ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಮಕ್ಕಳಿಗೆ ಓದುವ ಸ್ಪರ್ಧೆಗಿಂತ ಸಮಾಜ ಎದುರಿಸಲು ಬೇಕಾಗುವ ಜಾಣ್ಮೆ ಹಾಗೂ ಸಾಮರ್ಥ್ಯವನ್ನು ಮೊದಲು ನೀಡಬೇಕಿದೆ ಎಂದು ಚಿಂತಕ ಎಚ್.ಎಂ.ಪೃಥ್ವಿರಾಜ್ ಹಾಲಹಳ್ಳಿ ಸಲಹೆ ನೀಡಿದರು. ತಾಲೂಕಿನ ಬೇಗೂರು ಗ್ರಾಮದ ಬಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಜೀವನ ಸದಾ ಸುಲಭದ ಹಾದಿಯಲ್ಲ; ಪುಟ್ಟ ಹೆಜ್ಜೆಗಳೊಂದಿಗೆ ದೊಡ್ಡ ಕನಸು ಕಾಣುತ್ತಾ ಸಾಗಬೇಕು ಎಂದರು. ಕನಸು ಕಂಡ ಕನಸಿನಿಂದ ಮಾತ್ರವೇ ಮುಂದೆ ಉತ್ತಮ ಸಾಧನೆ ಮಾಡಲು ಸಾಧ್ಯ ಎಂಬುದಾಗಿ ನೈಜ್ಯ ಘಟನೆಗಳ ಉದಾಹರಣೆಯೊಂದಿಗೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ನುಡಿಗಳನ್ನಾಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದ ಪ್ರಾಂಶುಪಾಲ ಮಹದೇವಪ್ರಸಾದ್ ಮಾತನಾಡಿ ಶಾಲೆಯು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ತನ್ನದೇ ಕೊಡುಗೆ ನೀಡುತ್ತಾ ಬಂದಿದೆ ಎಂದರು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಧನೆಗೆ ಅವಿರತ ಪ್ರಯತ್ನ ಮತ್ತು ಶ್ರಮಬೇಕು. ಜೀವನ ನಿರ್ವಹಣೆಗೆ ಅಗತ್ಯವಿರುವ ಕೌಶಲ್ಯ, ಸಾಮರ್ಥ್ಯ, ಮೌಲ್ಯ ಕಲಿತು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು. ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯ ಪಾಲಕ ಮಂಜುನಾಥ ಹೆಚ್.ಎನ್ ಮಾತನಾಡಿ ಪಠ್ಯೇತರ ಚಟುವಟಿಕೆಯಲ್ಲಿ ಉತ್ತಮ ಸಾಧನೆ ಮಾಡಿದ ಕುವೆಂಪು ಸದನಕ್ಕೆ ಬಹುಮಾನ ವಿತರಿಸಿ ಶುಭ ಕೋರಿದರು.ಅಧ್ಯಕ್ಷತೆ ವಹಿಸಿದ್ದ ವಸತಿ ಶಾಲೆಯ ಪ್ರಾಂಶುಪಾಲೆ ಕವಿತಾ ಎಸ್ ಮಾತನಾಡಿ ಆಧುನಿಕ ಜಗತ್ತಿನಲ್ಲಿ ವಿದ್ಯಾರ್ಥಿಗಳ ಶಿಕ್ಷಣವು ಕೇವಲ ತರಗತಿಯ ನಾಲ್ಕು ಗೋಡೆಗೆ ಸೀಮಿತವಾಗಬಾರದು ಎಂದರು. ಮಕ್ಕಳು ಓದಿನ ಜೊತೆಗೆ ಪಠ್ಯ,ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಒಳ್ಳೆಯ ಪ್ರಜೆಗಳಾಗಿ ಎಂದು ಶುಭ ಹಾರೈಸಿದರು. ಶಾಲೆಯಲ್ಲಿ ಪ್ರಭಾರ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ ಮಹೇಂದ್ರ ಎಂಗೆ ಇದೇ ಸಮಾರಂಭದಲ್ಲಿ ವೇದಿಕೆಯಲ್ಲಿದ್ದ ಗಣ್ಯರು ಸನ್ಮಾನದ ಜೊತೆಗೆ ಶಾಲೆಯ ಕಾಯಕನಿರತ ಶಿಕ್ಷಕ ಮತ್ತು ಶಿಕ್ಷಕೇತರ ವರ್ಗದವರಿಗೆ ಗುರುವಂದನೆ ಸಲ್ಲಿಸಲಾಯಿತು.ಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ,ಯೋಗ ಮತ್ತು ಕರಾಟೆ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕರು, ಸಿಬ್ಬಂದಿ, ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.