ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗಾಗಿ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಗ್ಯಾರಂಟಿ ಯೋಜನೆಗಳು ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗಿದ್ದು, ಮಹಿಳೆಯರು ಕಾಂಗ್ರೆಸ್ ಪಕ್ಷವನ್ನು ಸದಾ ಬೆಂಬಲಿಸಬೇಕು ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸೌಮ್ಯ ರೆಡ್ಡಿ ಕರೆ ನೀಡಿದರು.ಪಟ್ಟಣದ ಹುಡ್ಕೋ ಬಡಾವಣೆಯ ಟಾಪ್ ಇನ್ ಟೌನ್ ಮಂಗಲ ಭವನದಲ್ಲಿ ಮಹಿಳಾ ಕಾಂಗ್ರೆಸ್ ತಾಲೂಕು ಘಟಕದಿಂದ ಆಯೋಜಿಸಿದ್ದ ಮಹಿಳಾ ಕಾಂಗ್ರೆಸ್ ಘಟಕದ ನೂತನ ಸದಸ್ಯರ ಪದಗ್ರಹಣ ಹಾಗೂ ಶಕ್ತಿ ಸಮಾವೇಶ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ಸ್ತ್ರೀ ಎಂಬುದು ಸಮಾಜದ ಬಹುದೊಡ್ಡ ಶಕ್ತಿಯಾಗಿದ್ದು, ಈ ಶಕ್ತಿಯಿಂದ ಸಮಾಜದ ಹಾಗೂ ಕುಟುಂಬದ ಏಳಿಗೆ ಸಾಧ್ಯ. ಸ್ತ್ರೀಯರು ಕೇವಲ ಅಡುಗೆ ಮನೆಗೆ ಸೀಮಿತವಾಗಿಲ್ಲ. ಅವರು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಪುರುಷನಷ್ಟೇ ಸಮಾನವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರೆ ಕಾಂಗ್ರೆಸ್ ಸರ್ಕಾರದ ಪಂಚಗ್ಯಾರಂಟಿ ಯೋಜನೆಗಳೇ ಬಹುಮುಖ್ಯ ಪಾತ್ರ ವಹಿಸುತ್ತವೆ. ಮಹಿಳೆಯರು ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎನ್ನುವ ಉದ್ದೇಶದಿಂದ ರಾಜ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರು ಸ್ವಾವಲಂಬಿಗಳಾದಾಗ ಕುಟುಂಬ, ಸಮಾಜದ ಆರ್ಥಿಕ ಶಕ್ತಿ ಹೆಚ್ಚುತ್ತದೆ. ಕುಟುಂಬ ನಿರ್ವಹಣೆಗೆ 2 ಸಾವಿರ ನೀಡುತ್ತಿದೆ. ಜೊತೆಗೆ ಅನ್ನಭಾಗ್ಯ ಯೋಜನೆಯೂ ಬಡವರ ಹಸಿವು ನೀಗಿಸುವ ಮೂಲಕ ಉತ್ತಮ ಯೋಜನೆಯಾಗಿದೆ ಎಂದು ಹೇಳಿದರು.
ಶಾಸಕ ಹಾಗೂ ಕೆಎಸ್‌ಡಿಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಮಾತನಾಡಿ, ವಿರೋಧ ಪಕ್ಷದವರಿಗೆ ಯಾವುದೇ ಉದ್ಯೋಗವಿಲ್ಲದೇ ನಮ್ಮ ಸರ್ಕಾರದ ಪಂಚ ಗ್ಯಾರಂಟಿಗಳ ಟೀಕೆ ಮಾಡುತ್ತಿದ್ದಾರೆ. ಇವರಿಗೆ ಜ್ಞಾನವಿದೆಯೇ ಎಂಬುದೇ ಅರ್ಥವಾಗುತ್ತಿಲ್ಲ. ಕಳೇದ ಒಂದು ತಿಂಗಳ ಹಿಂದೆ ಕೆಲ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳನ್ನೇ ಘೋಷಣೆ ಮಾಡುದ್ದಾರೆ. ಇಂತವರಿಂದ ಕಾಂಗ್ರೆಸ್ ಪಾಠ ಕಲಿಯಬೇಕಿಲ್ಲ. ಜನರು ವಿರೋಧ ಪಕ್ಷದವರ ಟೀಕೆಗಳಿಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡುತ್ತಿದ್ದ ಗೌರವಧನವನ್ನು ₹ 8 ಸಾವಿರದಿಂದ 12 ಸಾವಿರಕ್ಕೆ, ಆಶಾ ಕಾರ್ಯಕರ್ತೆಯರಿಗೆ ನೀಡುತ್ತಿದ್ದ ಗೌರವ ಧನ ₹ 5 ಸಾವಿರದಿಂದ 8 ಸಾವಿರಕ್ಕೆ ಹೆಚ್ಚಿಸಲಾಗಿದೆ ಎಂದರು.