ಎಲ್.ವಿ.ನವೀನ್‌ಕುಮಾರ್
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣವಿಶ್ವ ವಿಖ್ಯಾತ ಕೆಆರ್‌ಎಸ್ ಅಣೆಕಟ್ಟೆ ಬೃಂದಾವನ ಬಳಿ ಮತ್ತೆ ಚಿರತೆ ಕಾಣಿಸಿಕೊಂಡಿದ್ದು, ಚಿರತೆ ಸೇರಿದಂತೆ ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ಕಾವೇರಿ ನೀರಾವರಿ ನಿಗಮದಿಂದ 1.49 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿದ್ದ ಸೋಲಾರ್ ವಿದ್ಯುತ್ ತಂತಿ ಬೇಲಿ (ಪೆನ್ಸಿಂಗ್) ಕಾಮಗಾರಿ ನೀರಿನಲ್ಲಿ ಹೋಮ ಮಾಡಿದಂತಾಗಿದೆ.
ಪ್ರವಾಸಿ ತಾಣದಲ್ಲಿ ಶಾಶ್ವತವಾಗಿ ಚಿರತೆ ಹಾವಳಿ ತಪ್ಪಿಸುವ ಉದ್ದೇಶದಿಂದ ಕಾವೇರಿ ನೀರಾವರಿ ನಿಗಮದಿಂದ 2023ರ ಮಾರ್ಚ್ ತಿಂಗಳಲ್ಲಿ ಸೋಲಾರ್ ವಿದ್ಯುತ್ ತಂತಿ ಬೇಲಿ (ಪೆನ್ಸಿಂಗ್) ಆಳವಡಿಸುವ ಸಲುವಾಗಿ ಟೆಂಡರ್ ಪ್ರಕ್ರಿಯೆ ನಡೆಸಲಾಗಿತ್ತು.ಕೆಆರ್‌ಎಸ್‌ನ ಉತ್ತರ ಭಾಗದಲ್ಲಿನ ಸರ್ಕಾರಿ ಹಣ್ಣಿನ ತೋಟದಲ್ಲಿ 15 ದಿನಗಳ ಹಿಂದೆ ಮತ್ತೊಮ್ಮೆ ಚಿರತೆ ಪ್ರತ್ಯೆಕ್ಷಗೊಂಡ ಚಿರತೆ ಸೆರೆಗೆ ಅರಣ್ಯಾಧಿಕಾರಿಗಳು ಬೋನ್ ಇಟ್ಟಿದ್ದು, ಚಿರತೆ ಹಾವಳಿ ತಡೆಯದ ಇಂತಹ ಕೋಟ್ಯಂತರ ರು. ವೆಚ್ಚದ ಪೆನ್ನಿಂಗ್ ಅಳವಡಿಕೆ ಕಾಮಗಾರಿ ಅಗತ್ಯವಿತ್ತೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಕಳೆದ 2-3 ವರ್ಷಗಳಿಂದ ಕೆಆರ್‌ಎಸ್‌ನ ನೃತ್ಯ ಕಾರಂಜಿ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಚಿರತೆಗಳ ಹಾವಳಿಯಿಂದ ಸ್ಥಳೀಯ ಕೆಲಸಗಾರರು ಹಾಗೂ ಪ್ರವಾಸಿಗರಲ್ಲಿ ಆತಂಕ ಹೆಚ್ಚಾಗಿ ಭಯಭೀತರಾಗಿದ್ದರು. ಕೆಲ ದಿನಗಳ ಕಾಲ ಪ್ರವಾಸಿಗರ ಪ್ರವೇಶ ನಿಷೇಧ ಹೇರಿದ್ದರಿಂದ ಪ್ರತಿನಿತ್ಯ ಲಕ್ಷಾಂತರ ರು. ನಷ್ಟವಾಗಿ ಆರ್ಥಿಕ ಹಿಂಜರಿತ ಸಹ ಆಗಿತ್ತು.ಈ ಹಿನ್ನೆಲೆಯಲ್ಲಿ ಸೋಲಾರ್ ವಿದ್ಯುತ್ ತಂತಿ ಬೇಲಿ (ಪೆನ್ಸಿಂಗ್) ಆಳವಡಿಸುವ ಸಲುವಾಗಿ ಟೆಂಡರ್ ಪ್ರಕ್ರಿಯೆ ನಡೆಸಲಾಗಿತ್ತು.
