ಸಾಧನೆ ಮಾಡಿದಾಗ ಸಮಾಜ ಗುರುತಿಸುತ್ತದೆ

KannadaprabhaNewsNetwork | Published : Aug 10, 2024 1:35 AM

ಸಾರಾಂಶ

ಕಡಿಮೆ ಸಮಯದಲ್ಲಿ ದೊಡ್ಡ ಸಾಧನೆ ಮಾಡಲು ಗುರಿ ಹಾಕಿಕೊಳ್ಳಬೇಕು. ತಾವು ಆ ಗುರಿ ತಲುಪಿ ಸಾಧನೆ ಮಾಡಿದಾಗ ಸಮಾಜ ಅವರನ್ನು ಗುರುತಿಸುತ್ತದೆ ಎಂದು ಜ್ಞಾನಜ್ಯೋತಿ ಶಾಲೆಯ ಅಧ್ಯಕ್ಷ ನಾನಾಗೌಡ ಎಂ.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಕಡಿಮೆ ಸಮಯದಲ್ಲಿ ದೊಡ್ಡ ಸಾಧನೆ ಮಾಡಲು ಗುರಿ ಹಾಕಿಕೊಳ್ಳಬೇಕು. ತಾವು ಆ ಗುರಿ ತಲುಪಿ ಸಾಧನೆ ಮಾಡಿದಾಗ ಸಮಾಜ ಅವರನ್ನು ಗುರುತಿಸುತ್ತದೆ ಎಂದು ಜ್ಞಾನಜ್ಯೋತಿ ಶಾಲೆಯ ಅಧ್ಯಕ್ಷ ನಾನಾಗೌಡ ಎಂ.ಪಾಟೀಲ ಹೇಳಿದರು.

