ಮಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್) ಶತಮಾನೋತ್ಸವ ಪೂರೈಸಿರುವುದು ಹೆಮ್ಮೆಯ ಸಂಗತಿ. ಇದನ್ನು ಅವಲೋಕಿಸಿದಾಗ ಇನ್ನೂ ಮಾಡಬೇಕಾದ ಕೆಲಸಗಳು ಸಾಕಷ್ಟು ಇವೆ. ಛಲದಿಂದ ಗುರಿ ಸಾಧನೆ ಸಂಘದ ತುಡಿತವಾಗಿದೆ. ಇಡೀ ಸಮಾಜವೇ ಸಂಘದ ರೀತಿ ಚಿಂತನೆ ಮಾಡಬೇಕು ಎಂಬುದು ಸಂಘದ ಆಶಯವಾಗಿದೆ ಎಂದು ಆರ್‌ಎಸ್‌ಎಸ್ ಅಖಿಲ ಭಾರತೀಯ ಜಂಟಿ ಪ್ರಧಾನ ಕಾರ್ಯದರ್ಶಿ(ಸಹ ಸರಕಾರ್ಯವಾಹ) ಮುಕುಂದ್ ಹೇಳಿದ್ದಾರೆ.ಮಂಗಳೂರಿನ ಸಂಘನಿಕೇತನದಲ್ಲಿ ಭಾನುವಾರ ‘ಆರ್‌ಎಸ್‌ಎಸ್-100 ಮತ್ತು ಜಾಗತಿಕ ದೃಷ್ಟಿಕೋನ’ ಕುರಿತು ಅವರು ಸಂವಾದ ನಡೆಸಿದರು.
ಸಂಘದ ನೂರು ವರ್ಷದ ಇತಿಹಾಸದಲ್ಲಿ ಸಮಾಜದಲ್ಲಿ ವ್ಯವಸ್ಥೆ ಹಾಗೂ ಸಾಮಾಜಿಕ ಪರಿವರ್ತನೆ ಆಗಿದೆ. ಸಮಾಜವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಿದರೆ ನಾಗರಿಕತೆಗೆ ಬಲ ಬರಬಹುದು. ಸಂಘದ ಪಂಚ ಪರಿವರ್ತನೆಗಳು ಕೂಡ ಇದನ್ನೇ ಹೇಳುತ್ತವೆ ಎಂದರು.ಆರೋಗ್ಯಕರ ಜನಸಂಖ್ಯಾ ರಚನೆ: ಭಾರತದಲ್ಲಿ ಸಾಮಾಜಿಕ ಕೌಟುಂಬಿಕ ಅಸಮತೋಲನ ಕಾಡುತ್ತಿದೆ. ಮಕ್ಕಳನ್ನು ಪಡೆಯುವ ಫಲವತ್ತತೆ 2.1 ಅನುಪಾತದಲ್ಲಿದೆ. ಸಮೃದ್ಧ, ಸದೃಢ ಸಮಾಜ ರೂಪುಗೊಳ್ಳಬೇಕಾದರೆ ವೃದ್ಧರನ್ನು ನೋಡಿಕೊಳ್ಳುವ ಮಕ್ಕಳು ಇರಬೇಕು. ಇಂತಹ ವಾತಾವರಣವನ್ನು ನಿರ್ಮಿಸಲು ಸಂಘದ ಕುಟುಂಬ ಪ್ರಬೋಧನ ವಿಭಾಗ ಶ್ರಮಿಸುತ್ತಿದೆ. ಈಗಾಗಲೇ ನಾನಾ ಕಾರಣಗಳಿಗೆ ಹಿಂದುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಮತಾಂತರ, ಅಕ್ರಮ ವಲಸಿಗರ ಪ್ರವೇಶ, ಹಿಂದುಯೇತರರ ಜನಸಂಖ್ಯೆಯಲ್ಲಿ ಹೆಚ್ಚಳ ಇವೆಲ್ಲವೂ ಸವಾಲು ಆಗಿ ಪರಿಣಮಿಸಿದೆ. ಕುಟುಂಬ ವ್ಯವಸ್ಥೆ ಮತ್ತು ಸಮಾಜದ ಸಮತೋಲನ ಕಾಪಾಡಲು ಆರೋಗ್ಯಕರ ಜನಸಂಖ್ಯಾ ರಚನೆ ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯಕ್ಷೇತ್ರೀಯ ಸಂಘ ಚಾಲಕ್ ಡಾ.ಪಿ. ವಾಮನ ಶೆಣೈ, ಮಂಗಳೂರು ಮಹಾನಗರ ಸಂಘ ಚಾಲಕ್ ಡಾ.ಸತೀಶ್ ರಾವ್ ಇದ್ದರು. ಸಂಘದ ಪ್ರಮುಖರಾದ ಉದಯ ಕುಮಾರ್ ಶೆಣೈ ಪ್ರಾಸ್ತಾವಿಕ ಮಾತನಾಡಿದರು. ಮನ್ವಿತಾ ಪ್ರಾರ್ಥಿಸಿದರು. ಆಶಾ ರೈ ವಂದೇ ಮಾತರಂ ಹಾಡಿದರು. ವಿಶ್ವಾಸ್ ಯು.ಎಸ್ ವಂದಿಸಿದರು. ಶಿವರಾಜ್ ನಿರೂಪಿಸಿದರು.ಮಾಲ್‌ಗಳಿಗೆ ಆರ್‌ಎಸ್‌ಎಸ್ ಪ್ರವೇಶ!: ಪ್ರಸಕ್ತ ಮಹಾನಗರಗಳಲ್ಲಿ ಇರುವ ಮಾಲ್‌ಗಳಲ್ಲಿ ಯುವಜನತೆ ಸ್ವೇಚ್ಛಾಚಾರದಂತಹ ಬೇಕಾಬಿಟ್ಟಿ ವರ್ತನೆಗಳಿಂದ ಸುದ್ದಿಯಾಗುತ್ತಿದೆ. ಯುವ ಜನತೆಯಲ್ಲಿ ನೈತಿಕತೆ, ಸಾಂಸ್ಕೃತಿಕ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಅದಕ್ಕಾಗಿ ಮಾಲ್‌ಗಳಲ್ಲೂ ಸಂಘದ ಚಿಂತನೆ ಪ್ರವೇಶ ಆಗಬೇಕು. ಸಂಘದ ಪಂಚ ತತ್ವಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕು. ಹ್ಯಾಂಗ್ ಔಟ್ ಆಗುವವರು ಸಂಘಕ್ಕೆ ಬೇಕಾಗಿದೆ. ಯುವಜನತೆಯ ಸ್ನೇಹ ಸಂಪಾದಿಸಿ ನಾಗರಿಕ ಪ್ರಜ್ಞೆ ಮೂಡಿಸಬೇಕು ಎಂದು ಮುಕುಂದ್ ಅಭಿಪ್ರಾಯಪಟ್ಟರು.