ವೇಗವಾಗಿ ಸಾಗುತ್ತಿದೆ ಸಮಾಜ: ಎನ್ ಕೆ ಭಟ್ಟ ಅಗ್ಗಾಶಿಕುಂಬ್ರಿ

KannadaprabhaNewsNetwork | Updated : Jan 09 2024, 04:59 PM IST

ಸಾರಾಂಶ

ಪ್ರತಿಯೊಬ್ಬರಲ್ಲಿಯೂ ಪ್ರತಿಭೆ ಹುದುಗಿದ್ದರೂ, ಅದು ಭಿನ್ನವಾಗಿರುತ್ತದೆ. ಅದಕ್ಕನುಸಾರ ಸಾಧನೆಯ ದಾರಿಯಲ್ಲಿ ಸಾಗಿದಾಗ ಎಲ್ಲರೂ ಶ್ರೇಷ್ಠ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯ ಎಂದು ಟಿಎಂಎಸ್‌ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಹೇಳಿದರು.

ಯಲ್ಲಾಪುರ: ಪ್ರತಿಯೊಬ್ಬರಲ್ಲಿಯೂ ಪ್ರತಿಭೆ ಹುದುಗಿದ್ದರೂ, ಅದು ಭಿನ್ನವಾಗಿರುತ್ತದೆ. ಅದಕ್ಕನುಸಾರ ಸಾಧನೆಯ ದಾರಿಯಲ್ಲಿ ಸಾಗಿದಾಗ ಎಲ್ಲರೂ ಶ್ರೇಷ್ಠ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯ ಎಂದು ಟಿಎಂಎಸ್‌ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಹೇಳಿದರು.

ತಾಲೂಕಿನ ಮಲವಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಇಂದಿನ ಸಮಾಜ ಬಹುವೇಗವಾಗಿ ಸಾಗುತ್ತಿದೆ. ನಾವೂ ಅದರಂತೆ ಸ್ಪರ್ಧಾತ್ಮಕವಾಗಿ ನಮ್ಮನ್ನು ತೊಡಗಿಸಿಕೊಂಡರೆ ಪಾಲಕರ ಕನಸು ನನಸಾಗಿಸಬಹುದು. ಗುರು-ಹಿರಿಯರನ್ನು ಚಿಕ್ಕಂದಿನಿಂದಲೇ ಗೌರವಿಸುವ ಸಂಸ್ಕಾರ ಬೆಳೆಸಿಕೊಂಡು, ಉತ್ತಮ ನಾಗರಿಕರಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಲಾ ಶಿಕ್ಷಣಾಭಿವೃದ್ಧಿ ಸಮಿತಿ ಅಧ್ಯಕ್ಷ ಸುಬ್ಬಯ್ಯ ದೋಗಳೆ, ಗ್ರಾಮೀಣ ಪ್ರದೇಶದಲ್ಲಿಯೇ ಹೆಚ್ಚು ಪ್ರತಿಭಾವಂತರನ್ನು ಕಾಣಬಹುದು. ನಾವು ಮಾಡಿದ ಸಾಧನೆ ಮಾತ್ರ ನಮ್ಮನ್ನು ಎತ್ತರಕ್ಕೆ ಒಯ್ಯುತ್ತದೆ ಎಂದು ಹೇಳಿದರು.

ಮಲವಳ್ಳಿಯಂತಹ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ದೂರದ ಊರುಗಳಿಗೆ ಹೋಗಬೇಕಾದ ಅನಿವಾರ್ಯ ಸ್ಥಿತಿ ಇದೆ. ಆದರೂ, ಇದನ್ನು ಪಾಲಕರು ಗಂಭೀರವಾಗಿ ಸ್ವೀಕರಿಸಿ, ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಹಿಂದೆ ಬಿದ್ದಿಲ್ಲ. ಆದರೆ, ಪ್ರಸ್ತುತ ಸಂದರ್ಭದಲ್ಲಿ ಮುಂದೆ ಸಾಗುತ್ತಿರುವ ನಮ್ಮ ಮಕ್ಕಳು, ಹಿಂದೆ ನೋಡದ ಸ್ಥಿತಿ ಬರಬಾರದು ಎಂದ ಅವರು, ಎಂದಿಗೂ ನಿಮ್ಮ ಜೀವನಕ್ಕಾಗಿ ಜೀವ ನೀಡಿದ ಪಾಲಕರನ್ನು ಅವರ ವೃದ್ಧಾಪ್ಯದಲ್ಲಿ ನಿರ್ಲಕ್ಷಿಸದೇ, ಅವರ ಕುರಿತಾಗಿ ಪ್ರೀತಿ, ವಾತ್ಸಲ್ಯ ತೋರುವ ಹೊಣೆ ನಿಮ್ಮ ಮೇಲಿದೆ ಎಂದರು.

ಮಾವಿನಮನೆ ಗ್ರಾಪಂ ಅಧ್ಯಕ್ಷ ಸುಬ್ಬಣ್ಣ ಕುಂಟೇಗಾಳಿ, ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಬ್ಬಣ್ಣ ಬೋಳ್ಮನೆ, ಪ್ರಮುಖರಾದ ರವಿ ಹುಳ್ಸೆ, ದೀಪಕ್ ಭಟ್ಟ, ರಾಘವೇಂದ್ರ ಕುಣಬಿ, ಸಾಮಾಜಿಕ ಕಾರ್ಯಕರ್ತರಾದ ಗಣೇಶ ಹೆಬ್ಬಾರ, ನರಸಿಂಹ ಭಟ್ಟ ಬಾವಿಗದ್ದೆ ಅತಿಥಿಗಳಾಗಿ ಆಗಮಿಸಿದ್ದರು. 

ವಿದ್ವಾನ್ ವಿನಾಯಕ ಭಟ್ಟ ಶೇಡೀಮನೆ ಮನೋನಿಗ್ರಹ ಮತ್ತು ವ್ಯಕ್ತಿತ್ವ ವಿಕಾಸ ಕುರಿತು ಉಪನ್ಯಾಸ ನೀಡಿದರು. ಇದೇ ವೇಳೆ ೨೦೨೨-೨೩ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ನಾರಾಯಣ ಭಟ್ಟ ಸ್ವಾಗತಿಸಿದರು. ಸಂತೋಷ ಶಿರಸಿ ನಿರ್ವಹಿಸಿದರು. ಸದಾನಂದ ಭಟ್ಟ ವಂದಿಸಿದರು.

Share this article