ಪುಂಡಾನೆಗಳನ್ನು ಹದಗೊಳಿಸಲು ಸಾಫ್ಟ್‌ ರಿಲೀಫ್‌ ಸೆಂಟರ್‌

KannadaprabhaNewsNetwork | Published : May 2, 2025 11:46 PM

ಸಾರಾಂಶ

ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾ ಅರಣ್ಯ ವ್ಯಾಪ್ತಿಯಲ್ಲಿ ಸಾಫ್ಟ್‌ ರಿಲೀಫ್‌ ಸೆಂಟರ್ ಆರಂಭಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು. ಕಾಡಾನೆ ಮಾನವ ಸಂಘರ್ಷ ಕೇವಲ ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ ಇಡಿ ದೇಶದಲ್ಲೆ ಈ ಸಮಸ್ಯೆ ಇದ್ದು ಸಂಕಿರ್ಣ ಸಮಸ್ಯೆ ಪರಿಹಾರಕ್ಕೆ ತನ್ನದೆ ಸಮಯ ಹಿಡಿಯಲಿದೆ. ಸಮಸ್ಯೆ ಪರಿಣಾಮಕಾರಿಯಾಗಿ ಪರಿಹರಿಸುವ ನಿಟ್ಟಿನಲ್ಲಿ ಮೇ ತಿಂಗಳ ಅಂತ್ಯದಲ್ಲಿ ಬೆಳೆಗಾರರು, ತಜ್ಞರು ಹಾಗೂ ಅಧಿಕಾರಿಗಳನ್ನೊಳಗೊಂಡ ಸಭೆ ನಡೆಸಿದ ನಂತರ ಕಾಡಾನೆ ಪೀಡಿತ ಕ್ಷೇತ್ರದ ಶಾಸಕರೊಂದಿಗೆ ದೆಹಲಿಗೆ ನಿಯೋಗ ತೆರಳಿ ಕೇಂದ್ರ ಅರಣ್ಯ ಸಚಿವರೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾ ಅರಣ್ಯ ವ್ಯಾಪ್ತಿಯಲ್ಲಿ ಸಾಫ್ಟ್‌ ರಿಲೀಫ್‌ ಸೆಂಟರ್ ಆರಂಭಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

ಕಾಡಾನೆ ದಾಳಿಗೆ ಬಲಿಯಾದ ತಾಲೂಕಿನ ಬೈಕೆರೆ ಗ್ರಾಮದಲ್ಲಿ ಷಣ್ಮುಖ ಅವರ ಮನೆಗೆ ಶುಕ್ರವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಒಂದು ವಾರದ ಹಿಂದೆ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ಸಭೆಯಲ್ಲಿ ಸಾಫ್ಟ್ ರಿಲೀಫ್‌ ಸೆಂಟರ್ ಆರಂಭಿಸುವ ಬಗ್ಗೆ ಚರ್ಚೆ ನಡೆದಿದ್ದು ನಾಡಿನಲ್ಲಿ ಉಪಟಳ ನೀಡುತಿರುವ ಕಾಡಾನೆಗಳನ್ನು ಸಾಫ್ಟ್‌ ರಿಲೀಫ್‌ ಸೆಂಟರ್‌ಗೆ ಸಾಗಿಸಿ ಇಲ್ಲಿ ಕೆಲವು ದಿನಗಳ ಕಾಲ ಇಡುವ ಮೂಲಕ ಪುಡಾಂಟಿಕೆಯಲ್ಲಿ ತೊಡಗಿರುವ ಕಾಡಾನೆಗಳ ನಡವಳಿಕೆಯನ್ನು ಸುಧಾರಿಸಿ ಅಭಯಾರಣ್ಯಕ್ಕೆ ಬಿಡುವು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ೫೩ ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು ಇನ್ನೂ ೮ರಿಂದ ೧೦ ತಿಂಗಳಿನಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದರು.

