ಆಧುನಿಕ ಸಿನಿಮಾಗಳಲ್ಲಿ ಸಮಾಜಕ್ಕೆ ಮಾದರಿ ನಾಯಕರಿಲ್ಲ: ಕುಲಸಚಿವ ಪ್ರೊ.ಎಸ್.ಎಂ.ಗೋಪಿನಾಥ್

KannadaprabhaNewsNetwork |  
Published : Sep 18, 2024, 01:57 AM IST
ಪೋಟೋ: 17ಎಸ್‌ಎಂಜಿಕೆಪಿ05ಶಂಕರಘಟ್ಟದಲ್ಲಿರುವ ಕುವೆಂಪು ವಿವಿ ವಿವಿಯ ಬಸವ ಸಭಾ ಭವನದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸೆ.21ರವರೆಗೆ ಆಯೋಜಿಸಿರುವ15ನೇ ಸಹ್ಯಾದ್ರಿ ಚಲನಚಿತ್ರೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಕುವೆಂಪು ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ.ಎಸ್.ಎಂ. ಗೋಪಿನಾಥ್ ಮಾತನಾಡಿದರು. | Kannada Prabha

ಸಾರಾಂಶ

ಶಂಕರಘಟ್ಟದಲ್ಲಿರುವ ಕುವೆಂಪು ವಿವಿ ವಿವಿಯ ಬಸವ ಸಭಾ ಭವನದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸೆ.21ರವರೆಗೆ 15ನೇ ಸಹ್ಯಾದ್ರಿ ಚಲನಚಿತ್ರೋತ್ಸವ ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಮಾಜಕ್ಕೆ ಮಾದರಿಯಾಗಬಲ್ಲ ಪಾತ್ರಗಳ ಕೊರತೆಯೇ ಆಧುನಿಕ ಸಿನಿಮಾಗಳ ಪ್ರಮುಖ ಸಮಸ್ಯೆಯಾಗಿದೆ ಎಂದು ಕುವೆಂಪು ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ.ಎಸ್.ಎಂ.ಗೋಪಿನಾಥ್ ಅಭಿಪ್ರಾಯಪಟ್ಟರು.

ಕುವೆಂಪು ವಿಶ್ವವಿದ್ಯಾಲಯದ ವಿವಿಯ ಬಸವ ಸಭಾಭವನದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸೆ.21ರವರೆಗೆ ಆಯೋಜಿಸಿರುವ 15ನೇ ಸಹ್ಯಾದ್ರಿ ಚಲನಚಿತ್ರೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ‘ನಿರಾಶ್ರಿತರ ಬಿಕ್ಕಟ್ಟು’ ವಿಷಯ ಕುರಿತು ಅವರು ಮಾತನಾಡಿದರು.

ನಾಯಕನೇ ಖಳನಾಯಕ ಆಗಿರುವ, ಅತೀ ಹಿಂಸೆ, ಕೊಳ್ಳೆ ಹೊಡೆಯುವಿಕೆ ಅಂತಹ ಪಾತ್ರಗಳನ್ನು, ಸಿನಿಮಾಗಳನ್ನು ನಾವಿಂದು ಕಾಣುತ್ತಿದ್ದೇವೆ. ಪ್ಯಾನ್ ಇಂಡಿಯಾ ಸಿನಿಮಾಗಳು ಎಂದು ಹೇಳಿಕೊಂಡು ಬರುತ್ತಿರುವ ಎಲ್ಲವುಗಳಲ್ಲಿಯೂ ಇದೇ ಕಥಾನಕವಿದೆ. ಯುವಜನರು ಇವುಗಳನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕೆ, ಮಾದರಿ ಎಂದುಕೊಳ್ಳಬೇಕೆ ಎಂದು ಕಳವಳ ವ್ಯಕ್ತಪಡಿಸಿದರು.

ಶಿವಮೊಗ್ಗ ಚಿತ್ರ ಸಮಾಜ ಸಿನಿಮೊಗೆಯ ಸಂಚಾಲಕ ಮತ್ತು ಪತ್ರಕರ್ತ ಎಚ್‌.ಯು.ವೈದ್ಯನಾಥ ಚಿತ್ರೋತ್ಸವ ಉದ್ಘಾಟಿಸಿ ಮಾತನಾಡಿ, ಇಂದಿನ ಸಿನಿಮಾಗಳಲ್ಲಿ ನಾಯಕ - ನಾಯಕಿಯರ ವಿಜೃಂಭಣೆ ಅಧಿಕಗೊಂಡು ಕಥೆ ಗೌಣವಾಗುತ್ತಿದೆ. ಉತ್ತಮ ಬದುಕಿಗೆ ಬೇಕಾದ ಆದರ್ಶಗಳನ್ನು ಬದಿಗೆ ಸರಿಸಲಾಗುತ್ತಿದೆ. ಸಿನಿಮಾ ರಂಗವು ಉದ್ಯಮ ಆದ ನಂತರ ಈ ಬಿಕ್ಕಟ್ಟುಗಳು ಹೆಚ್ಚಾಗಿದ್ದು, ಸಾಮಾಜಿಕ ಸಂದೇಶ - ಕಾಳಜಿಗಿಂತ, ಲಾಭದ ಉದ್ದೇಶಗಳು ಮುಖ್ಯವಾಗಿರುವುದು ಇದಕ್ಕೆ ಕಾರಣ ಎಂದರು.

