ಸುಭಾಶ್ಚಂದ್ರ ಎಸ್.ವಾಗ್ಳೆ ಕನ್ನಡಪ್ರಭ ವಾರ್ತೆ ಉಡುಪಿ ಮೊನ್ನೆ ಶನಿವಾರ ಇಸ್ರೇಲ್ ನಲ್ಲಿ 1973ರ ಯುದ್ಧದಲ್ಲಿ ಮಡಿದವರ ಗೌರವಾರ್ಥ ದೊಡ್ಡ ಹಬ್ಬ ನಡೆಯುತ್ತಿತ್ತು, ಈ ಹಬ್ಬದ ಕೊನೆಯ ದಿನ ಸೈನಿಕರಿಗೂ ರಜೆ ಇರುತ್ತದೆ, ಶನಿವಾರ ಅವರೆಲ್ಲರೂ ಹಬ್ಬದಲ್ಲಿದ್ದರು, ಇದೇ ಅವಕಾಶವನ್ನು ಬಳಸಿಕೊಂಡು ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ಮಾಡಿದ್ದಾರೆ... ಇಲ್ಲದಿದ್ದರೆ ಬೇರೆ ದಿನಗಳಲ್ಲಾಗಿದ್ದರೇ ಇಂತಹ ದಾಳಿ ಸಾಧ್ಯವೇ ಇರಲಿಲ್ಲ, ಇಸ್ರೇಲ್ ನಲ್ಲಿ ದೇಶ ರಕ್ಷಣೆ ಅಂದರೆ ಹಾಗಿದೆ... ಇದು ಇಸ್ರೇಲ್ ನ ಇನ್ನೊಂದು ಪ್ರಮುಖ ಪಟ್ಟಣ ಹೈಫದ ಹಿರಿಯರ ಆರೈಕೆ ಕೇಂದ್ರದಲ್ಲಿ ಪಲ್ಮನರಿ ಟೆಕ್ನಿಶಿನ್ ಆಗಿರುವ ಉಡುಪಿ ಸಮೀಪದ ಕಾಜರಗುತ್ತು ಗ್ರಾಮದ ನಿವಾಸಿ ಗೋಪಾಲಕೃಷ್ಣ ಅವರ ಅನುಭವದ ಮಾತುಗಳು. ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ಇಸ್ರೇಲ್ ಗೆ ದಕ್ಷಿಣದಲ್ಲಿ ಹಮಾಸ್ ಮತ್ತು ಉತ್ತರದಲ್ಲಿ ಹಿಜ್ಬುಲ್ಲಾ ಉಗ್ರರಿಂದ ಸದಾ ಬೆದರಿಕೆ ಇದ್ದೆ ಇದೆ. ಆದರೆ ಇಲ್ಲಿ ಪ್ರತಿಯೊಬ್ಬ ಪ್ರಜೆಗೂ ರಕ್ಷಣೆ ಇದೆ. ಉದ್ಯೋಗಕ್ಕಾಗಿ ಹೊರದೇಶಗಳಿಂದ ಬರುವವರು ಇಲ್ಲಿ ಬಹಳ ಸೇಫ್, ಆದ್ದರಿಂದ ನಾವೆಲ್ಲರೂ ಸುರಕ್ಷಿತವಾಗಿದ್ದೇವೆ, ಇಲ್ಲಿರುವ ಕನ್ನಡಿಗರ, ಬಾರತೀಯ ಹೆತ್ತವರು ಕಳವಳ ಪಡುವ ಅಗತ್ಯ ಇಲ್ಲ ಎಂದರು. ಪ್ರತಿ ಮನೆಯಲ್ಲಿ ಶೆಲ್ಟರ್ ಇದೆ!: ಇಲ್ಲಿನ ಪ್ರತಿಯೊಂದು ಮನೆಗಳಲ್ಲೂ ಸಹ ಅಂಡರ್ ಗ್ರೌಂಡ್ ಬಾಂಬ್ ಶೆಲ್ಟರ್ ಗಳಿವೆ, ರಾಕೆಟ್ ಬಂದ್ರೆ ಸೈರನ್ ಆಗ್ತದೆ, ಕೂಡ್ಲೆ ಎಲ್ಲರೂ ಶೆಟ್ಲರ್ ನೊಳಗೆ ಹೋಗ್ತಾರೆ, ಯಾವ ಅಪಾಯವೂ ಇಲ್ಲ. ನಾವಿರುವ ಮನೆಯಲ್ಲಿಯೂ ಬಾಂಬ್ ಶೆಲ್ಟರ್ ಇದೆ, ಇಲ್ಲಿನ ಸರ್ಕಾರ ಪ್ರಜೆಗಳಿಗೆ ಇಷ್ಟು ರಕ್ಷಣೆ ನೀಡ್ತಿದೆ ಎಂದು ಅವರು ಅಲ್ಲಿನ ಪ್ರತ್ಯಕ್ಷ ಮಾಹಿತಿ ನೀಡಿದರು. ಆದರೆ, ಕಳೆದ ಶನಿವಾರ ಮಾತ್ರ ಇಡಿ ಇಸ್ರೆಲ್ ನಲ್ಲಿ 1973ನ ಯುದ್ಧದ ವಿಜಯದ ಖುಶಿಗೆ ಹಬ್ಬ ನಡಿತಿರುವಾಗಲೇ ಹಮಾಸ್ ನವರು ಕಾದು ಕುಳಿತು ದಾಳಿ ಮಾಡಿದ್ರು, ಆಗ ಎಲ್ಲರೂ ಬಾಂಬ್ ಶೆಲ್ಟರ್ ಬಿಟ್ಟು ಹೊರಗಿದ್ದರು. ಮುಖ್ಯವಾಗಿ ಮಕ್ಕಳು ಮತ್ತು ಯುವಕರು ಹಬ್ಬದಲ್ಲಿದ್ದರು. ಈ ಸಂದರ್ಭದಲ್ಲಿ ಹಮಾಸ್ ಉಗ್ರರು ದಾಳಿ ಮಾಡಿ ನೂರಾರು ಜನರನ್ನು ಅಪಹರಿಸಿದರು, ಕೆಲವರನ್ನು ಕೊಂದು ಹಾಕಿದರು. ಬೇರೆ ದಿನಗಳಲ್ಲಾದ್ರೆ ಇಸ್ರೆಲ್ ಮೇಲೆ ದಾಳಿ ಮಾಡಲಿಕ್ಕೆ ಸಾಧ್ಯವೇ ಇರಲಿಲ್ಲ ಎಂದು ಖಚಿತವಾಗಿ ನುಡಿಯುತ್ತಾರೆ ಇಸ್ರೇಲ್ ನಲ್ಲಿ ಆರು ವರ್ಷಗಳಿಂದ ಆರೋಗ್ಯ ಸೇವೆ ಸಲ್ಲಿಸುತ್ತಿರುವ ಗೋಪಾಲಕೃಷ್ಣ. ಸುರಕ್ಷಿತರಾಗಿದ್ದೇವೆ: ದೇವದಾಸ್ ಇಸ್ರೇಲ್ ನಲ್ಲಿ 15 ವರ್ಷಗಳಿಂದ ಉದ್ಯೋಗದಲ್ಲಿರುವ ಕಾರ್ಕಳ ತಾಲೂಕಿನ ಬಜಗೋಳಿಯ ದೇವದಾಸ ಶೆಟ್ಟಿ ಅವರು ಗೆಳೆಯರಿಗೆ ವಿಡಿಯೋವೊಂದನ್ನು ಕಳುಹಿಸಿದ್ದು, ತಾವು ಮತ್ತು ಅಲ್ಲಿರುವ ಭಾರತೀಯರು ಸುರಕ್ಷಿತವಾಗಿದ್ದೇವೆ ಎಂಬ ಸಂದೇಶ ಕಳುಹಿಸಿದ್ದಾರೆ. ತಾವು ಗಡಿಯಿಂದ 22 ಕಿ.ಮೀ. ದೂರದಲ್ಲಿದ್ದೇವೆ, ಉಡುಪಿ, ಕಾರ್ಕಳ ಕಡೆಯಿಂದ ಸುಮಾರು 200 ಮಂದಿ ಇದ್ದೇವೆ. ವರ್ಷದಲ್ಲಿ ನಾಲ್ಕೈದು ಬಾರಿ ತಲೆ ಮೇಲೆ ರಾಕೆಟ್ ಗಳು ಹಾರಿ ಹೋಗ್ತಾನೆ ಇರ್ತವೆ, ಶಬ್ದ ಕೇಳ್ತಾನೆ ಇರ್ತದೆ. ಆದರೆ ಇಸ್ರೇಲ್ ಸರ್ಕಾರ ತನ್ನ ಪ್ರಜೆಗಳ ರಕ್ಷಣೆಗೆ ಆದ್ಯತೆ ನೀಡುತ್ತದೆ. ಆದ್ದರಿಂದ ನಾವು ಸೇಫಾಗಿದ್ದೇವೆ, ಆದ್ದರಿಂದ ಊರಿನಲ್ಲಿರುವ ತಂದೆತಾಯಿ, ಹೆಂಡತಿ ಮಕ್ಕಳು ಹೆದರುವ ಅಗತ್ಯ ಇಲ್ಲ ಎಂದಿದ್ದಾರೆ