ಶಿರಹಟ್ಟಿ: ಧರ್ಮದ, ಭಕ್ತಿಯ, ಕಾಯಕ ಶಕ್ತಿ, ದಾಸೋಹದ ಮಹತ್ವ, ವಿನಯದ ಅಗತ್ಯತೆಯ ದೀಕ್ಷೆಯನ್ನು ಸಮಾಜಕ್ಕೆ ಕೊಡಬೇಕು ಎಂದು ಬೆಳ್ಳಟ್ಟಿ ರಾಮಲಿಂಗೇಶ್ವರ ಮಠದ ಬಸವರಾಜ ಸ್ವಾಮಿಗಳು ತಿಳಿಸಿದರು.ತಾಲೂಕಿನ ಬೆಳ್ಳಟ್ಟಿ ಗ್ರಾಮದ ರಾಮಲಿಂಗೇಶ್ವರ ದಾಸೋಹ ಮಠದಲ್ಲಿ ಕಳೆದ 60 ದಿನಗಳಿಂದ ನಡೆದ ಬಸವ ಪುರಾಣ ಪಠಣದ ಮಂಗಲೋತ್ಸವ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದರು.
ಗುರುಗಳು- ಹಿರಿಯರಾಗಿ ನಾವು ನಮ್ಮ ಜವಾಬ್ದಾರಿಯನ್ನು ನಿಭಾಯಿಸದಿದ್ದರೆ ಮುಂದಿನ ಅನಾಗರಿಕ ಸಮಾಜ ಸೃಷ್ಟಿಗೆ ಸಾಕ್ಷಿಯಾಗಬೇಕಾಗುತ್ತದೆ. ಅದಕ್ಕಾಗಿ ಮಂಟಪ ಪೂಜೆ ಮಾಡಿ ಗುರುಗಳ ಪಾದಪೂಜೆ ಮತ್ತು ಪೂಜಾ ಕೈಂಕರ್ಯಗಳ ಮಹತ್ವವನ್ನು ಭಕ್ತರಿಗೆ ತಿಳಿಸಲಾಗಿದೆ. ಪುರಾಣ ಮಂಗಲ ಮಹೋತ್ಸವದ ದಿನದಂದು ಭಕ್ತರು ತಮ್ಮ ಮನೆಯಲ್ಲಿ ಮಾಡಿದ 8 ಕ್ವಿಂಟಲ್ ಮಾದಲಿಯನ್ನು ಶ್ರೀಮಠಕ್ಕೆ ತಂದು ದಾಸೋಹ ಮಾಡಿ ಭಕ್ತಿ ಸಮರ್ಪಿಸಿದ್ದಾರೆ.ಭಕ್ತರು ಕಷ್ಟಪಟ್ಟು ದುಡಿದು ಕೂಡಿಟ್ಟ ಹಣವನ್ನು ಶ್ರೀಮಠಕ್ಕೆ ದಾನವಾಗಿ ಪಡೆದು ಶ್ರೀಮಠವನ್ನು ಅಭಿವೃದ್ಧಿ ಪಡಿಸಲಾಗಿದೆ. ಆದ್ದರಿಂದ ಇದರಲ್ಲಿ ನಮ್ಮ ಕಾರ್ಯನಿಷ್ಠೆಗಿಂತ ಭಕ್ತರ ಶಕ್ತಿ ಮತ್ತು ಕಾಯಕ ದೊಡ್ಡದು ಎಂದರು.