ಹಾಸನ ಜಿಲ್ಲೆಯಲ್ಲಿ ಕಾಡಾನೆ ಮಾನವ ಸಂಘರ್ಷ ಅತಿಯಾಗಿದ್ದು ಕಳೆದೊಂದು ವರ್ಷದಲ್ಲಿ ೭ ಜನರು ಮೃತಪಟ್ಟಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಸಹ ಪ್ರಾಣಹಾನಿ ತಡೆಗಟ್ಟುವ ನಿಟ್ಟಿನಲ್ಲಿ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಸಹ ಹಲವು ಘಟಕಗಳನ್ನು ತೆರೆದು ಕಾಡಾನೆ ಮಾನವ ಸಂಘರ್ಷ ತಡೆಗೆ ಮುಂದಾಗಿದೆ ಸದ್ಯ ಡ್ರೋನ್ ಮೂಲಕ ಕಾಡಾನೆಗಳ ಗುರುತಿಸುವ ಹಂತವಾಗಿ ಹಾಸನ ಅರಣ್ಯ ಇಲಾಖೆ ಎರಡು ಡ್ರೋನ್ ಖರೀದಿಸಲಾಗಿದೆ. ಕಾಡಾನೆ ಮಾನವ ಸಂಘರ್ಷ ಕೇವಲ ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ ಇಡಿ ದೇಶದಲ್ಲೆ ಈ ಸಮಸ್ಯೆ ಇದ್ದು ಸಂಕಿರ್ಣ ಸಮಸ್ಯೆ ಪರಿಹಾರಕ್ಕೆ ತನ್ನದೆ ಸಮಯ ಹಿಡಿಯಲಿದೆ. ಸಮಸ್ಯೆ ಪರಿಣಾಮಕಾರಿಯಾಗಿ ಪರಿಹರಿಸುವ ನಿಟ್ಟಿನಲ್ಲಿ ಮೇ ತಿಂಗಳ ಅಂತ್ಯದಲ್ಲಿ ಬೆಳೆಗಾರರು, ತಜ್ಞರು ಹಾಗೂ ಅಧಿಕಾರಿಗಳನ್ನೊಳಗೊಂಡ ಸಭೆ ನಡೆಸಿದ ನಂತರ ಕಾಡಾನೆ ಪೀಡಿತ ಕ್ಷೇತ್ರದ ಶಾಸಕರೊಂದಿಗೆ ದೆಹಲಿಗೆ ನಿಯೋಗ ತೆರಳಿ ಕೇಂದ್ರ ಅರಣ್ಯ ಸಚಿವರೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.

ಮುಂದಿನ ದಿನಗಳಲ್ಲಿ ಮಾನವ ಹತ್ಯೆಯಾಗದಂತೆ ನಿತ್ಯ ದೇವರಲ್ಲಿ ಪ್ರಾರ್ಥಿಸಿಕೊಳ್ಳವೆ. ಮೃತ ಷಣ್ಮುಖ ಪತ್ನಿಗೆ ಸರ್ಕಾರಿ ಉದ್ಯೋಗ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗುವುದು. ತಾಲೂಕಿನಲ್ಲಿ ಉಪಟಳ ನೀಡುತ್ತಿರುವ ಮತ್ತೇರಡು ಕಾಡಾನೆ ಸೆರೆಯನ್ನು ನಾಳೆಯಿಂದಲೇ ಆರಂಭಿಸಲಾಗುವುದು ಅಗತ್ಯ ಬಿದ್ದರೆ ಮತ್ತಷ್ಟು ಆನೆ ಸೆರೆಗೆ ಆದೇಶ ನೀಡಲಾಗುವುದು ಎಂದರು. ನಮ್ಮ ಸರ್ಕಾರದಲ್ಲಿ ಬೆಳೆಪರಿಹಾರವನ್ನು ತಕ್ಷಣವೇ ನೀಡುವಂತೆ ಆದೇಶ ನೀಡಲಾಗಿದೆ. ಕಾಡಾನೆ ದಾಳಿಯಿಂದ ಮೃತಪಟ್ಟ ಕುಟುಂಬಗಳಿಗೂ ಸಹ ಒಂದೇ ಹಂತದಲ್ಲಿ ಪರಿಹಾರ ನೀಡಲಾಗುತ್ತಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟವರ ಸಂಖ್ಯೆ ಸರಾಸರಿ ಲೆಕ್ಕದಲ್ಲಿ ಕಡಿಮೆ ಇದೆ. ಮುಂದಿನ ದಿನಗಳಲ್ಲಿ ಕಾಡಾನೆಯಿಂದ ಪ್ರಾಣಹಾನಿಯಾಗದಂತೆ ಕ್ರಮವಹಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಕೈಗೊಳ್ಳಲಿದ್ದಾರೆ ಎಂದರು. ರಾಜಕೀಯ: ಎನ್‌ಡಿಎ ಆಡಳಿತದ ಅವಧಿಯಲ್ಲೇ:

