ಇನ್ನರ್ ವ್ಹೀಲ್ ಕ್ಲಬ್ ನಿಂದ ಸೋಲಾರ್ ಲೈಟ್ ಲೋಕಾರ್ಪಣೆ
ಮೆಣಸೂರು ರುದ್ರಭೂಮಿಯಲ್ಲಿ ಲೈಟ್ ಇಲ್ಲದೆ ತೊಂದರೆಯಾಗುತ್ತಿರುವುದನ್ನು ಗಮನಿಸಿ ಇನ್ನರ್ ವ್ಹೀಲ್ ಕ್ಲಬ್ ನಿಂದ ಸೋಲಾರ್ ಲೈಟ್ ಅಳವಡಿಸಿದ್ದೇವೆ ಎಂದು ಕ್ಲಬ್ ಅಧ್ಯಕ್ಷೆ ಭವ್ಯ ಸಂತೋಷ್ ತಿಳಿಸಿದರು.
ಶುಕ್ರವಾರ ಮೆಣಸೂರು ರುದ್ರಭೂಮಿಯಲ್ಲಿ ಇನ್ನರ್ ಸಂಸ್ಥೆಯಿಂದ ಸೋಲಾರ್ ಲೈಟ್ ಲೋಕಾರ್ಪಣೆ ಹಾಗೂ ಇನ್ನರ್ ಡೇ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾಜ ಸೇವಕಿ ಜುಬೇದಾ ಹಲವಾರು ಅನಾಥ ಶವವನ್ನು ಮೆಣಸೂರು ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಿದ್ದಾರೆ. ಅಲ್ಲಿ ಲೈಟ್ ಇಲ್ಲದೆ ಮೇಣದ ಬತ್ತಿ ಬೆಳಕಿನಲ್ಲಿ ಶವ ಸಂಸ್ಕಾರ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದರು.ಆದ್ದರಿಂದ ಇನ್ನರ್ ವ್ಹೀಲ್ ಕ್ಲಬ್ ಸೋಲಾರ್ ಲೈಟ್ ಹಾಕಿಸುವ ಯೋಜನೆ ಸಿದ್ದಪಡಿಸಿದೆವು. ಸಮಾಜ ಸೇವೆಯೇ ಇನ್ನರ್ ವ್ಹೀಲ್ ಸಂಸ್ಥೆ ಮುಖ್ಯ ಗುರಿ. ಜನರಿಗೆ ಅನುಕೂಲವಾಗುವ ಸೋಲಾರ್ ಲೈಟ್ ಅಳವಡಿಸುವ ಕಾರ್ಯಕ್ರಮದಿಂದ ನನಗೆ ಸಂತೋಷವಾಗಿದೆ ಎಂದರು.
ಸಮಾಜ ಸೇವಕಿ ಜುಬೇದಾ ಸೋಲಾರ್ ಲೈಟ್ ಅನಾವರಣಗೊಳಿಸಿ ಮಾತನಾಡಿ, ಮನುಷ್ಯನ ಕೊನೆ ಯಾತ್ರೆ ಶವಯಾತ್ರೆ. ಮನುಷ್ಯರು ಎಷ್ಟು ಜನರನ್ನು ಸಂಪಾದನೆ ಮಾಡಿದ್ದರು ಎಂಬುದು ಶವ ಸಂಸ್ಕಾರದ ಸಂದರ್ಭದಲ್ಲಿ ತಿಳಿಯಲಿದೆ. ನಾನು 103 ಅನಾಥರ ಶವ ಸಂಸ್ಕಾರ ಮಾಡಿದ್ದೇನೆ. ಬೇರೆ ಊರುಗಳಿಂದ ಅನಾಥರು ನರಸಿಂಹರಾಜ ಪುರಕ್ಕೆ ಬಂದಾಗ ಅವರನ್ನು ಗುರುತಿಸಿ ಆರೈಕೆ ಮಾಡಿ ಅನಾಥಾಶ್ರಮಕ್ಕೆ ಸೇರಿಸಿದ್ದೇನೆ. ಅಂತವರು ಅನಾಥಾಶ್ರಮದಲ್ಲಿ ಸತ್ತಾಗ ಶವ ಸಂಸ್ಕಾರಕ್ಕೆ ನನ್ನ ಬಳಿ ಕಳುಹಿಸುತ್ತಾರೆ. ನಾನು ಮೆಣಸೂರು ರುದ್ರ ಭೂಮಿಯಲ್ಲಿ ಶವ ಸಂಸ್ಕಾರ ಮಾಡುವಾಗ ಅಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದಿರುವುದನ್ನು ಇನ್ನರ್ ವ್ಹೀಲ್ ಸಂಸ್ಥೆಯ ಗಮನಕ್ಕೆ ತಂದ ತಕ್ಷಣ ಸ್ಪಂದಿಸಿದ ಸಂಸ್ಥೆಯವರು ಸೋಲಾರ್ ಲೈಟ್ ಹಾಕಿಸಿ ಅದ್ಬುತ ಕಾರ್ಯ ಮಾಡಿದ್ದಾರೆ ಎಂದರು.ಈ ಸಂದರ್ಭದಲ್ಲಿ ಕ್ಲಬ್ ಕಾರ್ಯದರ್ಶಿ ನೀತಾ ಪ್ರದೀಪ್, ಖಜಾಂಚಿ ಚೈತ್ರ ರಮೇಶ್, ಸದಸ್ಯರು ಇದ್ದರು.