ಸಿನಿಮಾವು ಮನರಂಜನೆಯ ಸರಕು ಮಾತ್ರವಲ್ಲ. ಅದು ಸಾಮಾಜಿಕ - ಸಾಂಸ್ಕೃತಿಕ ಬದುಕನ್ನು ದಾಖಲಿಸುವ ಮಾಧ್ಯಮ ರೂಪ. ಅದನ್ನು ಕೇವಲ ಮೋಜಿಗಾಗಿ ನೋಡದೆ, ಅಧ್ಯಯನ ದೃಷ್ಟಿಯಿಂದ ಕಾಣಬೇಕು. ಮೇಲ್ನೋಟದ ಆಚರಣೆ ತೋರಿಕೆಗಿಂತ, ಪಾತ್ರಗಳ ಅನುಭಾವ, ಬದುಕಿನ ಆಳ, ತುಮುಲಗಳನ್ನು ದಾಟಿಸಿಕೊಳ್ಳುವ ಪ್ರಯತ್ನದಲ್ಲಿ ಸಿನಿಮಾ ವೀಕ್ಷಣೆ ಮಾಡಿ ಎಂದು ಸಲಹೆ ನೀಡಿದರು.

ಉದ್ಘಾಟನಾ ಸಮಾರಂಭದಲ್ಲಿ ವಿಭಾಗದ ಅಧ್ಯಕ್ಷರಾದ ಪ್ರೊ.ಎಂ.ಆರ್. ಸತ್ಯಪ್ರಕಾಶ್‌, ಅಧ್ಯಾಪಕರಾದ ಪ್ರೊ. ವರ್ಗೀಸ್, ಪ್ರೊ. ಸತೀಶ್ ಕುಮಾರ್ ಉಪಸ್ಥಿತರಿದ್ದರು. ಸಿನಿಮೋತ್ಸವದಲ್ಲಿ ವಿವಿಧ ವಿಭಾಗಗಳ ನೂರಕ್ಕೂ ಅಧಿಕ ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು, ಅಧ್ಯಾಪಕರು, ಸಿಬ್ಬಂದಿ ವರ್ಗ ಹಾಜರಿದ್ದರು.‘ನಿರಾಶ್ರಿತರ ಬಿಕ್ಕಟ್ಟು’ ಬಗ್ಗೆ ಸಿನಿಮಾ ಪ್ರದರ್ಶನ

ಕುವೆಂಪು ವಿವಿಯ ಪತ್ರಿಕೋದ್ಯಮ ವಿಭಾಗ ಪ್ರತಿ ವರ್ಷವೂ ಸಿನಿಮೋತ್ಸವವನ್ನು ಆಚರಿಸುತ್ತಿದ್ದು, ಈ ಬಾರಿ 15ನೇ ಸಹ್ಯಾದ್ರಿ ಸಿನಿಮೋತ್ಸವವನ್ನು‘ನಿರಾಶ್ರಿತರ ಬಿಕ್ಕಟ್ಟು’ ವಿಷಯ ಕುರಿತು ಇಂದಿನಿಂದ 5 ದಿನಗಳ ಕಾಲ ವಿವಿಯ ಬಸವ ಸಭಾ ಭವನದಲ್ಲಿ ಆಯೋಜಿಸಿದೆ. ಪ್ರತಿದಿನ ಮಧ್ಯಾಹ್ನ 3.45 ರಿಂದ ಸಿನಿಮಾ ಪ್ರದರ್ಶನ ಮಾಡಲಾಗುತ್ತಿದೆ.

ಸೆಪ್ಟೆಂಬರ್ 17ರಿಂದ 21ರ ವರೆಗೆ ನಡೆಯುವ ಚಲನಚಿತ್ರೋತ್ಸವದಲ್ಲಿ ಈ ಬಾರಿ ಇರಾನಿಯನ್ ಸಿನಿಮಾ ‘ದ ಸೈಕ್ಲಿಸ್ಟ್’, ಆಫ್ಘನ್ ನಿರಾಶ್ರಿತರ ಕಥೆಯುಳ್ಳ ಚಿತ್ರ ‘ಕೈಟ್ ರನ್ನರ್’, ಇಂಗ್ಲಿಷ್ ಸಿನಿಮಾ ‘ನೇಮ್ ಸೇಕ್’, ಬೆಂಗಾಳಿ ಸಿನಿಮಾ ‘ಸುಬರ್ಣ ರೇಖ’, ಸಿರಿಯನ್ ನಿರಾಶ್ರಿತರ ‘ದಿ ಸ್ವಿಮ್ಮರ್ಸ್’ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಈ ಹಿಂದಿನ ವರ್ಷಗಳಲ್ಲಿ ಚಾರ್ಲಿ ಚಾಪ್ಲಿನ್, ನಾಗರಿಕ ಹಕ್ಕುಗಳು, ಯುದ್ಧ, ಮುಗ್ಧ ಮಕ್ಕಳ ನೋಟ ಸೇರಿದಂತೆ ವಿವಿಧ ವಿಷಯಗಳ ಆಧಾರಿತ ಚಲನಚಿತ್ರ ಗಳನ್ನು ಪ್ರದರ್ಶಿಸಲಾಗಿದೆ. ವಿವಿಧ ಭಾಷೆಗಳ ಚಲನಚಿತ್ರಗಳನ್ನು ಪ್ರದರ್ಶಿಸುವ ಈ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ ಪಾಲ್ಗೊಳ್ಳುವರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಟ್ಟೂರಲ್ಲಿ ನೀರಿದ್ದರೂ ಬಳಕೆಗೆ ತೀವ್ರ ಬರ
ಅಡುಗೆ ಅನಿಲ ಕೃತಕ ಅಭಾವ: ಮಾರ್ಕ್ಸ್‌ವಾದಿ ಭಾರತ ಕಮ್ಯುನಿಸ್ಟ್ ಪಕ್ಷದಿಂದ ಪ್ರತಿಭಟನೆ