ಜಮ್ಮು ಕಾಶ್ಮೀರದಲ್ಲಿ ಭೀಕರ ದಾಳಿಗಳು ನಡೆದಿದ್ದರೆ, ಕಾರ್ಗಿಲ್ ಯುದ್ಧ, ಸಂಸತ್ ಮೇಲೆ ದಾಳಿಗಳು ಈ ಸರ್ಕಾರದ ಅವಧಿಯಲ್ಲೇ ನಡೆದಿರುವುದು. ವಿನಾಕಾರಣ ಕೇಂದ್ರ ಸರ್ಕಾರ ಕಾಂಗ್ರೆಸ್‌ನತ್ತ ಭಟ್ಟುಮಾಡುತ್ತಿದೆ. ಉಗ್ರರ ಸಂಹಾರಕ್ಕೆ ಕಾಂಗ್ರೆಸ್ ನಾಯಕರ ಸಂಪೂರ್ಣ ಸಹಕಾರವಿದ್ದು ಈಗಾಗಲೇ ಇದನ್ನು ಸ್ವಷ್ಟಪಡಿಸಲಾಗಿದೆ. ಮಂಗಳೂರಿನ ಸುಹಾಸ್ ಶೆಟ್ಟಿ ಕೊಲೆಗೆಡುಕರ ಬಗ್ಗೆ ಈಗಾಗಲೇ ಮಾಹಿತಿ ದೊರೆತಿದ್ದು ಶೀಘ್ರವೇ ಅವರಿಗೆ ತಕ್ಕ ಶಿಕ್ಷೆಯಾಗಲಿದೆ. ಹಿಂಸಚಾರ ನಡೆಸುವವರಿಗೆ ಜಾತಿ ಧರ್ಮಗಳಿಲ್ಲ. ಯಾರೇ ಹಿಂಸಾಚಾರ ನಡೆಸಿದರೂ ಅವರಿಗೆ ತಕ್ಕ ಶಿಕ್ಷೆಯನ್ನು ಸರ್ಕಾರ ನೀಡಲಿದೆ. ಇದರಲ್ಲಿ ಯಾವುದೆ ರಾಜಕೀಯವಿಲ್ಲ. ಕೇಂದ್ರ ಸರ್ಕಾರ ಜಾತಿ ಹಾಗೂ ಜನಸಂಖ್ಯೆ ಗಣತಿಗೆ ಮುಂದಾಗಿರುವುದನ್ನು ಸ್ವಾಗತಿಸುತ್ತೇನೆ. ಸದ್ಯ ಸರ್ಕಾರ ಬಿಡುಗಡೆಮಾಡಿರುವ ಜಾತಿ ಗಣತಿಯ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಮಾತನಾಡಲಿದ್ದೇನೆ ಎಂದರು.ಈ ವೇಳೆ ಸಂಸದ ಶ್ರೇಯಸ್ ಪಟೇಲ್,ಶಾಸಕ ಸಿಮೆಂಟ್ ಮಂಜು, ಕಾಂಗ್ರೆಸ್ ನಾಯಕ ಮುರುಳಿಮೋಹನ್,ಸಿಸಿಎಫ್ ಎಡಕೊಂಡಲವಾಡ, ಡಿಎಫ್‌ಒ ಸೂರಭ್‌ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share this article