ಮೈಸೂರಿನ ಪ್ರಥಮ ದರ್ಜೆ ಗುತ್ತಿಗೆದಾರ ಶಫಿಕ್ ಸಿದ್ದಿಕ್ಕಿ ಅವರಿಗೆ 1.49 ಕೋಟಿ ರು. ವೆಚ್ಚದ ಸುಮಾರು 2.5 ಕಿ.ಮೀ ದೂರದ ಪೆನ್ಸಿಂಗ್ ಅಳವಡಿಸುವ ಕಾಮಗಾರಿ ನೀಡಿದ್ದರು. ಕಾಮಗಾರಿ ಸಹ ಸಂಪೂರ್ಣವಾಗಿ ಮುಗಿದಿದೆ.ಕೋಟ್ಯಂತರ ರು. ವೆಚ್ಚದಲ್ಲಿ ಪೆನ್ಸಿಂಗ್ ಅಳವಡಿಸುವ ಜೊತೆಗೆ ಚಿರತೆ, ಆನೆ, ಸಿಂಹ, ಹುಲಿ ಸೇರಿದಂತೆ ಇತರೆ ಪ್ರಾಣಿಗಳ ಶಬ್ದ ಕೇಳಿಬರುವಂತೆ ಸ್ವೀಕರ್ ಸಹ ಅಳವಡಿಸುವುದಾಗಿ ಟೆಂಡರ್‌ನಲ್ಲಿ ತಿಳಿಸಿದ್ದರು. ಆದರೆ, ಇಂತಹ ಯಾವುದೇ ಸ್ವೀಕರ್‌ಗಳನ್ನು ಎಲ್ಲೂ ಅಳಡಿಸಿಲ್ಲ. ಈಗ ಮತ್ತೆ ಬಳಿ ಪ್ರತ್ಯಕ್ಷಗೊಂಡಿದೆ. ಚಿರತೆ ಸೆರೆಗೆ ಬೋನ್ ಅಳವಡಿಸುವುದಾದರೆ ಕೋಟ್ಯಂತರ ರು. ಹಣ ಏಕೆ ವೆಚ್ಚ ಮಾಡಬೇಕಿತ್ತು ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.
ಪೆನ್ಸಿಂಗ್ ಅಳವಡಿಕೆ ಕಾಮಗಾರಿ ಪಾರದರ್ಶಕವಾಗಿ ನಡೆದಿರುವ ಬಗ್ಗೆ ಅನುಮಾನ ಮೂಡಿದ್ದು, ಅಧಿಕಾರಿಗಳು ಬಾರಿ ಅವ್ಯವಹಾರ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಸಾರ್ವಜನಿಕರ ಹಣವನ್ನು ಹೀಗೆ ದುರುಪಯೋಗ ಪಡಿಸಿಕೊಂಡಿರುವವರ ವಿರುದ್ಧ ಸಂಬಂಧಪಟ್ಟ ಮೇಲಾಧಿಕಾರಿಗಳು ಸೂಕ್ತ ತನಿಖೆ ನಡೆಸಿದ್ದಲ್ಲಿ ಅಕ್ರಮ ಬಯಲಿಗೆ ಬರಲಿದೆ ಎಂದು ಆಗ್ರಹಿಸಿದ್ದಾರೆ.ಚಿರತೆ ಹಾವಳಿ ತಪ್ಪಿಸುವ ಸಲುವಾಗಿ ಅಳವಡಿಸಿದ್ದ ಸೋಲಾರ್ ವಿದ್ಯುತ್ ತಂತಿ ಬೇಲಿಗೆ ಗಿಡ, ಗಂಟೆಗಳು ಬೆಳೆದು ಸಂಪೂರ್ಣವಾಗಿ ಆವರಿಸಿಕೊಂಡಿವೆ. ಒಂದು ವೇಳೆ ಸೋಲಾರ್ ತಂತಿಯಿಂದ ವಿದ್ಯುತ್ ಅವಘಡಗಳು ಸಂಭವಿಸಿದರೆ ಯಾರು ಹೊಣೆ ಎಂಬ ಪ್ರಶ್ನೆ ಎದುರಾಗಿದೆ.
