ವೃತ್ತಿ ಬದುಕಿಗೆ ಮೃದು ಕೌಶಲ ಮಾನದಂಡ

KannadaprabhaNewsNetwork | Published : Apr 27, 2025 1:49 AM

ಸಾರಾಂಶ

ಯುವಕರು ಆಧುನಿಕ ವೃತ್ತಿ ಬದುಕಿಗೆ ತಮ್ಮನ್ನು ತಾವು ತೆರೆದುಕೊಳ್ಳಬೇಕೆಂದರೆ ಸಮಯೋಚಿತವಾದ ನಿರ್ಧಾರ ತೆಗೆದುಕೊಳ್ಳುವ, ಸಮಸ್ಯಾ ಪರಿಹಾರ ಕೌಶಲ್ಯ ರೂಢಿಸಿಕೊಳ್ಳಬೇಕು. ಆ ಮೂಲಕ ತಮ್ಮ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬೇಕು.

ಕೊಪ್ಪಳ:

ಸಮಯ, ತಂಡ ಹಾಗೂ ಸಂವಹನ ಕೌಶಲಗಳೆಂಬ ಮೃದು ಕೌಶಲಗಳು ಆಧುನಿಕ ದಕ್ಷ ವೃತ್ತಿ ಬದುಕಿನ ಪ್ರಮುಖ ಮಾನದಂಡಗಳಾಗಿವೆ ಎಂದು ಸಹಾಯಕ ಪ್ರಾಧ್ಯಾಪಕ ಡಾ. ಚಾಂದ್ ಭಾಷಾ ಎಂ ಹೇಳಿದರು.

ತಾಲೂಕಿನ ಇರಕಲ್ಲಗಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಇಂಗ್ಲಿಷ್ ವಿಭಾಗದ ವತಿಯಿಂದ ಶನಿವಾರ ನಡೆದ ಮೃದು ಕೌಶಲ್ಯಗಳು ಮತ್ತು ವ್ಯಕ್ತಿತ್ವ ವಿಕಸನ ವಿಷಯದ ಮೇಲಿನ ''''''''ಆಡ್ ಆನ್ ಕೋರ್ಸ್'''''''' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯುವಕರು ಆಧುನಿಕ ವೃತ್ತಿ ಬದುಕಿಗೆ ತಮ್ಮನ್ನು ತಾವು ತೆರೆದುಕೊಳ್ಳಬೇಕೆಂದರೆ ಸಮಯೋಚಿತವಾದ ನಿರ್ಧಾರ ತೆಗೆದುಕೊಳ್ಳುವ, ಸಮಸ್ಯಾ ಪರಿಹಾರ ಕೌಶಲ್ಯ ರೂಢಿಸಿಕೊಳ್ಳಬೇಕು. ಆ ಮೂಲಕ ತಮ್ಮ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.

ಕಾಲೇಜಿನ ಐಕ್ಯೂಎಸಿ ಘಟಕದ ಮುಖ್ಯಸ್ಥ ಪ್ರೊ. ಪ್ರಕಾಶಗೌಡ ಎಸ್‌.ಯು. ಮಾತನಾಡಿ, ಗುಣಮಟ್ಟದ ಶಿಕ್ಷಣ ಕೇವಲ ಪಠ್ಯಪುಸ್ತಕದಿಂದ ಮಾತ್ರ ನೆರವೇರುವುದಿಲ್ಲ. ಅದು ಇಂತಹ ಆಡ್ ಆನ್ ಕೋರ್ಸ್‌ಗಳೆಂಬ ಗುಣಾತ್ಮಕ ಕಾರ್ಯಕ್ರಮಗಳಿಂದ ಸಾಧ್ಯವಾಗುತ್ತದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದು ಸ್ವಾವಲಂಬನೆಯ ಕಡೆಗೆ ಹೆಜ್ಜೆ ಹಾಕಬೇಕೆಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾ ಪ್ರೊ. ಅನಿತಾ ಎಂ. ಪಾಟೀಲ, ಆಧುನಿಕ ಯುಗದಲ್ಲಿ ಯುವ ಜನತೆಗೆ ಮೃದು ಕೌಶಲಗಳು ವೃತ್ತಿ ಬದುಕಿಗೆ ಅತ್ಯಗತ್ಯವಾಗಿ ಬೇಕು. ಎಲ್ಲ ಕ್ಷೇತ್ರದಲ್ಲಿ ಉದ್ಯೋಗಿಗಳನ್ನು ಆಯ್ದುಕೊಳ್ಳಲು ಅವರಲ್ಲಿರುವ ಕೌಶಲ ಪರೀಕ್ಷಿಸಲಾಗುತ್ತದೆ. ಆದ್ದರಿಂದ ಮೃದು ಕೌಶಲಗಳ ಕಲಿಕೆ ಮತ್ತು ವ್ಯಕ್ತಿತ್ವ ವಿಕಸನ ಈ ಕಾಲದ ತುರ್ತು ಅಗತ್ಯವಾಗಿದೆ ಎಂದರು.

ಇಂಗ್ಲಿಷ್‌ ವಿಭಾಗದ ಮುಖ್ಯಸ್ಥ ಪ್ರೊ. ಬಸವರಾಜ ಟಿ.ಎಚ್. ಪ್ರಾಸ್ತಾವಿಕ ಮಾತನಾಡಿ, ''''''''ಆಡ್ ಆನ್ ಕೋರ್ಸ್'''''''' ನ ಧ್ಯೇಯೋದ್ದೇಶ, ಈ ಕಾರ್ಯಕ್ರಮದ ಪ್ರಸ್ತುತತೆ ಮತ್ತು ಗುಣಾತ್ಮಕತೆ ವಿವರಿಸಿದರು. ಡಾ. ಅನಿತಾ ಎಂ, ಪ್ರೊ. ಶಂಕ್ರಯ್ಯ ಅಬ್ಬಿಗೇರಿಮಠ, ಪ್ರೊ. ಸುನಿಲ್ ಟಿ, ಪ್ರೊ. ನಾಗರಾಜ ನಾಯಕ, ಪ್ರೊ. ಸತೀಶ, ಪ್ರೊ. ಹರೀಶ್, ಪ್ರೊ. ಶ್ವೇತಾ, ಉಪನ್ಯಾಸಕರಾದ ಮಹೇಶಕುಮಾರ, ಬಸವರಾಜ ಕಲ್ಮನಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸವಿತಾ ತಳಬಾಳ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ನೇತ್ರಾವತಿ ಪ್ರಾರ್ಥಿಸಿದರು. ಪ್ರೊ. ನೇಹಾ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಸೋಮಲಿಂಗಪ್ಪ ವಂದಿಸಿದರು.

Share this article