ಶಿರಹಟ್ಟಿ ಪಟ್ಟಣದ ಹುತಾತ್ಮ ವೀರಯೋಧ ಮೊಹಮ್ಮದ ಶಬ್ಬೀರ ಅಂಗಡಿ ಸ್ಮರಣಾರ್ಥ ಮಾಗಡಿ ರಸ್ತೆಯ ಶಬ್ಬೀರ ನಗರದಲ್ಲಿ ನಿರ್ಮಿಸಿದ ಸ್ಮಾರಕವನ್ನು ಮಾಜಿ ಸಂಸದ ಐ.ಜಿ.ಸನದಿ ಲೋಕಾರ್ಪಣೆ ಮಾಡಿದರು.
ಶಿರಹಟ್ಟಿ: ದೇಶಕ್ಕಾಗಿ ಜೀವನ ಮುಡಿಪಾಗಿಟ್ಟು ಪ್ರಾಣತೆತ್ತ ಹಾಗೂ ಅಂಗವಿಕಲರಾದ ವೀರ ಯೋಧರ ತ್ಯಾಗಮಯ ಜೀವನ ನಮಗೆಲ್ಲರಿಗೂ ಮಾದರಿ. ದೇಶದ ರಕ್ಷಣೆಗೆ ತಮ್ಮ ಪ್ರಾಣ ಅರ್ಪಿಸಿದವರ ತ್ಯಾಗ ಸ್ಮರಿಸಬೇಕು ಎಂದು ಮಾಜಿ ಸಂಸದ ಪ್ರೊ. ಐ.ಜಿ. ಸನದಿ ಹೇಳಿದರು.
ಪಟ್ಟಣದ ಹುತಾತ್ಮ ವೀರಯೋಧ ಮೊಹಮ್ಮದ ಶಬ್ಬೀರ ಅಂಗಡಿ ಸ್ಮರಣಾರ್ಥ ಮಾಗಡಿ ರಸ್ತೆಯ ಶಬ್ಬೀರ ನಗರದಲ್ಲಿ ನಿರ್ಮಿಸಿದ ಸ್ಮಾರಕ ಲೋಕಾರ್ಪಣೆ ಮಾಡಿ ಮಾತನಾಡಿದರು. ೧೯೯೧ರಲ್ಲಿ ಸಿಆರ್‌ಪಿಎಫ್‌ನಲ್ಲಿ ಸೇವೆಗೆ ಸೇರಿಕೊಂಡು, ಸತತ ೧೨ ವರ್ಷ ನಾಗಾಲ್ಯಾಂಡ್, ಮಣಿಪುರ್, ಛತ್ತೀಸಗಡ, ಜಮ್ಮು-ಕಾಶ್ಮೀರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸೇವೆ ಸಲ್ಲಿಸಿ, ೨೦೦೨ರಲ್ಲಿ ಒಡಿಶಾ ರಾಜ್ಯದ ರಾಯಘಡ ಜಿಲ್ಲೆಯ ಗಥಾಲಪದರ ಗ್ರಾಮದ ಬಳಿ ಶಂಕಿತ ನಕ್ಸಲೀಯರ ನೆಲಬಾಂಬ್ ಸ್ಫೋಟದಿಂದ ಮೊಹಮ್ಮದಶಬ್ಬೀರ ಗೂಡುಸಾಬ್ ಅಂಗಡಿ ಮರಣ ಹೊಂದಿದರು. ಕುಟುಂಬಸ್ಥರ ಹಾಗೂ ಪಟ್ಟಣದ ಜನತೆಯ ಬಹುದಿನಗಳ ಕನಸಿನಂತೆ ಸ್ಮಾರಕ ನಿರ್ಮಿಸಲಾಗಿದೆ ಎಂದರು.
ಸಿಆರ್‌ಪಿಎಫ್ ಯೋಧ ಮಂಜುನಾಥ, ಪಪಂ ಮಾಜಿ ಅಧ್ಯಕ್ಷ ಎಚ್.ಡಿ. ಮಾಗಡಿ ಮಾತನಾಡಿದರು. ಇದೇ ವೇಳೆ ಮೊಹಮ್ಮದಶಬ್ಬೀರ ಅಂಗಡಿ ಕುಟುಂಬದ ಪರವಾಗಿ ಸ್ಮಾರಕ ನಿರ್ಮಿಸಿದ ಶೀಲಾ ಪಾಟೀಲ ಪರಿವಾರ ಮತ್ತು ಸ್ವಾಭಿಮಾನಿ ಬಳಗದವರನ್ನು ಸನ್ಮಾನಿಸಲಾಯಿತು.
ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಶಿರಹಟ್ಟಿ, ಸದಸ್ಯ ಪರಮೇಶ ಪರಬ, ರವಿ ಗುಡಿಮನಿ, ಕೆ.ಎ. ಬಳಿಗೇರ, ನಿವೃತ್ತ ಯೋಧ ಅಮ್ಜದ್ ಹೆಸರೂರ, ಮುತ್ತುರಾಜ ಭಾವಿಮನಿ, ಅಕ್ಬರ ಯಾದಗೀರ, ಗೂಡುಸಾಬ ಅಂಗಡಿ, ಜೈಬುನ್ನಿಸಾ ಅಂಗಡಿ, ಅಲ್ತಾಫ ಅಂಗಡಿ, ಭೂಪಾಲ ಆಲೂರ, ರವೀಂದ್ರನಾಥ ಪಾಟೀಲ, ಶೀಲಾ ಪಾಟೀಲ, ಶಶಿಧರ ಪಾಟೀಲ, ಜಾವೇದ ಶಿಗ್ಲಿ, ಇಮ್ತಿಯಾಜ್ ಶಿಗ್ಲಿ, ಅಬ್ದುಲ್‌ಖಾದರ ಜಿಲಾನಿ, ಮೌಲಾಲಿ ಢಾಲಾಯತ್ ಇತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.