ಹಿರೇಕೆರೂರು: ರಾಸಾಯನಿಕ ಗೊಬ್ಬರ ಹೆಚ್ಚಿನ ಬಳಕೆಯಿಂದಾಗಿ ಮಣ್ಣಿನ ಫಲವತ್ತತೆ ಹಾಳಾಗುತ್ತಿದೆ. ಆದ್ದರಿಂದ ರೈತರು ಸಾವಯವ ಕೃಷಿ ಪದ್ಧತಿ ಅನುಸರಿಸಿ, ಮಣ್ಣಿನ ಫಲವತ್ತತೆ ಹೆಚ್ಚಿಸಬೇಕು ಎಂದು ರಟ್ಟಿಹಳ್ಳಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ರೇವಣೆಪ್ಪ ತಂಬಾಕದ ಹೇಳಿದರು. ಪಟ್ಟಣದ ತಾಪಂ ಸಭಾಭವನದಲ್ಲಿ ಏರ್ಪಡಿಸಿದ್ದ 2025-26ನೇ ಸಾಲಿನ ಆತ್ಮ ಯೋಜನೆಯಡಿ ಕಿಸಾನ್‌ಗೋಷ್ಠಿ, ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲ ರೈತರು ಹೊಲದ ಮಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕು. ಅದಕ್ಕೆ ತಕ್ಕಂತೆ ಬೆಳೆ ಬೆಳೆದು ಉತ್ತಮ ಇಳುವರಿ ಮತ್ತು ಲಾಭ ಪಡೆಯಬೇಕು ಎಂದರು.
ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ತಜ್ಞ ಡಾ. ಸಂತೋಷ ಉಪನ್ಯಾಸ ನೀಡಿದರು. ಕೃಷಿ ಅಧಿಕಾರಿಗಳಾದ ಶ್ರೀರಾಮನಗೌಡ ಹಾದಿಮನಿ, ಉಮಾ ಅರ್ಬ್ಯಾಡಗಿ, ಕೃಷಿಕ ಸಮಾಜದ ಸದಸ್ಯ ಶಂಕ್ರಪ್ಪ ಹುಲ್ಲತ್ತಿ, ಕಾರ್ಯದರ್ಶಿ ರುದ್ರಪ್ಪ ಬೆನ್ನೂರು, ಪ್ರಗತಿಪರ ರೈತರಾದ ಮಂಜಪ್ಪ ಕೊರಟಿಕೇರಿ, ಹನುಮಂತಪ್ಪ ದೊಡ್ಡಮನಿ, ಮಲ್ಲನಗೌಡ ಮುದಿಗೌಡ್ರ ಹಾಗೂ ರೈತರು, ಕೃಷಿ ಇಲಾಖೆ ಸಿಬ್ಬಂದಿ ಇದ್ದರು.