ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಆದಿಚುಂಚನಗಿರಿ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಸಂಜೆ ಶ್ರೀಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯದಲ್ಲಿ ಸರ್ವಧರ್ಮ ಸಮ್ಮೇಳನ ನಡೆಯಿತು.ಸಮ್ಮೇಳನದ ವೇದಿಕೆಯಲ್ಲಿ ಹಿಂದೂ ಧರ್ಮ ಕುರಿತು ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಮಂಗಳನಾಥ ಸ್ವಾಮೀಜಿ, ಕ್ರೈಸ್ತ ಧರ್ಮ ಕುರಿತು ಹಾಸನದ ಸಿಎಸ್‌ಐ ವೆಸ್ಲಿ ದೇವಾಲಯದ ಸಭಾಪಾಲಕ ಘನ ವಿನಿತ್‌ಸ್ವರೂಪ್, ಜೈನ ಧರ್ಮ ಕುರಿತು ಕಸಾಪ ಗೌರವ ಕಾಯದರ್ಶಿ ಹಾಗೂ ಲೇಖಕಿ ಡಾ.ಪದ್ಮಿನಿ ನಾಗರಾಜ್, ಇಸ್ಲಾಂ ಧರ್ಮ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ ಮಿತ್ತೂರಿನ ಕೆಜಿಎನ್ ದ.ವಾ ಕಾಲೇಜಿನ ಪ್ರಾಧ್ಯಾಪಕ ಮುಹಮ್ಮದ್ ಹುಸೈನ್ ಅಹ್ಸನಿ ಅಲ್ ಮುಈನಿ ಮಾರ್ನಾಡ್ ಹಾಗೂ ಬೌದ್ಧ ಧರ್ಮ ಕುರಿತು ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆಯ ಇಕೋ ನಳಂದ ಬೋಧಿಸತ್ವ ಟ್ರಸ್ಟ್‌ನ ಸಂಸ್ಥಾಪಕ ಕರ್ಮ ಸಂತೇನ್ ಲಿಂಗ್ ಪ ರಿಂಪೋಚೆ ಉಪನ್ಯಾಸ ನೀಡಿದರು.
ಸಮ್ಮೇಳನದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಮಠದ ಪೀಠಾಧ್ಯಕ್ಷ ಶ್ರೀನಿರ್ಮಲಾನಂದನಾಥಸ್ವಾಮೀಜಿ, ಜಾತಿ ಧರ್ಮಾತೀತವಾಗಿ ಪ್ರತಿ ವ್ಯಕ್ತಿ ಮುಕ್ತನಾಗಿರಬೇಕು. ಸಮಾಜಕ್ಕೆ ಶಾಂತಿ, ಹೃದಯಕ್ಕೆ ಆಧ್ಯಾತ್ಮಿಕ ಭಾವನೆ ಬೇಕಿದೆ ಎಂಬ ಭೈರವೈಕ್ಯಶ್ರೀಗಳ ಆಶಯದಂತೆ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಸರ್ವಧರ್ಮ ಸಮ್ಮೇಳನ ಆಯೋಜಿಸಲಾಗಿದೆ ಎಂದರು.ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ಶ್ರೀ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಕಾಗೀನೆಲೆ ಶಿವಾನಂದಪುರಿ ಸ್ವಾಮೀಜ, ಕುಂಬಳಗೋಡು ಶಾಖಾಮಠದ ಪ್ರಕಾಶನಾಥ ಸ್ವಾಮೀಜಿ, ಮಂಗಳೂರು ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿ, ಮೈಸೂರು ಶಾಖಾಮಠದ ಸೋಮೇಶ್ವರನಾಥ ಸ್ವಾಮೀಜಿ, ಹಾಸನ ಶಾಖಾ ಮಠದ ಶಂಭೂನಾಥ ಸ್ವಾಮೀಜಿ, ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಾಥ ಸ್ವಾಮೀಜಿ ಸೇರಿದಂತೆ ನಾಡಿನ ಅನೇಕ ಮಠಾಧಿಪತಿಗಳು, ಧಾರ್ಮಿಕ ಮುಖಂಡರುಗಳು, ಗಣ್ಯರು ಭಾಗವಹಿಸಿದ್ದರು.