ನೀಲಗುಂದ ಮಠದ ಪ್ರಭುಲಿಂಗ ಸ್ವಾಮಿಗಳು ಮಾತನಾಡಿ, ಮಠದಿಂದ ಘಠ ಗುರುತಿಸಬಾರದು, ಘಠದಿಂದ ಮಠವನ್ನು ಗುರುತಿಸುವಂತಾಗಬೇಕು. ಈ ದೆಸೆಯಲ್ಲಿ ಏನು ಇಲ್ಲದ ಮಠಕ್ಕೆ ಬಂದು ಶ್ರೀಮಠವನ್ನು ಅಭಿವೃದ್ಧಿ ಪಡಿಸುವುದರ ಜತೆಗೆ ಭಕ್ತರ ಮನಸ್ಸನ್ನು ಸ್ವಚ್ಛ ಮಾಡಿ ಭಕ್ತಿಯ ಬೆಳೆಯನ್ನು ಬೆಳೆದ ಕೀರ್ತಿ ಬಸವರಾಜ ಶ್ರೀಗಳಿಗೆ ಸಲ್ಲುತ್ತದೆ. ಕಳೆದ 60 ದಿನಗಳ ಕಾಲ ಮಠದಲ್ಲಿ ಬಸವ ಪುರಾಣ ಹೇಳುವ ಮೂಲಕ ತಮಗೆಲ್ಲ ಪುರಾಣ ಪುಣ್ಯ ಕಥೆಗಳ ರಸದೌತಣವನ್ನು ಬಡಿಸಿದ್ದಾರೆ ಎಂದರು.ಮಾಜಿ ಶಾಸಕ ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಸಮಾಜದಲ್ಲಿ ಸಮಾನತೆ ತೋರಿಸುವ ಗ್ರಂಥ ಬಸವ ಪುರಾಣವಾಗಿದೆ. ಇಂತಹ ಪುರಾಣ ಹೇಳುವ ಮೂಲಕ ಭಕ್ತರ ಮನಸ್ಸನ್ನು ಶ್ರೀಗಳು ತಿಳಿಗೊಳಿಸಿದ್ದಾರೆ. ಪುರಾಣ ಮತ್ತು ವಚನಗಳನ್ನು ಕೇಳುವುದರ ಜತೆಗೆ ಅದರಲ್ಲಿನ ಶರಣರ ನಡೆ- ನುಡಿಗಳನ್ನು ನಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು. ಆಂದಾಗ ಮಾತ್ರ ನಾವುಗಳು ಬದುಕಿನಲ್ಲಿ ಸಾರ್ಥಕತೆ ಕಾಣಲು ಸಾಧ್ಯವಾಗುತ್ತದೆ ಎಂದರು.ಈ ವೇಳೆ ಶಾಸಕ ಡಾ. ಚಂದ್ರು ಲಮಾಣಿ, ಸುಜಾತಾ ದೊಡ್ಡಮನಿ, ಪ್ರಕಾಶ ಮಹಾಜನ ಶೆಟ್ಟರ ಮಾತನಾಡಿದರು. ಬನ್ನಿಕೊಪ್ಪ ಮಠದ ಸುಜ್ಞಾನದೇವ ಶಿವಾಚಾರ್ಯ ಸ್ವಾಮಿಗಳು, ಶಿವಯೋಗಿಶ್ವರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ರಮೇಶ ನಿರ್ವಾಣಶೆಟ್ಟರ, ಸಣ್ಣವೀರಪ್ಪ ಹಳ್ಳೆಪ್ಪನವರ, ಹುಮಾಯೂನ ಮಾಗಡಿ, ತಿಮ್ಮರಡ್ಡಿ ಮರಡ್ಡಿ, ಶಿವನಗೌಡ ಪಾಟೀಲ, ಮೋಹನ ಗುತ್ತೆಮ್ಮನವರ, ಮಹೇಶ ಮೇಟಿ, ಸಿದ್ದರಾಮಪ್ಪ ಮೊರಬದ, ವೀರುಪಾಕ್ಷ ನಂದೆಣ್ಣವರ, ಕೊಟ್ರೇಶ ಸಜ್ಜನ, ಆರ್.ಆರ್. ಗಡ್ಡದೇವರಮಠ, ಕಮಲಾ ತಾಯಿ, ಶಂಕರ ಮರಾಠಾ, ರಾಜೀವರಡ್ಡಿ ಬೊಮ್ಮನಕಟ್ಟಿ, ಸುರೇಶ ಬಸವರಡ್ಡಿ, ಮಹೇಶ ಶೆಟ್ಟಿಕೇರಿ ಇತರರು ಇದ್ದರು.