ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಹೊರವಲಯದಲ್ಲಿರುವ ಶಿವಪುರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಮದ್ದೂರು ತಾಲೂಕಿನ ಬಾಕಿ ಇರುವ ಪ್ರಕರಣಗಳ ವಿಚಾರಣೆ- ವಿಲೇವಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಭ್ರಷ್ಟಾಚಾರ ನಿರ್ಮೂಲನೆಗೆ ಮೊದಲು ಸಮಾಜದಲ್ಲಿ ಬದಲಾವಣೆ ಬರಬೇಕು. ಹಣ ಪಡೆದು ಮತ ಚಲಾಯಿಸುವವರು. ಹಣ ನೀಡಿ ಮತ ಖರೀದಿಸುವವರು ಹಾಗೂ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವವರು- ಇವರೆಲ್ಲರೂ ಭ್ರಷ್ಟಾಚಾರದ ವ್ಯವಸ್ಥೆಯ ಭಾಗವಾಗುತ್ತಾರೆ. ಜನರು ಹಣ ಪಡೆದು ಮತ ಹಾಕಿದರೆ, ನಂತರ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ನೈತಿಕ ಹಕ್ಕನ್ನು ಕಳೆದುಕೊಳ್ಳುತ್ತಾರೆ. ಆದ್ದರಿಂದ ಬದಲಾವಣೆ ಮೊದಲು ಸಮಾಜದಿಂದಲೇ ಆರಂಭವಾಗಬೇಕು ಎಂದರು.
ತಮ್ಮ ಹುದ್ದೆಯ ಉದ್ದೇಶ ಮರೆಯಬೇಡಿ:ಅಧಿಕಾರಿಗಳು ತಮ್ಮ ಹುದ್ದೆಯ ಉದ್ದೇಶವನ್ನು ಮರೆಯಬಾರದು. ಪ್ರತಿಯೊಂದು ಇಲಾಖೆಯ ಅಧಿಕಾರಿಯೂ ಜನಸೇವೆ ಮಾಡುವ ಉದ್ದೇಶದಿಂದ ಅಧಿಕಾರಕ್ಕೆ ಬಂದಿರುತ್ತಾರೆ. ಜನಸೇವೆಯೇ ಅಧಿಕಾರದ ಮೂಲ ಕರ್ತವ್ಯ. ಅಧಿಕಾರ ಬಂದ ನಂತರ ಜನರಿಂದ ದೂರವಾಗಿ, ಅಧಿಕಾರದ ಪ್ರಭಾವವನ್ನು ವೈಯಕ್ತಿಕ ಹಿತಾಸಕ್ತಿಗೆ ಬಳಸಿಕೊಳ್ಳುವ ಪ್ರವೃತ್ತಿ ಸಲ್ಲದು ಎಂದರು.
ಒತ್ತಡಗಳಿಗೆ ಒಳಗಾಗುವುದಿಲ್ಲ:
ಮಂಡ್ಯ ಜಿಲ್ಲೆಯ ಬಗ್ಗೆ ನನಗೆ ವಿಶೇಷ ಪ್ರೀತಿ ಇದೆ ಎಂಬುದಕ್ಕಿಂತಲೂ ಇಲ್ಲಿನ ಜನರ ಬಗ್ಗೆ ನನಗೆ ವಿಶೇಷ ಕಾಳಜಿ ಇದೆ. ಪ್ರಾಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿಗಳ ಬಗ್ಗೆ ಗೌರವವಿದೆ. ಆದರೆ, ಜನರಿಗೆ ಅನ್ಯಾಯ ಮಾಡುವ, ಮೋಸ ಮಾಡುವ ಅಥವಾ ಭ್ರಷ್ಟಾಚಾರದಲ್ಲಿ ತೊಡಗುವ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ಬಿ.ವೀರಪ್ಪ ಹೇಳಿದರು.
