ಗದಗ: ಮಣ್ಣಿನ ಸವಕಳಿ ಸಂರಕ್ಷಣೆ ಮಾಡಬೇಕು.ಮಣ್ಣಿನ ಸವೆತ ಕಡಿಮೆ ಮಾಡಿ, ಮಣ್ಣಿನ ಗುಣಮಟ್ಟ ಕಾಪಾಡಿಕೊಳ್ಳಬೇಕು. ನೀರು, ಗಾಳಿ, ಆಹಾರದಂತೆ ಮಣ್ಣು ಕೂಡ ಅಗತ್ಯವಾಗಿದೆ ಎಂದು ಡಾ.ತೋಂಟದ ಸಿದ್ದರಾಮ ಸ್ವಾಮಿಗಳು ಹೇಳಿದರು.
ಮಾನವನ ದುರಾಸೆಯಿಂದ ಮಣ್ಣು ಸವಕಳಿಯಾಗುತ್ತಲೇ ಇದೆ. ಜನರಲ್ಲಿ ಜಾಗೃತಿ ಮೂಡಿಸಲು ಡಿ. 5 ರಂದು ವಿಶ್ವ ಮಣ್ಣಿನ ದಿನ ಆಚರಿಸಲಾಗುತ್ತದೆ. ಮಣ್ಣಿಗೂ ಕಾಡಿಗೂ ಅವಿನಾಭಾವ ಸಂಬಂಧವಿದೆ. ಮಣ್ಣಿದ್ದರೆ ಕಾಡು.ಕಾಡುಗಳಿದ್ದರೆ ವನ್ಯಪ್ರಾಣಿಗಳು. ವನ್ಯಪ್ರಾಣಿಗಳ ಸಂರಕ್ಷಣೆ ನಮ್ಮ ಧ್ಯೇಯವಾಗಬೇಕು. ಅದಕ್ಕೆ ಬಸವಣ್ಣನವರು ದಯವಿರಬೇಕು ಸಕಲ ಪ್ರಾಣಿಗಳಲ್ಲಿ ಎಂದು ಹೇಳಿದ್ದಾರೆ. ಪ್ರಾಣಿಗಳ ಚರ್ಮ ತುಪ್ಪಳಕ್ಕಾಗಿ,ಪ್ರಾಣಿಗಳನ್ನು ಕೊಲ್ಲಲಾಗುತ್ತದೆ. ಕಾಡಿನಲ್ಲಿ ಹಾಯಾಗಿ ಅಡ್ಡಾಡಿಕೊಂಡು ಇರುವ ಪ್ರಾಣಿಗಳ ವಾಸಸ್ಥಾನ ಕಾಡು. ಅದನ್ನೆ ಕಡಿದು ತೋಟ ಮಾಡುತ್ತಾರೆ. ಕಾಡಿಲ್ಲದೆ ಪ್ರಾಣಿಗಳು ಆಹಾರಕ್ಕಾಗಿ ನಾಡಿಗೆ ಬಂದರೆ ಅವುಗಳು ಮಾನವರಿಗೆ ತೊಂದರೆ ಕೊಡುತ್ತವೆಂದು ಕೊಲ್ಲುತ್ತೇವೆ ಎಂದು ವಿಷಾದಿಸಿದರು.
ಜಾಗೃತಿಗಾಗಿ ಪ್ರತಿವರ್ಷ ಡಿ.4 ರಂದು ವನ್ಯಜೀವಿ ಸಂರಕ್ಷಣಾ ದಿನ ಆಚರಿಸಲಾಗುತ್ತದೆ. ಮನುಕುಲದ ಉಳಿವಿಗಾಗಿ ಈ ಜಗದ ಮಣ್ಣು, ಕಾಡು ಹಾಗೂ ವನ್ಯಪ್ರಾಣಿಗಳ ಸಂರಕ್ಷಣೆ ಅಗತ್ಯವೆಂದರು.ಉಪನ್ಯಾಸಕರಾಗಿ ಆಗಮಿಸಿದ ಧಾರವಾಡದ ಅಪರ ಆಯುಕ್ತಾಲಯದ ನಿವೃತ್ತ ನಿರ್ದೇಶಕ ಸಿದ್ಧರಾಮ ಮನಹಳ್ಳಿ ಮಾತನಾಡಿ, ಬಸವಣ್ಣನವರ ವಚನಗಳಲ್ಲಿ ಪ್ರಾಣಿಗಳ ಪರಿಕಲ್ಪನೆ ಬಗ್ಗೆ ತಿಳಿಸಿದರು.
ವಕೀಲರ ದಿನಾಚರಣೆ ಅಂಗವಾಗಿ ಹಿರಿಯ ವಕೀಲ ಎಸ್.ಎಸ್. ಶೆಟ್ಟರ್ ಹಾಗೂ ಶ್ರೀದೇವಿ ಎಸ್.ಶೆಟ್ಟರ ಅವರನ್ನು ಸನ್ಮಾನಿಸಲಾಯಿತು. ವಿಶ್ವ ವಿಶೇಷಚೇತನರ ದಿನಾಚರಣೆ ಅಂಗವಾಗಿ ಆನಂದ ತುಕಾರಾಮ ಬೇಂದ್ರೆ ಅವರನ್ನು ಸನ್ಮಾನಿಸಲಾಯಿತು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಮಿತಿಯ ಚೇರಮನ್ ಐ.ಬಿ.ಬೆನಕೊಪ್ಪ ಹಾಗೂ ಸದಸ್ಯರು ಉಪಸ್ಥಿತರಿದ್ದರು.