- ಗಾಯಗೊಂಡ ವಕೀಲ ರುದ್ರಗೌಡ ಮನೆಗೆ ಭೇಟಿ ವೇಳೆ ಜಯಮೃತ್ಯುಂಜಯ ಶ್ರೀ ಹೇಳಿಕೆ - - - ಕನ್ನಡಪ್ರಭ ವಾರ್ತೆ ಹರಿಹರ ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಪೊಲೀಸ್ ಇಲಾಖೆಯವರು ಅನುಚಿತ ವರ್ತನೆಯನ್ನು ಮಾಡಿದ್ದಾರೆ. ಹೋರಾಟಗಾರರ ಮೇಲೆ ಅಮಾನುಷವಾಗಿ ನಡೆದುಕೊಂಡ ಕಹಿ ಘಟನೆಯಿಂದ ಸಮಾಜದ ಜನರಿಗೆ ಬಹಳಷ್ಟು ನೋವು ತಂದಿದೆ ಎಂದು ಪಂಚಮಸಾಲಿ ಸಮಾಜದ ಗುರುಪೀಠಾಧ್ಯಕ್ಷ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ನುಡಿದರು.
ಬೆಳಗಾವಿ ನಗರದ ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ಸಮಯದಲ್ಲಿ ಪೊಲೀಸ್ ಲಾಠಿ ಚಾರ್ಜ್ ವೇಳೆ ನಗರದ ವಕೀಲ ರುದ್ರಗೌಡ ಪೆಟ್ಟು ತಿಂದ ಗಾಯಗೊಂಡಿದ್ದರು. ಈ ಹಿನ್ನೆಲೆ ಮಂಗಳವಾರ ಸಂಜೆ ಶ್ರೀಗಳು ಅವರ ಮನೆಗೆ ಭೇಟಿಕೊಟ್ಟು, ಅವರಿಗೆ ಆತ್ಮಸ್ಥೈರ್ಯ ಮೂಡಿಸಿ, ಮಾತನಾಡಿದರು.ಪೊಲೀಸರು ಯಾವುದೇ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡುವಾಗ ಕಾನೂನಿನ ನಿಬಂಧನೆಗಳು ಬಹಳಷ್ಟು ಇರುತ್ತವೆ. ಹೋರಾಟ ಮಾಡುವುದನ್ನು ತಹಬದಿಗೆ ತರಬೇಕಾದರೆ ಮೊದಲು ವಾರ್ನ್ ಮಾಡಬೇಕು, ಅನಂತರ ಜಲಫಿರಂಗಿ, ಅಶ್ರುವಾಯು ಪ್ರಯೋಗ ಮಾಡಬೇಕು. ಅದಕ್ಕೂ ಬಗ್ಗದೇ ಇದ್ದಾಗ ಮೈಕ್‌ನಲ್ಲಿ ಪ್ರಚಾರ ಮಾಡಿ, ಲಘು ಲಾಠಿ ಪ್ರಹಾರ ಮಾಡಬೇಕು. ಅದನ್ನೂ ಮೀರಿ ಹೋರಾಟಗಾರರು ನಡೆದುಕೊಂಡಾಗಲೇ ಲಾಠಿ ಚಾರ್ಜ್ ಮಾಡಬೇಕು ಎಂಬ ಮಾನದಂಡಗಳು ಕಾನೂನಿನಲ್ಲಿ ಇವೆ. ಆದರೆ, ಅವುಗಳನ್ನು ಪರಿಗಣಿಸದೇ ದಿಢೀರ್ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ ಎಂದರು.
