ಕರ್ನಾಟಕದಲ್ಲಿ ಪಿಎಂ- ಸೂರ್ಯ ಘರ್ ಯೋಜನೆ ಕುಂಟುತ್ತಿದೆ. ಇಲ್ಲಿನ ಅಧಿಕಾರಿಗಳು ಸಹಕರಿಸುತ್ತಿಲ್ಲ.
ಕನ್ನಡಪ್ರಭ ವಾರ್ತೆ ಮೈಸೂರು
ಪಿಎಂ- ಸೂರ್ಯ ಘರ್ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರವು ನಿರಾಸಕ್ತಿ ತೋರುತ್ತಿದೆ. ಇದರಿಂದ ಸಾರ್ವಜನಿಕರು ಯೋಜನೆಯ ಲಾಭ ಪಡೆಯಲು ಆಗುತ್ತಿಲ್ಲ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆರೋಪಿಸಿದರು.ನಗರದ ಸಿದ್ದಾರ್ಥ ಹೊಟೇಲ್ ಸಭಾಂಗಣದಲ್ಲಿ ಇಂಡಿಯನ್ ಸೋಲಾರ್ ಅಸೋಸಿಯೇಷನ್ (ಐಎಸ್‌ಎ) ಶುಕ್ರವಾರ ಆಯೋಜಿಸಿದ್ದ ಸೌರ ವಿದ್ಯುತ್ ಛಾವಣಿ ಅಭಿವೃದ್ಧಿದಾರರ ಸಭೆ ಹಾಗೂ ಪಿಎಂ- ಸೂರ್ಯ ಘರ್ ಯೋಜನೆ ಕುರಿತ ಜಾಗೃತಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.ಕರ್ನಾಟಕದಲ್ಲಿ ಪಿಎಂ- ಸೂರ್ಯ ಘರ್ ಯೋಜನೆ ಕುಂಟುತ್ತಿದೆ. ಇಲ್ಲಿನ ಅಧಿಕಾರಿಗಳು ಸಹಕರಿಸುತ್ತಿಲ್ಲ. ಜನಪ್ರತಿನಿಧಿಗಳು ಆಸಕ್ತಿ ವಹಿಸುತ್ತಿಲ್ಲ. ಈ ಯೋಜನೆ ಅನುಷ್ಠಾನದಲ್ಲಿ ತಮಿಳುನಾಡು ಮತ್ತು ಕರ್ನಾಟಕವು ಬಹಳ ಹಿಂದೆ ಬಿದ್ದಿದ್ದೇವೆ.ಕರ್ನಾಟಕದಲ್ಲಿ 2.22 ಲಕ್ಷ ಅರ್ಜಿಗಳಲ್ಲಿ ಅಳವಡಿಕೆಯಾಗಿರುವುದು 10 ಸಾವಿರ ಮಾತ್ರ. ತಮಿಳುನಾಡಿನಲ್ಲಿ 93 ಸಾವಿರ ಅರ್ಜಿಗಳು ಬಂದಿದ್ದು, 32 ಸಾವಿರ ಅಳವಡಿಕೆಯಾಗಿದೆ. ಇಂತಹ ಒಳ್ಳೆಯ ಯೋಜನೆ ಜನರಿಗೆ ತಲುಪುತ್ತಿಲ್ಲ. ರಾಜ್ಯ ಸರ್ಕಾರಗಳ ಅಸಹಕಾರವೇ ಇದಕ್ಕೆ ಕಾರಣ ಎಂದು ಅವರು ದೂರಿದರು.ಅಧಿಕಾರಿಗಳು ಇಂತಹ ಕಾರ್ಯಕ್ರಮಕ್ಕೆ ಬಾರದಿರುವುದು ಸರಿಯಲ್ಲ. ಅಧಿಕಾರಿಗಳು ರಾಜಕೀಯ ಮಾಡದೇ ಕೆಲಸ ನಿರ್ವಹಿಸಬೇಕು. ಅರ್ಧ ಗಂಟೆ ಸಮಯ ಮಾಡಿಕೊಂಡು ಪಾಲ್ಗೊಳ್ಳಬಹುದಿತ್ತು. ಹಲವು ಬಾರಿ ಹೇಳಿದರೂ ಜಿಲ್ಲೆಯಲ್ಲಿ ಯೋಜನೆಯ ಅಧಿಕೃತ ಉದ್ಘಾಟನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿಲ್ಲ. ಮುಂದಿನ ಪೀಳಿಗೆಗೆ ಬೇಕಾಗಿರುವ ಯೋಜನೆ ಇದು. ನಮ್ಮ ಮನೆಗೆ ನಾವೇ ವಿದ್ಯುತ್ ಉತ್ಪಾದಿಸಿ ವಿಕಸಿತ ಭಾರತಕ್ಕಾಗಿ ಕೊಡುಗೆ ನೀಡಬಹುದಾದ ಕಾರ್ಯಕ್ರಮ ಎಂದು ಅವರು ಹೇಳಿದರು.ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿ, ಪ್ರತಿ ಮನೆಗೂ 300 ಯೂನಿಟ್ ವಿದ್ಯುತ್ ನೀಡುವ ಉದ್ದೇಶದಿಂದ ಪ್ರಧಾನಿ ಮೋದಿ ಅವರು, 2024ರಲ್ಲಿ ಪಿಎಂ- ಸೂರ್ಯ ಘರ್ ಯೋಜನೆಗೆ ಚಾಲನೆ ನೀಡಿದ್ದಾರೆ. ಇದರಲ್ಲಿ ಘಟಕ ಅಳವಡಿಕೆ ಮಾಡಿಕೊಳ್ಳುವವರಿಗೆ ಕೇಂದ್ರದಿಂದ 1 ಕಿಲೋವ್ಯಾಟ್ ಗೆ 30 ಸಾವಿರ, 2 ಕಿಲೋವ್ಯಾಟ್ ಗೆ 60 ಸಾವಿರ, 3 ಕಿಲೋವ್ಯಾಟ್ ನಿಂದ 10 ಕಿಲೋವ್ಯಾಟ್ ವರೆಗೆ 78 ಸಾವಿರ ಸಹಾಯಧನ ನೀಡಲಾಗುತ್ತದೆ. ಈ ಯೋಜನೆಯಿಂದ ವಿದ್ಯುತ್ ಬಿಲ್ ಶೂನ್ಯವಾಗಲಿದೆ ಎಂದು ಅವರು ವಿವರಿಸಿದರು.ಪಿಎಂ ಸೂರ್ಯ ಘರ್ ಯೋಜನೆಗೆ 75 ಸಾವಿರ ಕೋಟಿ ಅನುದಾನ ಮೀಸಲಿಟ್ಟಿದ್ದು, 2027ರ ಒಳಗೆ ಯೋಜನೆ ಪೂರ್ಣ ಅನುಷ್ಠಾನದ ಗುರಿ ಇದೆ. 2070ರ ವೇಳೆಗೆ ಶೂನ್ಯ ಕಾರ್ಬನ್ ಮಾಡುವ ಗುರಿಯೂ ಇದೆ. ಹೀಗಾಗಿ, ಸಾರ್ವಜನಿಕರು ಒಳ್ಳೆಯ ಯೋಜನೆಗಳ ಮೂಲಕ ಭವಿಷ್ಯದ ಭಾರತಕ್ಕೆ ಕೊಡುಗೆ ನೀಡಬೇಕು. ವಿಕಸಿತ ಭಾರತ ಸಾಕಾರಕ್ಕೆ ಕೈ ಜೋಡಿಸಬೇಕು ಎಂದು ಅವರು ಕರೆ ನೀಡಿದರು.ಮಾಜಿ ಸಂಸದ, ಐಎಸ್‌ಎ ಅಧ್ಯಕ್ಷ ಸಿ. ನರಸಿಂಹನ್ ಮಾತನಾಡಿ, ಮನೆಗಳು, ಕಟ್ಟಡಗಳ ಮೇಲೆ ಸೌರ ವಿದ್ಯುತ್ ಛಾವಣಿ ಹಾಕಿಸಿಕೊಳ್ಳಲು ಎಲ್ಲರನ್ನೂ ಪ್ರೋತ್ಸಾಹಿಸುವ ಕೆಲಸ ಮಾಡಬೇಕಾಗಿದೆ. ರಾಜ್ಯ ಸರ್ಕಾರಗಳು ರಾಜಕೀಯ ಮಾಡದೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.ಐಎಸ್‌ಎ ಪದಾಧಿಕಾರಿಗಳಾದ ರವೀಂದ್ರನಾಥ ರೆಡ್ಡಿ, ಕೆ.ಟಿ. ಸುರೇಶ, ಸಿ. ಬಸವೇಗೌಡ, ಪ್ರೊ. ದಾಸನ್ ಮೊದಲಾದವರು ಇದ್ದರು.----ಕೋಟ್...ಸಿದ್ದರಾಮಯ್ಯ ಅವರು ದೀರ್ಘಾವಧಿ ಮುಖ್ಯಮಂತ್ರಿ ಎಂಬ ಸಾಧನೆ ಮಾಡಿದ್ದಾರೆ. ಆದರೆ, ದೀರ್ಘಾಯುಷ್ಯವೇ ಏಕೈಕ ಸಾಧನೆಯಲ್ಲ. ಏಕೆಂದರೆ ಅವರು ಒಳ್ಳೆಯ ಯೋಜನೆಗಳು, ಸ್ಕೀಮ್ ಗಳು ಬಂದಾಗ ಸಹಕಾರ ಕೊಡುತ್ತಿಲ್ಲ. ಚಾಮುಂಡೇಶ್ವರಿ, ನರಸಿಂಹರಾಜ ಕ್ಷೇತ್ರಕ್ಕೆ ಪ್ರವಾಸ ಹೋಗಿದ್ದ ಸಂದರ್ಭದಲ್ಲಿ ಅಲ್ಲಿನ ಸ್ಥಿತಿ ನೋಡಿ ನೋವಾಯಿತು. ಅಭಿವೃದ್ದಿ ವಿಷಯದಲ್ಲಿ ಯಾರೂ ರಾಜಕೀಯ ಮಾಡಬಾರದು. ಒಳ್ಳೆಯ ಯೋಜನೆಗಳನ್ನು ಪಕ್ಷಾತೀತವಾಗಿ ಜನರಿಗೆ ತಲುಪಿಸಬೇಕು.- ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಂಸದರು
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.