ಅರಣ್ಯಾಧಿಕಾರಿಗಳ ಪರಿಶೀಲನೆ:ಆರ್‌ಎಸ್‌ನ ಉತ್ತರ ಭಾಗದಲ್ಲಿನ ಸರ್ಕಾರಿ ಹಣ್ಣಿನ ತೋಟದಲ್ಲಿ ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೆಆರ್‌ಎಸ್‌ನ ರಾಜ್ಯ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ರಾತ್ರಿ ಪಾಳಯದಲ್ಲಿ ಗಸ್ತು ತಿರುಗುವಾಗಿ ನಾಯಿಗಳ ಕಿರುಚಾಟ ಕಂಡು ಸ್ಥಳಕ್ಕೆ ಬಂದು ನೋಡಿದಾಗ ಚಿರತೆ ಗೋಚರಗೊಂಡಿದೆ.
ತಕ್ಷಣ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಕೈಗಾರಿಕಾ ಭದ್ರತಾ ಕಚೇರಿಯಿಂದ ಚಿರತೆ ಪ್ರತ್ಯಕ್ಷಗೊಂಡಿರುವ ಬಗ್ಗೆ ನಿಗಮಕ್ಕೆ ಪತ್ರ ಬರೆದಿದ್ದಾರೆ. ಬಳಿಕ ಪಾಂಡವಪುರ ತಾಲೂಕು ಅರಣ್ಯ ವಲಯದ ಆರ್‌ಎಫ್‌ಒ ಬಿ.ಆರ್ ಜಗದೀಶ್‌ಗೌಡ ಅವರಿಗೆ ಮಾಹಿತಿ ತಿಳಿಸಿದ್ದಾರೆ. ಸುದ್ದಿ ತಿಳಿದ ಮರುದಿನ ಬೆಳಗ್ಗೆ ಸಿಬ್ಬಂದಿ ಸಮೇತ ಸ್ಥಳಕ್ಕೆ ಆಗಮಿಸಿ ಅರಣ್ಯ ಇಲಾಖೆ ಅಧಿಕಾರಿಗಳು, ಸ್ಥಳ ಪರಿಶೀಲನೆ ನಡೆಸಿ ಚಿರತೆ ಸೆರೆಗಾಗಿ ಬೋನ್ ಅಳವಡಿಸಿದ್ದಾರೆ. ಕಳೆದ ಸೆ.8 ರಂದು ಕೆಆರ್‌ಎಸ್‌ನ ನೃತ್ಯ ಕಾರಂಜಿ ಹಿಂಭಾಗ (ನಾರ್ತ್ ಬೃಂದಾವನ್) ಚಿರತೆ ಕಾಣಿಸಿರುವ ಬಗ್ಗೆ ಅಧಿಕಾರಿಗಳು ದೂರವಾಣಿ ಮೂಲಕ ಮಾಹಿತಿ ನೀಡಿದರು. ತಕ್ಷಣ ನಾವು ಮತ್ತು ಸಿಬ್ಬಂದಿ ಚಿರತೆ ಬೋನ್ ಸಮೇತ ಸ್ಥಳಕ್ಕೆ ತೆರಳಿ ಚಿರತೆಯ ಹೆಜ್ಜೆ ಗುರುತಿನ ಚಲನ ವಲನ, ಮಾಹಿತಿ ಆಧಾರದ ಮೇಲೆ ಸ್ಥಳ ನಿಗದಿಪಡಿಸಿ ಬೋನ್ ಇರಿಸಲಾಗಿದೆ. ಪ್ರತಿನಿತ್ಯ ನಮ್ಮ ಇಲಾಖೆಯಿಂದ ಬೋನಿನ ಮೇಲುಸ್ತುವಾರಿ ನೋಡಿಕೊಳ್ಳಲಾಗುತ್ತಿದೆ. ದಸರಾ ಇರುವ ಹಿನ್ನೆಲೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವುದರಿಂದ ಯಾವುದೇ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.- ಜಗದೀಶ್ ಗೌಡ, ಪಾಂಡವಪುರ ಅರಣ್ಯಾಧಿಕಾರಿ