ಮತ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಹೆಚ್ಚಿದೆ. ಎಲ್ಲರೂ ಒಂದಾದರೆ ಒಬ್ಬ ಮಹಿಳಾ ಶಾಸಕರನ್ನಾಗಿ ಮಾಡಬಹುದು. ಅಷ್ಟೊಂದು ಶಕ್ತಿ ತಮ್ಮಲ್ಲಿದೆ. ಮುಂದಿನ ದಿನಗಳಲ್ಲಿ ಜಿಪಂ, ತಾಪಂ ಚುನಾವಣೆಗಳು ಸಮೀಪಿಸುತ್ತಿವೆ. ಈ ವೇಳೆ ವಿದ್ಯಾವಂತ ಮಹಿಳೆಯರನ್ನೇ ಕಣಕ್ಕಿಳಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.ಈ ವೇಳೆ ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಲ್ಲವಿ ನಾಡಗೌಡ, ಗ್ಯಾರಂಟಿ ಯೋಜನೆಗಳ ಸಮಿತಿ ತಾಲೂಕು ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ಮಹಿಳಾ ಬ್ಲಾಕ್ ಅಧ್ಯಕ್ಷೆ ಶೋಭಾ ಶಳ್ಳಗಿ, ಬಾಪೂರಾಯ ದೇಸಾಯಿ, ಪುರಸಭೆ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ನಾಲತವಾಡ ಪಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಇಲಕಲ್ಲ, ವಿದ್ಯಾ ತಡಸದ, ಭುವನ ಪಾಟೀಲ, ಸರಸ್ವತಿ ಪೀರಾಪೂರ, ಕವಿತಾ ದಡ್ಡಿ, ಸರಿತಾ ನಾಯಕ, ನೀಲಮ್ಮ ಪಾಟೀಲ, ಶೋಭಾ ಕಟ್ಟಿಮನಿ ಸೇರಿ ಹಲವರು ಇದ್ದರು. ಅಕ್ಷತಾ ಚಲವಾದಿ ನಿರೂಪಿಸಿದರು, ಸುಜಾತಾ ಶಿಂಧೆ ವಂದಿಸಿದರು, ವೈ.ಎಚ್.ವಿಜಯಕರ ಪ್ರಸ್ಥಾವಿಕವಾಗಿ ಮಾತನಾಡಿದರು.ಕೋಟ್‌ಶಾಸಕರಾದ ಅಪ್ಪಾಜಿ ನಾಡಗೌಡರು ಈ ಕ್ಷೇತ್ರದಲ್ಲಿ ಜನಪರ ಆಡಳಿತ ನೀಡುವಲ್ಲಿ ಶ್ರಮಿಸುತ್ತಿದ್ದಾರೆ. ಅವರಂತೆ ಅವರ ಪುತ್ರಿ ಪಲ್ಲವಿ ನಾಡಗೌಡ ಕೂಡ ವಿದ್ಯಾವಂತೆ, ಪದವೀಧರೆ ಮಾತ್ರವಲ್ಲದೇ ಸಮಾಜಮುಖಿ ನಾಯಕಿಯಾಗಿ ಬೆಳೆದು ನಿಂತಿದ್ದಾರೆ. ಅವರನ್ನು ಕೆಪಿಸಿಸಿ ಮಹಿಳಾ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಶೇ.33ರಷ್ಟು ಮಹಿಳಾ ಮೀಸಲಾತಿ ಅನುಷ್ಠಾನಗೊಂಡರೆ ಹತ್ತಿರದ ಮತಕ್ಷೇತ್ರದಲ್ಲಿ ಶಾಸಕ ಸ್ಥಾನಕ್ಕಾಗಿ ಪ್ರತಿನಿಧಿಸಿ ಜಯಭೇರಿ ಸಾಧಿಸಿ ತಂದೆಯೊಂದಿಗೆ ಪಲ್ಲವಿ ನಾಡಗೌಡ ಕೂಡ ವಿಧಾನಸಭೆ ಪ್ರವೇಶಿಸುವ ಮೂಲಕ ಜನಪ್ರತಿನಿಧಿಯಾಗಲಿ.ಸೌಮ್ಯ ರೆಡ್ಡಿ, ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