- ಚನ್ನಗಿರಿಯಲ್ಲಿ ಸರ್ಕಾರಿ ನಿವೃತ್ತ ನೌಕರರ ಸಂಘ ಸರ್ವ ಸದಸ್ಯರ ಮಹಾಸಭೆ
ಕನ್ನಡಪ್ರಭ ವಾರ್ತೆ ಚನ್ನಗಿರಿ
ತಮ್ಮ ಜೀವಿತದ ಯೌವನಾವಸ್ಥೆಯನ್ನು ಸರ್ಕಾರಿ ಸೇವೆಯಲ್ಲಿ ಕಳೆದ ನೌಕರರು ಈಗ ನಿವೃತ್ತಿ ಜೀವನ ನಡೆಸುತ್ತಿದ್ದೀರಿ. ನೀವು ಸಮಾಜದ ಮಾರ್ಗದರ್ಶಕರು. ನಿಮ್ಮಗಳ ಸಾರ್ಥಕ ಬದುಕಿನ ಅನುಭವಗಳೇ ಇಂದಿನ ಯುವ ಜನಾಂಗಕ್ಕೆ ಸ್ಫೂರ್ತಿಯಾಗಿವೆ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ಹೇಳಿದರು.ಪಟ್ಟಣದ ಶ್ರೀ ಹಾಲಸ್ವಾಮಿ ಸಮುದಾಯ ಭವನದಲ್ಲಿ ಸೋಮವಾರ ತಾಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ ಸರ್ವ ಸದಸ್ಯರ ಮಹಾಸಭೆ ಹಾಗೂ ನಿವೃತ್ತ ನೌಕರರ ಮತ್ತು ಹಿರಿಯ ನಾಗರಿಕರ ದಿನಾಚರಣೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ನಾನು ಸಹ ನಿವೃತ್ತ ಸರ್ಕಾರಿ ನೌಕರನ ಮಗನಾಗಿದ್ದೇನೆ. ನಿಮ್ಮಗಳ ಸಮಸ್ಯೆ ಹತ್ತಿರದಿಂದ ಬಲ್ಲೆ. 60 ವರ್ಷಗಳವರೆಗೆ ಸರ್ಕಾರಿ ಸೇವೆಯನ್ನು ಸಲ್ಲಿಸಿ, ನಿವೃತ್ತರಾಗಿದ್ದೀರಿ. ನಿವೃತ್ತಿ ಹೊಂದಿದ ಮೇಲೆ ನನ್ನ ಕೆಲಸ ಮುಗಿಯಿತು ಎಂದು ಭಾವಿಸದೇ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜವನ್ನು ತಿದ್ದುವ ಕೆಲಸ ಮಾಡಬೇಕು. ನಿಮ್ಮಗಳ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ಎಲ್ಲರ ಆಶೀರ್ವಾದದಿಂದ ಶಾಸಕನಾಗಿದ್ದು, ನಿಮ್ಮಗಳ ಸೇವೆಗೆ ನಾನು ಸದಾಸಿದ್ದ ಎಂದರು.ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಹಾಲಸ್ವಾಮಿ ವಿರಕ್ತ ಮಠದ ಶ್ರೀ ಬಸವ ಜಯಚಂದ್ರ ಮಹಾಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಜಿ.ಎಂ. ಉಜ್ಜಿನಪ್ಪ ವಹಿಸಿದ್ದರು.
75 ವರ್ಷ ತುಂಬಿದ ಸಂಘದ ಸದಸ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಚ್.ಎಂ. ವೀರಯ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಎಸ್. ಗಣೇಶ್, ಜಿ.ಚಿನ್ನಸ್ವಾಮಿ, ಎಂ.ಯು. ಚನ್ನಬಸಪ್ಪ, ಸರ್ಕಾರಿ ಬಾಲಿಕಾ ಪ್ರೌಢಶಾಲೆ ಮುಖ್ಯ ಶಿಕ್ಷಕ ಎಚ್.ಎಂ. ಬಸವರಾಜಪ್ಪ, ಜಯದೇವಯ್ಯ, ಕೆಎಸ್‌ಆರ್‌ಟಿಸಿ ನಿವೃತ್ತ ಅಧಿಕಾರಿ ಗುರುಮೂರ್ತಿ, ಸಂಘದ ಪದಾಧಿಕಾರಿಗಳು, ಸರ್ವ ಸದಸ್ಯರು ಭಾಗವಹಿಸಿದ್ದರು.- - -
(ಬಾಕ್ಸ್) * ಉತ್ಸಾಹ, ಉಲ್ಲಾಸ ಜೀವನ ನಡೆಸಿ: ಮಾಡಾಳು ವಿರೂಪಾಕ್ಷಪ್ಪ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ಹಿರಿಯ ನಾಗರೀಕರು ಕ್ರಿಯಾಶೀಲರಾಗಿದ್ದಾಗ ನಿಮ್ಮ ಆರೋಗ್ಯ ಉತ್ತಮವಾಗಿರಲಿದೆ. ನಿವೃತ್ತಿಯ ನಂತರದ ದಿನಗಳನ್ನು ಉತ್ಸಾಹ- ಉಲ್ಲಾಸ ಹಾಗೂ ಆರೋಗ್ಯ ಕಾಳಜಿಯಿಂದ ಕಳೆಯಬೇಕು. ಸರ್ಕಾರಗಳು ಯೋಜನೆಗಳನ್ನು ಜಾರಿಗೆ ತಂದಾಗ ನೌಕರರು ಅವುಗಳನ್ನು ಸಮರ್ಪಕವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸಿ ಅವರ ಬದುಕನ್ನು ಹಸನು ಮಾಡುವಲ್ಲಿ ಶ್ರಮಿಸಿದ್ದಾರೆ. ಇಂದಿನ ಯುವಪೀಳಿಗೆಗೆ ಸೂಕ್ತ ಮಾರ್ಗದರ್ಶನ ಮಾಡುತ್ತ ಸಮಾಜವನ್ನು ಸನ್ಮಾರ್ಗದ ಕಡೆಗೆ ತೆಗೆದುಕೊಂಡು ಹೋಗುವ ಗುರುತರ ಜವಾಬ್ದಾರಿ ನಿಮ್ಮಗಳ ಮೇಲಿದೆ ಎಂದರು.- - -
-12ಕೆಸಿಎನ್‌ಜಿ1.ಜೆಪಿಜಿ:ಸಮಾರಂಭದ ಉದ್ಘಾಟನೆಯನ್ನು ಶಾಸಕ ಬಸವರಾಜು ವಿ. ಶಿವಗಂಗಾ ನೆರವೇರಿಸಿದರು. ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ಹಾಲಸ್ವಾಮಿ ವಿರಕ್ತ ಮಠದ ಶ್ರೀಗಳು, ಇತರರು ಇದ್ದರು.