ಕಳೆದ ಹತ್ತಾರು ವರ್ಷಗಳಿಂದ ಕಾವೇರಿ ನೀರಾವರಿಗೆ ನಿಗಮದ ಕಚೇರಿಯಲ್ಲಿ ಕೆಲ ಎಂಜಿನಿಯರ್‌ಗಳು ಒಂದೇ ಸ್ಥಳದಲ್ಲೇ ಮುಂಬಡ್ತಿ ಅಥವಾ ಕಚೇರಿ ಬದಲಾವಣೆ ಮಾಡಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಅಲ್ಲಿನ ಅವ್ಯವಹಾರಗಳು ಹೊರಗೆ ಬರುತ್ತಿಲ್ಲ. ಕೂಡಲೇ ಎಂಜಿನಿಯರ್‌ಗಳ ವರ್ಗಾವಣೆ ಆಗಬೇಕು.- ಮಂಜುನಾಥ್ , ಗ್ರಾಪಂ ಸದಸ್ಯರು, ಕೆಆರ್‌ಎಸ್
ಇಲ್ಲಿಗೆ ದೇಶ, ವಿದೇಶಗಳಿಂದ ಲಕ್ಷಾಂತರ ಮಂದಿ ಪ್ರವಾಸಿಗರು ಬೃಂದಾವನಕ್ಕೆ ಆಗಮಿಸುತ್ತಾರೆ. ಅವರಿಗೆ ಸ್ಥಳೀಯ ಜಾಗದ ಬಗ್ಗೆ ಮಾಹಿತಿ ಇಲ್ಲ. ಒಂದು ವೇಳೆ ವಿದ್ಯುತ್ ತಂತಿಗೆ ಆವರಿಸಿರುವ ಗಿಡಗಂಟಿಗಳಿಂದ ವಿದ್ಯುತ್ ಅವಘಡ ಸಂಭವಿಸಿದರೆ ಅದರ ನೈತಿಕ ಹೊಣೆ ಹೊರುವವರು ಯಾರು.- ನರಸಿಂಹ ಗ್ರಾಪಂ ಸದಸ್ಯರು, ಕೆಆರ್‌ಎಸ್
ನಿಗಮದ ವತಿಯಿಂದ ಇದೇ ರೀತಿ ಸರ್ಕಾರದ ಹಣ ದುರುಪಯೋಗವಾಗುತ್ತಿದೆ. ಕಾಮಗಾರಿ ಪಾರದರ್ಶಕವಾಗಿ ನಡೆಯದ ಕಾರಣ ಮತ್ತೊಮ್ಮೆ ಚಿರತೆ ಕಾಣಿಸಿಕೊಂಡಿದೆ. ಇದರಲ್ಲಿ ಅಧಿಕಾರಿ ಲೋಪ ಎದ್ದು ಕಾಣುತ್ತಿದೆ. ಸಂಬಂಧಪಟ್ಟ ಮೇಲಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ಗುತ್ತಿಗೆದಾರ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.- ನಾಗೇಂದ್ರಕುಮಾರ್, ಗ್ರಾಪಂ ಸದಸ್ಯರು, ಕೆಆರ್‌ಎಸ್