ಆದಿಚುಂಚನಗಿರಿ ಜಾತ್ರೆಗೆ ಬಂದ ಭಕ್ತರಿಗೆ ಅನ್ನದಾಸೋಹಕ್ಕೆ ಶ್ರೀಗಳಿಂದ ಚಾಲನೆಕನ್ನಡಪ್ರಭ ವಾರ್ತೆ ನಾಗಮಂಗಲತಾಲೂಕಿನ ಆದಿಚುಂಚನಗಿರಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಅಪಾರ ಸಂಖ್ಯೆಯ ಭಕ್ತರಿಗೆ ಬೆಂಗಳೂರಿನ ಅರಿಶಿನಕುಂಟೆಯ ರಾಜಮ್ಮ ಮತ್ತು ರಾಮಕೃಷ್ಣಪ್ಪ ಕುಟುಂಬಸ್ಥರು ಹಾಗೂ ಶ್ರೀಕಾಲಭೈರವೇಶ್ವರ ಜಾತ್ರಾ ಮಹೋತ್ಸವ ಅನ್ನ ಸಂತರ್ಪಣಾ ಸೇವಾ ಟ್ರಸ್ಟ್ ವತಿಯಿಂದ ಅನ್ನದಾಸೋಹಕ್ಕೆ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳು ಭಾನುವಾರ ಬೆಳಗ್ಗೆ ಚಾಲನೆ ನೀಡಿದರು.ಇತಿಹಾಸ ಪ್ರಸಿದ್ಧ ಆದಿಚುಂಚನಗಿರಿ ಜಾತ್ರಾ ಮಹೋತ್ಸವಕ್ಕೆ ರಾಜ್ಯ ಹಾಗೂ ನೆರೆ ರಾಜ್ಯಗಳಿಂದ ಪ್ರತಿವರ್ಷ ಲಕ್ಷಾಂತರ ಮಂದಿ ಭಕ್ತರು ಸೇರುವುದು ಬಹು ವರ್ಷಗಳಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಭಾನುವಾರ ಬೆಳಿಗ್ಗೆಯಿಂದಲೇ ಸಹಸ್ರಾರು ಸಂಖ್ಯೆಯ ಭಕ್ತರು ಸಾಗರೋಪಾದಿಯಲ್ಲಿ ಶ್ರೀಮಠದತ್ತ ಹರಿದು ಬರುತ್ತಿದ್ದರು. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಹತ್ತಾರು ಸ್ಥಳಗಳಲ್ಲಿ ಅನ್ನದಾಸೋಹದ ವ್ಯವಸ್ಥೆಯನ್ನು ಮಾಡಲಾಗಿತ್ತು.ಅನ್ನ ದಾಸೋಹದ ವ್ಯವಸ್ಥೆಯನ್ನು ಖುದ್ದು ವೀಕ್ಷಣೆ ಮಾಡಿದ ನಿರ್ಮಲಾನಂದನಾಥ ಶ್ರೀಗಳು ನೆರೆದಿದ್ದ ಭಕ್ತರಿಗೆ ಪ್ರಸಾದದ ರೂಪದಲ್ಲಿ ಊಟ ಬಡಿಸುವ ಮೂಲಕ ಭಾನುವಾರ ಬೆಳಗ್ಗೆಯಿಂದ ರಾತ್ರಿವರೆಗೂ ನಿರಂತರವಾಗಿ ನಡೆಯುವ ಅನ್ನದಾಸೋಹಕ್ಕೆ ವಿದ್ಯುಕ್ತವಾಗಿ ಚಾಲನೆ ಕೊಟ್ಟರು. ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಧರ್ಮಪಾಲನಾಥ ಸ್ವಾಮೀಜಿ, ಚೈತನ್ಯನಾಥಸ್ವಾಮೀಜಿ ಸೇರಿದಂತೆ ವಿವಿಧ ಶಾಖಾಮಠಗಳ ಶ್ರೀಗಳು ಹಾಗೂ ಭಕ್ತರು ಇದ್ದರು.