ತಾಳಿಕೋಟಿ ರಸ್ತೆಯಲ್ಲಿರುವ ಜ್ಞಾನ ಜ್ಯೋತಿ ಶಾಲಾವರಣದಲ್ಲಿ ನಡೆದ ಒರಿಸ್ಸಾದ ಭುವನೇಶ್ವರದಲ್ಲಿ ಡಿವೈಎಸ್ಪಿ ಆಗಿ ಸೇವೆ ಸಲ್ಲಿಸುತ್ತಿರುವ ಅನಿಲ ಚವ್ಹಾಣ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಲಕರು ಮಕ್ಕಳಿಗೆ ಮಾದರಿಯಾಗಿರುತ್ತಾರೆ. ಅವರು ಸದಾ ನಮ್ಮ ನಡವಳಿಕೆಯನ್ನು ಅನುಸರಿಸುತ್ತಾರೆ. ಹೀಗಾಗಿ ನಮ್ಮ ಬಗ್ಗೆಯೇ ಕೀಳರಿಮೆ ಹೊಂದುವುದು ಬೇಡ. ಸದಾ ಸಕಾರಾತ್ಮಕ ಭಾವ ಹೊಂದಿರಬೇಕು. ಇದರಿಂದ ಮಕ್ಕಳು ಕೂಡ ಸಕಾರಾತ್ಮಕತೆಯತ್ತ ವಾಲುತ್ತಾರೆ. ದೇವರು ಒಳ್ಳೆಯ ಬದುಕು ನೀಡಿದ್ದಾನೆ. ಬಡತನ, ಅವಮಾನಕ್ಕೆ ಒಳಗಾದವರೇ ದೊಡ್ಡ ಸಾಧನೆ ಮಾಡಿದ್ದಾರೆ. ಬೇರೆಯವರನ್ನು ನೋಡಿ ನಿಮ್ಮ ಸಂತೋಷ ಕಳೆದುಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.ಸಿಂದಗಿ ನ್ಯಾಯಾಲಯದ ವಕೀಲ ಎಸ್.ಪಿ ಪಾಟೀಲ ಹಾಗೂ ಭೈರವಾಡಗಿ ಸರ್ಕಾರಿ ಪಪೂ ಕಾಲೇಜು ಉಪನ್ಯಾಸಕ ಪ್ರಭುಗೌಡ ಪಾಟೀಲ ಮಾತನಾಡಿ, ಸಾಧನೆಗೆ, ಸಿದ್ಧಿಗೆ ಬಡತನ ಎಂದೂ ಅಡ್ಡಿ ಬರುವುದಿಲ್ಲ. ಬಡತನವನ್ನೇ ಮೆಟ್ಟಿಲು ಮಾಡಿಕೊಳ್ಳಬೇಕು. ಯುಪಿಎಸ್ಸಿ, ಕೆಪಿಎಸ್ಸಿ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳು ಸಾಧನೆ ದೃಷ್ಟಿಯಿಂದ ನಿಜವಾದ ಪರೀಕ್ಷೆಗಳು. ಅವುಗಳಲ್ಲಿ ಯಶಸ್ಸು ಪಡೆಯುವುದು ಕಷ್ಟ ಸಾಧ್ಯವಾದರೂ, ಮನಸ್ಸು ಮಾಡಿದರೇ ಯಾವುದೂ ಅಸಾಧ್ಯವಲ್ಲ. ಪರೀಕ್ಷೆಗಳು ಹಾಗೆ, ಹೀಗೆ ಎನ್ನುವ ಕಟ್ಟು ಕತೆಗಳನ್ನು ಬಿಟ್ಟು ಶ್ರದ್ಧೆಯಿಂದ ಅಭ್ಯಾಸ ಮಾಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಅದಕ್ಕೆ ಪೂರಕವಾಗಿ ಸಾಧಕರಿಂದ ಸ್ಫೂರ್ತಿ ಪಡೆಯಬೇಕು ಎಂದು ಸಲಹೆ ನೀಡಿದರು.ಡಿವೈಎಸ್ಪಿ ಅನಿಲ ಚವ್ಹಾಣ ಸನ್ಮಾನ ಸ್ವೀಕರಿಸಿ ಮಾತನಾಡಿ, ಶಾಲಾ ಮಕ್ಕಳೊಂದಿಗೆ ಸಾಧನೆಗೆ ಬೇಕಾದ ಪ್ರೇರಣಾತ್ಮಕ ಅಂಶಗಳನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಜ್ಞಾನಜ್ಯೋತಿ ಹಾಗೂ ಪ್ರಿನ್ಸ್ ಪಬ್ಲಿಕ್ ಹೈಯರ್ ಪ್ರೈಮರಿ ಶಾಲೆಯ ಆಡಳಿತ ಅಧಿಕಾರಿ ಕೆ.ಬಿ.ಪಾಟೀಲ, ಮುಖ್ಯ ಗುರು ಜ್ಯೋತಿ ಬಾಗೇವಾಡಿ, ಅಖಿಲ್ ನಾಗಾವಿ, ಶ್ರೀದೇವಿ ಬಾಗೇವಾಡಿ, ರೇಣುಕಾ ಬಗಲಿ, ಸೌಭಾಗ್ಯ ದೇಸಾಯಿ, ಅಶ್ವಿನಿ ಗುಂದಗಿ, ಭುವನೇಶ್ವರಿ, ನೀಲೋ ಫಾನಪರೋಶ, ಸಂಜಯ ಜಾಧವ, ಅಶೋಕ ರಾಠೋಡ ಸೇರಿದಂತೆ ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಬಡತನದಲ್ಲಿ ಹುಟ್ಟಿ ಸಾಧಿಸಬೇಕೆಂಬ ಛಲದಿಂದ ನಮ್ಮ ತಾಂಡಾದ ಕಿರಣ್ ಹಾಗೂ ಅನಿಲ ಇಬ್ಬರು ಸಹೋದರರು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಡಿವೈಎಸ್ಪಿಯಾಗಿ ಸೇವೆ ಸಲ್ಲಿಸುತ್ತಿರುವುದು ನಮ್ಮೆಲ್ಲರ ಹೆಮ್ಮೆ. ವಿದ್ಯಾರ್ಥಿಗಳು ದೊಡ್ಡ ಕನಸು ಹೊಂದಬೇಕು. ಕನಸು ನನಸಾಗಿಸಲು ಪ್ರಾಮಾಣಿಕವಾಗಿ ಶ್ರಮಿಸಬೇಕು. ಯೋಚನೆಗಳು ಚೆನ್ನಾಗಿದ್ದರೇ ಕನಸು ನನಸಾಗಿಸಲು ಸಾಧ್ಯ.

-ನಾನಾಗೌಡ ಎಂ.ಪಾಟೀಲ,

ಜ್ಞಾನಜ್ಯೋತಿ ಶಾಲೆಯ ಅಧ್ಯಕ್ಷರು.

Share this article