- ವಿವಿಧೆಡೆ ಸಿಸಿಟಿವಿ ಕ್ಯಾಮರಾ ಅಳವಡಿಕೆ । ಸುಗಮ ಸಂಚಾರಕ್ಕಾಗಿ ಹಲವು ಕ್ರಮ - - - ಕನ್ನಡಪ್ರಭ ವಾರ್ತೆ ಹರಿಹರ ಮೂರು ವರ್ಷಗಳಿಂದ ಬಂದ್ ಆಗಿದ್ದ ನಗರದ ಗಾಂಧಿ ಸರ್ಕಲ್‍ನಲ್ಲಿ ಸೋಲಾರ್ ಆಧಾರಿತ ಸಂಚಾರಿ ಸಿಗ್ನಲ್‍ಗೆ ಕೊನೆಗೂ ಮುಕ್ತಿ ಸಿಕ್ಕಿದೆ. ನಗರಕ್ಕೆ ಈಚೆಗೆ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಭೇಟಿ ನೀಡಿದ್ದರು. ಆಗ ಸಾರ್ವಜನಿಕರು ಮನವಿ ಮಾಡಿದ್ದ ಹಿನ್ನೆಲೆ ಸ್ಥಗಿತಗೊಂಡಿದ್ದ ಸಿಗ್ನಲ್‍ಗಳ ದುರಸ್ತಿಗೆ ವ್ಯವಸ್ಥೆ ಮಾಡಿಸಲಾಗಿದೆ ಎಂದು ತಿಳಿಸಲಾಗಿದೆ.
ಗಾಂಧಿ ವೃತ್ತ ಸೇರಿದಂತೆ ನಗರದ ವಿವಿಧೆಡೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಗಾಂಧಿ ಸರ್ಕಲ್‍ನಲ್ಲಿ 15 ದಿನಗಳಲ್ಲಿ ಪಿಡಬ್ಲ್ಯೂಡಿ ಇಲಾಖೆಯಿಂದ ಪಾದಚಾರಿ ಮಾರ್ಗ ಮತ್ತು ಸ್ಟಾಪ್ ಲೈನ್ ಮಾರ್ಕಿಂಗ್ ಮಾಡಿಸಲಾಗುವುದು.ಅನಂತರದಿಂದ ಬೈಕ್‍ಗಳಲ್ಲಿ ತ್ರಿಬಲ್ ರೈಡಿಂಗ್, ಸಿಗ್ನಲ್ ಜಂಪ್, ನಿಗದಿ ಅಲ್ಲದ ಜಾಗದಲ್ಲಿ ಪ್ರಯಾಣಿಕರನ್ನು ಇಳಿಸುವ, ಹತ್ತಿಸಿಕೊಳ್ಳುವ ಆಟೋ, ಬಸ್, ಸಿಗ್ನಲ್ ಜಂಪ್, ನಿಗದಿಗಿಂತ ಹೆಚ್ಚಿನ ವೇಗದ ಚಾಲನೆ, ನಿಯಮ ಬಾಹಿರ ಹಾರ್ನ್, ಭೀಮ್ ಲೈಟ್ ಬಳಕೆ ವಿರುದ್ಧ ಮೊಕದ್ದಮೆ ದಾಖಲಿಸಿ, ನೋಟಿಸ್ ಜಾರಿ ಮಾಡಿ ದಂಡ ವಿಧಿಸಲಾಗುವುದೆಂದು ಎಚ್ಚರಿಸಲಾಗಿದೆ.
ಫುಟ್‍ಪಾತ್ ವ್ಯಾಪರಸ್ಥರೂ ಸುಗಮ ವಾಹನ ಚಾಲನೆಗೆ ಅಡ್ಡಿಯಾಗದಂತೆ ಅಂಗಡಿಗಳನ್ನು ನಡೆಸಬೇಕು. ಗಾಂಧಿ ಸರ್ಕಲ್‍ನಲ್ಲಿ ನಿತ್ಯ ಮೂವರು ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗುತ್ತಿದ್ದು, ವಾಹನ ಚಾಲನೆ ಮೇಲೆ ಕಣ್ಣಿಡಲಿದ್ದಾರೆ. ಅಗತ್ಯ ಬಂದಲ್ಲಿ ಆಟೋ ನಿಲ್ದಾಣಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗುವುದು. ಸಂಚಾರಕ್ಕೆ ಅಡಚಣೆ ಉಂಟು ಮಾಡುವ ಬ್ಯಾನರ್, ಫ್ಲೆಕ್ಸ್ ಅಳವಡಿಸುವವರ ವಿರುದ್ಧ ಮೊಕದ್ದಮೆ ದಾಖಲಿಸಲಾಗುವುದು.ಸರ್ಕಲ್ ಮಧ್ಯದಲ್ಲಿ ತುಂಗಭದ್ರಾ ನದಿಯನ್ನು ಬಿಂಬಿಸುವ ಕಾರಂಜಿಯನ್ನು ನಗರಸಭೆಯಿಂದ ನಿರ್ಮಿಸುವ ಪ್ರಸ್ತಾವನೆ ಇದೆ. ಸುರಕ್ಷಿತ ರಸ್ತೆ ಸಂಚಾರ ಕುರಿತು ಶಾಲಾ, ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲಾಗುವುದು. ಸೂಕ್ತ ಸ್ಥಳದಲ್ಲಿಯೆ ವಾಹನ ನಿಲುಗಡೆ ಮಾಡಬೇಕು. ಜನರ ಪ್ರಾಣ, ಆಸ್ತಿ, ಪಾಸ್ತಿಗಳ ಸುರಕ್ಷತೆಗೆ ಕೈಗೊಂಡಿರುವ ಈ ಸುಧಾರಣೆಗೆ ನಾಗರೀಕರು ಸಹಕರಿಸಬೇಕೆಂದು ಇಲಾಖೆ ಕೋರಿದೆ.
- - - -19ಎಚ್‍ಆರ್‍ಆರ್01: ಹರಿಹರ ನಗರದ ಗಾಂಧಿ ಸರ್ಕಲ್‍ನಲ್ಲಿ ದುರಸ್ತಿಯಾಗಿರುವ ಸಂಚಾರಿ ಸಿಗ್ನಲ್ ವ್ಯವಸ್ಥೆ.