ಸೋಲಾಪುರ (ಜಯದೇವಿತಾಯಿ ಲಿಂಗಾಡೆ ಮಹಾದ್ವಾರ):
ಈ ನಿಟ್ಟಿನಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವು ಈಗಾಗಲೇ ವಾರಣಾಸಿ, ಮುಂಬೈ, ಬರೋಡಾ, ದೆಹಲಿ, ಅಮರಕಂಟಕ, ಹೈದರಾಬಾದ್, ಅಕ್ಕಲಕೋಟ, ಅಧೋನಿಗಳಲ್ಲಿ ಈಗಾಗಲೇ ಒಂಭತ್ತು ಮಹಾಮೇಳ ಯಶಸ್ವಿಯಾಗಿ ಮಾಡಿದೆ. ಇದೀಗ ಸೋಲಾಪುರ ಜಿಲ್ಲೆಯ ಕನ್ನಡ ಸಂಘಗಳ ಸಹಯೋಗದಲ್ಲಿ ಸೋಲಾಪುರ ಹುತಾತ್ಮ ಸ್ಮೃತಿ ಮಂದಿರದಲ್ಲಿ ಅಖಿಲ ಭಾರತ ಹೊರನಾಡ ಕನ್ನಡ ಸಂಘಗಳ ಪ್ರತಿನಿಧಿಗಳ 10ನೇ ಮಹಾಮೇಳವನ್ನು ಶನಿವಾರ ಸೋಲಾಪುರ ಕಿರೀಟೇಶ್ವರ ಮಠದ ಸ್ವಾಮಿನಾಥ ಸ್ವಾಮೀಜಿ ಉದ್ಘಾಟಿಸಿದರು.
ಸೋಲಾಪುರ ಕನ್ನಡದ ಆಸ್ತಿ:ಶ್ರೀಗಳು ಮಾತನಾಡಿ, ಕನ್ನಡ ಐತಿಹಾಸಿಕ ಭಾಷೆ. ಇದು ಬರೀ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಮುಧೋಳದ ಮೃತ್ಯುಂಜಯ ಅಪ್ಪಗಳ ಕನ್ನಡದ ಪ್ರೀತಿಯಿಂದ ಇಂದು ಸೋಲಾಪುರದಲ್ಲಿ ಕನ್ನಡ ಸಮೃದ್ಧವಾಗಿ ಬೆಳೆದಿದೆ. ಸೋಲಾಪುರದ ರುದ್ರಾಂಬಿಕಾ ತಾಯಿ ಮೃತ್ಯುಂಜಯ ಅಪ್ಪಗಳನ್ನು ಮಧೋಳದಿಂದ ಕರೆಯಿಸಿ ಪ್ರವಚನ ನೀಡುತ್ತಿದ್ದರು. ಹೀಗಾಗಿ ಕಿರೀಟ ಮಠವನ್ನು ಅವರಿಗೆ ರುದ್ರಾಂಬಿಕಾ ತಾಯಿ ಭಕ್ಷೀಸಾಗಿ ಕೊಟ್ಟಿರುವುದು ಇತಿಹಾಸ. ಸೋಲಾಪುರದ ಎಲ್ಲ ಗ್ರಾಮಗಳಲ್ಲಿ ಕನ್ನಡ ಹೊಸುಹೊಕ್ಕಿದೆ. ನಾಮಫಲಕಗಳು ಕನ್ನಡದಲ್ಲಿಯೇ ಇದ್ದವು. ಆದರೆ, ರಾತ್ರೋರಾತ್ರಿ ಅವುಗಳು ಮರಾಠಿಮಯ ಆದವು. ಅಷ್ಟಾಗಿಯೂ ಸೋಲಾಪುರ ಮಾತ್ರ ಕನ್ನಡದ ಆಸ್ತಿ. ವಿಶೇಷ ಎಂದರೆ, ಇಲ್ಲಿ ಬಹುತೇಕರು ಲಿಂಗಾಯತರೇ ಇದ್ದು ಅವರ ಸಂಬಂಧಿಕರು ಕರ್ನಾಟಕದವರು ಇದ್ದಾರೆ ಎಂದರು.
ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ ಮಾತನಾಡಿ, ಹೊರನಾಡು ಕನ್ನಡಿಗರಿಗೆ ಅಭದ್ರತೆ ಕಾಡುತ್ತಿದ್ದು ಅವರಿಗೆ ನಿಮ್ಮ ಜೊತೆಗೆ ನಾವಿದ್ದೇವೆ ಎಂಬ ಧೈರ್ಯ ನೀಡುವ ಕಾರ್ಯವನ್ನು ಹೊರನಾಡು ಸಂಘಗಳ ಮೂಲಕ ಮಾಡುತ್ತಿದೆ. ಆದರೆ, ಇದೇ ನಡೆಯನ್ನು ಕರ್ನಾಟಕ ಸರ್ಕಾರ ಏತಕ್ಕೆ ಮಾಡುತ್ತಿಲ್ಲ? ಆದ್ದರಿಂದ ರಾಜಕಾರಣಿಗಳನ್ನು ಹೇಗೆ ಭಾಷಾ ರಾಜಕಾರಣಕ್ಕೆ ತೊಡಗಿಸಬೇಕು ಎಂಬುದನ್ನು ಕನ್ನಡದ ಸಂಘಗಳು ಆಲೋಚನೆ ಮಾಡಬೇಕು. ಭಾಷೆ, ಭಾಷಾ ತತ್ವ ಇಟ್ಟುಕೊಂಡು ಪ್ರಣಾಳಿಕೆ ಸಿದ್ಧಪಡಿಸಿ ಭಾಷಿಕ ಪಕ್ಷವನ್ನು ಕಟ್ಟಬೇಕಿದೆ. ಆಗ ಭಾಷಾ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು ಎಂಬ ನಂಬಿಕೆ ಇದೆ. ಇದರ ಭಾಗವಾಗಿ ದಕ್ಷಿಣ ಭಾರತದ ಐದಾರು ರಾಜ್ಯಗಳ ಮುಖ್ಯಮಂತ್ರಿಗಳು ಕೇಂದ್ರದ ಜನ ವಿರೋಧಿ ನೀತಿಗಳನ್ನು ವಿರೋಧಿಸಲು ಸಾಧ್ಯವಿದೆ ಎಂಬುದನ್ನು ಭಾಷಿಕ ನೆಲೆಗಟ್ಟಿನ ಮೂಲಕ ಆಲೋಚನೆ ಮಾಡಿದರೆ ಇಲ್ಲಿಯ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು ಎಂದು ಪ್ರತಿಪಾದಿಸಿದರು.
ಪ್ರಾಸ್ತಾವಿಕ ಮಾತನಾಡಿದ ಬಸವಪ್ರಭು ಹೊಸಕೇರಿ, ಕರ್ನಾಟಕದ ಕನ್ನಡಿಗರಿಂತ ಹೆಚ್ಚು ಕನ್ನಡವನ್ನು ಹೊರನಾಡು ಕನ್ನಡಿಗರು ಜತನದಿಂದ ಕಾಪಾಡಿಕೊಂಡು ಬರುತ್ತಿದ್ದಾರೆ. ಹೊರನಾಡು ಕನ್ನಡಿಗರು ಏಕಾಂಕಿಯಲ್ಲಿ ನಮ್ಮೊಟ್ಟಿಗೆ ಇದ್ದಾರೆ ಎಂದು ಮನಸ್ಸು ಬೆಸೆಯುವ ಕೆಲಸವೇ ಸಮ್ಮೇಳನದ ಪ್ರಮುಖ ಗುರಿ ಎಂದ ಅವರು, ಕರ್ನಾಟಕದ ಸುತ್ತಲಿನ ಸಹೋದರ ಭಾಷೆಗಳು ನಮ್ಮ ವೈರಿಗಲ್ಲ. ಸಹೋದರ ಭಾಷೆಗಳೊಂದಿಗೆ ಜಗಳವಾಡಿ ಇನ್ನೊಬ್ಬ ವೈರಿ ಇಂಗ್ಲಿಷ್‌ನ್ನು ಬೆಳೆಸುತ್ತಿದ್ದೇವೆ. ನನ್ನ ಭಾಷೆಯನ್ನು ಸಂಸ್ಕೃತಿಯಾಗಿ ಉಳಿಸಿಕೊಳ್ಳಬೇಕು ಎಂದರು.
ಡಾ. ಮಲ್ಲಿಕಾ ಘಂಟಿ ವಿಶ್ರಾಂತ ಕುಲಪತಿ