳು ಛಲ ಮತ್ತು ಆತ್ಮವಿಶ್ವಾಸದಿಂದ ವ್ಯಾಸಂಗದಲ್ಲಿ ತೊಡಗಿರುವ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅಹರ್ನಿಶಿ ಶ್ರಮಿಸುತ್ತಿದ್ದಾರೆ. ಸ್ವಂತ ಸಂಪಾದನೆಯ ಹಣದಲ್ಲಿ ಒಂದಷ್ಟು ಹಣ ಹಾಗೂ ಪ್ರಶಸ್ತಿಗಳಿಂದ ಬಂದ ಹಣದ ಪೂರ್ಣ ಪ್ರಮಾಣವನ್ನು ಸರ್ಕಾರಿ ಶಾಲಾ ಮಕ್ಕಳ ಪ್ರಗತಿಗೆ ಮೀಸಲಿಟ್ಟಿದ್ದಾರೆ.

ಪ್ರತಿ ವರ್ಷ ಸರ್ಕಾರಿ ಶಾಲೆಯ ಮಕ್ಕಳಿಗೆ ೨ ಸಾವಿರಕ್ಕೂ ಹೆಚ್ಚು ನೋಟ್‌ಪುಸ್ತಕಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಂಕ ವೀರ ಪ್ರಶಸ್ತಿಯನ್ನು ನೀಡಿ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಶಾಲಾ ಮಕ್ಕಳ ಬೆಳವಣಿಗೆಗೆ ಪೂರಕವಾದ ವ್ಯಕ್ತಿತ್ವ ವಿಕಸನ ತರಬೇತಿಯನ್ನು ನೀಡುತ್ತಿದ್ದಾರೆ.

ಸೌಲಭ್ಯಗಳ ಕೊರತೆ ಎದುರಿಸುತ್ತಿರುವ ಸರ್ಕಾರಿ ಶಾಲೆಗಳ ಶಿಕ್ಷಕರು ಬಂದು ಮನವಿ ಮಾಡಿದಲ್ಲಿ ಅದಕ್ಕೆ ಪೂರಕವಾಗಿ ಸ್ಪಂದಿಸುತ್ತಿದ್ದಾರೆ. ಹುಲ್ಲುಕೆರೆ ಕೊಪ್ಪಲು, ಹುಲಿವಾನದ ಜನತಾ ಕಾಲೋನಿ, ಚಿಕ್ಕಮಂಡ್ಯ ಸರ್ಕಾರಿ ಶಾಲೆ ಸೇರಿದಂತೆ ಹಲವಾರು ಶಾಲೆಗಳಲ್ಲಿರುವ ಕೊರತೆಗಳನ್ನು ಮನಗಂಡು ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗುವಂತಹ ಸಾಮಗ್ರಿಗಳು, ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ.

ಚಿಕ್ಕಮಂಡ್ಯ ಶಾಲೆಯವರು ರಂಗಮಂದಿರ ನಿರ್ಮಿಸಬೇಕೆಂಬ ಮನವಿಯ ಮೇರೆಗೆ ಈಗ ಅಲ್ಲೊಂದು ರಂಗಮಂದಿರ ತಲೆಎತ್ತುತ್ತಿದೆ. ಓದಲು ಶಾಲೆಗೆ ಬರುವ ಮಕ್ಕಳಿಗೆ ಸೌಲಭ್ಯಗಳು ಉತ್ತಮವಾಗಿ ಸಿಗಬೇಕು. ಸೌಲಭ್ಯಗಳು ಸಿಕ್ಕಾಗ ಮಕ್ಕಳು ಅವುಗಳನ್ನು ಬಳಸಿಕೊಂಡು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ಖಾಸಗಿ ಶಾಲೆಯ ಮಕ್ಕಳಿಗೆ ಸರಿಸಮನಾಗಿ ಸರ್ಕಾರಿ ಶಾಲೆಯ ಮಕ್ಕಳು ಪೈಪೋಟಿ ನೀಡುವುದಕ್ಕೆ ಸಜ್ಜುಗೊಳಿಸುವ ಅವಶ್ಯಕತೆ ಇರುವುದರಿಂದ ಎಚ್.ಆರ್.ಕನ್ನಿಕಾ ಅವರು ಸರ್ಕಾರಿ ಶಾಲೆಗಳಲ್ಲಿರುವ ಕೊರತೆಗಳನ್ನು ದೂರ ಮಾಡುವ ದೃಢಸಂಕಲ್ಪ ಮಾಡಿದ್ದಾರೆ. ಇವರ ಸಮಾಜಸೇವೆಗೆ ಎರಡು ಬಾರಿ ರಾಜ್ಯಮಟ್ಟದ ಪ್ರಶಸ್ತಿ ದೊರಕಿದೆ.

ಕನ್ನಡ ಶಾಲೆಗಳ ಉಳಿವಿಗಾಗಿ ಮಗಳು ಮಾಡುತ್ತಿರುವ ಕೆಲಸಕ್ಕೆ ತಂದೆ ಎಚ್.ಬಿ.ರಾಮಕೃಷ್ಣ ಕೂಡ ಸಾಥ್ ನೀಡಿದ್ದಾರೆ. ಮಗಳ ಬಗ್ಗೆ ಅಪಾರ ಭರವಸೆಯನ್ನಿಟ್ಟುಕೊಂಡಿರುವ ಅವರು ಕನ್ನಿಕಾ ಅವರ ಸಮಾಜಸೇವೆಯನ್ನು ಕಂಡು ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿದ್ದಾರೆ.

--

‘ಸರ್ಕಾರಿ ಶಾಲೆಗಳಿಗೆ ಸೇರುವ ಮಕ್ಕಳೆಲ್ಲರೂ ಬಹುತೇಕ ಬಡಮಕ್ಕಳೇ ಆಗಿರುತ್ತಾರೆ. ಶಾಲೆಯಲ್ಲಿರುವ ಕೊರತೆಗಳ ಜೊತೆಗೆ ಕುಟುಂಬದಲ್ಲಿರುವ ತೊಡಕುಗಳನ್ನು ಸರಿದೂಗಿಸಿಕೊಂಡು ವ್ಯಾಸಂಗ ಮಾಡುತ್ತಿರುತ್ತಾರೆ. ಅಂತಹ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಅನುಕೂಲವಾಗುವಂತಹ ಸೌಲಭ್ಯಗಳನ್ನು ಒದಗಿಸಿಕೊಟ್ಟಾಗ ಸರ್ಕಾರಿ ಕನ್ನಡ ಶಾಲೆಗಳ ಉಳಿವು ಸಾಧ್ಯವಾಗುತ್ತದೆ.’- ಎಚ್.ಆರ್.ಕನ್ನಿಕಾ, ಸಂಸ್ಥಾಪಕರು, ಕನ್ನಿಕಾ ಶಿಲ್ಪ ನವೋದಯ ಶಾಲೆ

Share this article