ಅಂದಿನ ಘಟನೆ ಬಗ್ಗೆ ಇದುವರೆಗೂ ಸರ್ಕಾರ, ಸಮಾಜದ ಜನರಲ್ಲಿ ಕ್ಷಮಾಪಣೆ ಕೇಳಿಲ್ಲ. ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ, ಅವರ ಮೇಲೆ ಕಾನೂನು ಕ್ರಮಗಳನ್ನು ಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ಮೀಸಲಾತಿ ಹೋರಾಟ ವಿಚಾರಗಳು ಬಂದಾಗ ಇದಕ್ಕಿಂತ ಹೆಚ್ಚಿನದಾಗಿ ನಮ್ಮ ಹೋರಾಟಕ್ಕೆ ಬೆಂಬಲವಾಗಿ ನಿಲ್ಲುತ್ತಾರೆ ಎಂಬ ವಿಶ್ವಾಸವನ್ನು ಹೊಂದಿರುವುದಾಗಿ ಶ್ರೀಗಳು ಹೇಳಿದರು.ಪ್ರತ್ಯೇಕ ದೂರು ದಾಖಲಿಸಿ:
ಲಾಠಿ ಪ್ರಹಾರದಿಂದ ಗಾಯಗೊಂಡವರು ಧೃತಿಗೆಡುವಂತ ಅವಶ್ಯಕತೆ ಇಲ್ಲ. ನಿಮ್ಮೊಂದಿಗೆ ನಾವಿದ್ದೇವೆ. ಇಡೀ ಪಂಚಮಸಾಲಿ ಸಮಾಜ ಇದೆ. ಸಮಾಜ ದಿನದಿಂದ ದಿನಕ್ಕೆ ಇನ್ನಷ್ಟು ಗಟ್ಟಿ ಆಗುತ್ತಿದೆ. ಇದರಿಂದಾಗಿ ಸಂಘಟನೆಯ ಶಕ್ತಿ ಇಮ್ಮಡಿಯಾಗಿದೆ. ನಿಮಗೆ ಆಗಿರುವ ಗಾಯದಿಂದಾಗಿ ಸ್ವಾಭಿಮಾನದಿಂದ ದೃಷ್ಟಿಯಿಂದ ದೂರು ದಾಖಲಿಸದಿದ್ದರೆ ಹೋರಾಟದ ದಿಕ್ಕು ತಪ್ಪುತ್ತದೆ. ಹಾಗಾಗಿ ಪ್ರತ್ಯೇಕ ದೂರು ದಾಖಲಿಸಿ ನ್ಯಾಯಕ್ಕಾಗಿ ಹೋರಾಡುವ ಮನೋಭಾವ ಇನ್ನಷ್ಟು ಬಲಪಡಿಸಿಕೊಳ್ಳಲು ಮುಂದಾಗುವಂತೆ ತಿಳಿಸಿದರು.ಈ ಸಂದರ್ಭ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಡಿ.ಜಿ. ಶಿವಾನಂದಪ್ಪ, ಸಮಾಜದ ಜಿಲ್ಲಾ ಅಧ್ಯಕ್ಷ ಅಶೋಕ ಗೊಪನಾಳ, ರಾಜ್ಯ ಯುವ ಘಟಕದ ಕಾರ್ಯದರ್ಶಿ ಬಕ್ಕೆಶ್, ವಕೀಲರಾದ ಬಸವರಾಜ್ ಓಂಕಾರಿ, ಬಸವರಾಜ್ ಹುಲಿಗಿನಹೊಳೆ, ನಾಗರಾಜ್ ಹಲವಾಗಲು, ಜಿ.ಬಿ. ರಮೇಶ್, ಬಿ.ಸಿ. ಪ್ರಕಾಶ್, ಬಿ.ಎಸ್. ಗಣೇಶ ಎಂ.ಸಿ. ಹನುಮಂತ ಗೌಡ, ಪಿಎಸ್‍ಐ ವಿಜಯಕುಮಾರ್, ಪೊಲೀಸ್ ಸಿಬ್ಬಂದಿ ಇತರರು ಹಾಜರಿದ್ದರು.
- - -ಕೋಟ್ ಅಂದಿನ ಘಟನೆ ತಾತ್ಕಾಲಿಕವಾಗಿ ಮನಸ್ಸಿಗೆ ಘಾಸಿ ಆಯಿತು. ಆದರೆ, ಗುರುಗಳು ಮನೆಗೆ ಆಗಮಿಸಿ ನಮಗೆ ಮತ್ತು ನಮ್ಮ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ. ನಮಗೆ ಆತ್ಮಸ್ಥೈರ್ಯ ಮೂಡಿಸಿದ್ದಾರೆ. ಸಮಾಜಕ್ಕಾಗಿ ನಾನಷ್ಟೇ ಅಲ್ಲದೇ, ನನ್ನ ಸಹಪಾಠಿಗಳು ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳವಂತೆ ಮಾಡಲಿಕ್ಕೆ ಪ್ರೇರಣೆಯಾಗಿದೆ
- ಪಿ.ರುದ್ರಗೌಡ, ವಕೀಲ- - - -25ಎಚ್‍ಆರ್‍ಆರ್01, 01ಎ:
ಬೆಳಗಾವಿಯಲ್ಲಿ ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ಸಮಯದಲ್ಲಿ ಲಾಠಿ ಚಾರ್ಜ್ ವೇಳೆ ಗಾಯಗೊಂಡಿದ್ದ ಹರಿಹರದ ವಕೀಲ ರುದ್ರಗೌಡ ಅವರ ಮನೆಗೆ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.