ಸರ್ಕಾರಿ ಭೂಮಿ ಮತ್ತು ಸಾರ್ವಜನಿಕ ಆಸ್ತಿಗಳ ಅಕ್ರಮ ಬಳಕೆಯ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದರು. ಅಕ್ರಮ ಮಂಜೂರಾತಿ, ಸುಳ್ಳು ದಾಖಲೆಗಳು, ಕಾನೂನುಬಾಹಿರವಾಗಿ ಸರ್ಕಾರಿ ಜಮೀನುಗಳನ್ನು ಪಡೆಯುವ ಪ್ರಯತ್ನಗಳು ಕಂಡುಬಂದರೆ ಅವುಗಳ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಜನರು ದೂರು ನೀಡಿದಾಗ ಅದನ್ನು ನಿರ್ಲಕ್ಷಿಸದೆ ತಕ್ಷಣ ಸ್ಪಂದಿಸಬೇಕು. ಲೋಕಾಯುಕ್ತ ಸಂಸ್ಥೆಗೆ ದೂರು ಬಂದ ನಂತರ ಸಂಬಂಧಪಟ್ಟ ಅಧಿಕಾರಿಗಳು ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳಬೇಕು. ಕರ್ತವ್ಯಲೋಪ ಮುಂದುವರಿದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವುದು ಕೇವಲ ಲೋಕಾಯುಕ್ತ ಸಂಸ್ಥೆಯ ಜವಾಬ್ದಾರಿಯಲ್ಲ. ಸಮಾಜ, ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಪ್ರತಿಯೊಬ್ಬ ನಾಗರಿಕರೂ ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದಾಗ ಮಾತ್ರ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಲೋಕಾಯುಕ್ತರು ಹೇಳಿದರು.
ಅಧಿಕಾರಿಗಳು ಪ್ರಾಮಾಣಿಕವಾಗಿ ಮತ್ತು ನಿಷ್ಠೆಯಿಂದ ಕೆಲಸ ಮಾಡಿದರೆ ಯಾವುದೇ ಭಯಪಡುವ ಅಗತ್ಯವಿಲ್ಲ. ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳನ್ನು ಕಾನೂನುಬದ್ಧವಾಗಿ ಎದುರಿಸಲು ಲೋಕಾಯುಕ್ತ ಸಂಸ್ಥೆ ನೆರವಾಗಲಿದೆ. ಆದರೆ, ಕರ್ತವ್ಯಲೋಪ, ಭ್ರಷ್ಟಾಚಾರ ಅಥವಾ ಅಕ್ರಮಗಳಿಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ಪ್ರಾಮಾಣಿಕತೆಯ ಅನ್ನವೇ ನೆಮ್ಮದಿ ಕೊಡುತ್ತದೆ:ಪ್ರಾಮಾಣಿಕವಾಗಿ ಗಳಿಸಿದ ಸಂಪತ್ತು ಮತ್ತು ಆದಾಯದಿಂದ ಬದುಕುವ ಜೀವನವೇ ನೆಮ್ಮದಿಯ ಜೀವನ. ಅನ್ಯಾಯದ ಮೂಲಕ ಗಳಿಸಿದ ಹಣದಿಂದ ಕುಟುಂಬವನ್ನು ಪೋಷಿಸಿದರೆ ಆ ಹಣ ನೆಮ್ಮದಿಯನ್ನು ನೀಡುವುದಿಲ್ಲ. ಸರ್ಕಾರಿ ನೌಕರರು ತಮ್ಮ ಆದಾಯಕ್ಕೆ ಹೋಲಿಕೆಯಾಗದ ರೀತಿಯಲ್ಲಿ ಆಸ್ತಿ ಸಂಪಾದಿಸಿದರೆ ಅದರ ಮೂಲದ ಬಗ್ಗೆ ಪರಿಶೀಲನೆ ನಡೆಯಬೇಕು. ಕುಟುಂಬದ ಸದಸ್ಯರೂ ಅಕ್ರಮ ಸಂಪತ್ತಿನ ಬಗ್ಗೆ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರಾಮಾಣಿಕವಾಗಿ ಗಳಿಸಿದ ಅನ್ನವೇ ನೆಮ್ಮದಿ ಕೊಡುತ್ತದೆ; ಅನ್ಯಾಯದ ಹಣದಿಂದ ಬಂದ ಸಂಪತ್ತು ನೆಮ್ಮದಿ ನೀಡುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಉಪಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಎನ್.ವಿ.ಅರವಿಂದ್, ಜಿಲ್ಲಾ ಹಿರಿಯ ಸಿವಿಲ್ ನ್ಯಾಯಧೀಶ ಎಂ. ಆನಂದ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ. ಶೋಭಾರಾಣಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ಮಂಡ್ಯ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಸುರೇಶ್ ಬಾಬು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಟಿ.ಎಸ್.ಸತ್ಯಾನಂದ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.