ಶಾಲಾ ಮಕ್ಕಳನ್ನು ಬೆನ್ನಟ್ಟಿದ ಒಂಟಿ ಕಾಡಾನೆ

KannadaprabhaNewsNetwork |  
Published : Aug 12, 2026, 01:45 AM IST
ನರಸಿಂಹರಾಜಪುರ ತಾಲೂಕು ಚಿಕ್ಕಅಗ್ರಹಾರ ವಲಯ ಅರಣ್ಯಾಧಿಕಾರಿಗಳ ಕಚೇರಿ ಎದುರು ನೂರಾರು ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ತಾಲೂಕಿನ ಗುಬ್ಬಿಗಾ ಗ್ರಾಮ ಪಂಚಾಯಿತಿಗೆ ಸೇರಿದ ಸಿದ್ದನಕೊಡಿಗೆ ಕಾಲೋನಿ ಮುಖ್ಯ ರಸ್ತೆಯಲ್ಲಿ ಬಸ್ಸಿಗೆ ಕಾಯುತ್ತಿದ್ದ ಶಾಲಾ ಮಕ್ಕಳನ್ನು ಒಂಟಿ ಕಾಡಾನೆಯೊಂದು ಬೆನ್ನಟ್ಟಿ ಬಂದ ಘಟನೆ ಮಂಗಳವಾರ ಬೆಳಿಗ್ಗೆ 8.45ರ ಸುಮಾರಿಗೆ ನಡೆದಿದೆ.

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ತಾಲೂಕಿನ ಗುಬ್ಬಿಗಾ ಗ್ರಾಮ ಪಂಚಾಯಿತಿಗೆ ಸೇರಿದ ಸಿದ್ದನಕೊಡಿಗೆ ಕಾಲೋನಿ ಮುಖ್ಯ ರಸ್ತೆಯಲ್ಲಿ ಬಸ್ಸಿಗೆ ಕಾಯುತ್ತಿದ್ದ ಶಾಲಾ ಮಕ್ಕಳನ್ನು ಒಂಟಿ ಕಾಡಾನೆಯೊಂದು ಬೆನ್ನಟ್ಟಿ ಬಂದ ಘಟನೆ ಮಂಗಳವಾರ ಬೆಳಿಗ್ಗೆ 8.45ರ ಸುಮಾರಿಗೆ ನಡೆದಿದೆ.

ಸಿದ್ದನಕೊಡಿಗೆ ಕಾಲೋನಿಯಲ್ಲಿ ಬಿ.ಎಚ್. ಕೈಮರ ಹಾಗೂ ಮೂಡಬಾಗಿಲು ಜ್ಞಾನ ಗಂಗೋತ್ರಿ ಪ್ರೌಢಶಾಲೆಗೆ ಹೋಗಲು 6 ಶಾಲಾ ಮಕ್ಕಳು ಶಾಲಾ ಬಸ್ಸಿಗೆ ಕಾಯುತ್ತಿದ್ದರು. ಆಗ ದಿಢೀರ್ ಎಂದು ಅದೇ ರಸ್ತೆಯಲ್ಲಿ ಒಂಟಿ ಆನೆಯು ಮಕ್ಕಳ ಮೇಲೆ ದಾಳಿ ಮಾಡಲು ವೇಗವಾಗಿ ಬಂದಿದೆ. ತಕ್ಷಣ ಶಾಲಾ ಮಕ್ಕಳು ಬ್ಯಾಗ್ ಬಿಸಾಡಿ ಸಮೀಪದ ಮನೆಗಳಿಗೆ ಓಡಿ ಹೋಗಿದ್ದಾರೆ. ಸ್ವಲ್ಪ ದೂರ ಬಂದ ಆನೆ ನಂತರ ಪಕ್ಕದ ಅಕೇಸಿಯಾ ಪ್ಲಾಂಟೇಷನ್ ಕಡೆಗೆ ಹೋಗಿದೆ. ವಿಷಯ ತಿಳಿದ ಗ್ರಾಮಸ್ಥರು ಆಗಮಿಸಿದಾಗ ಒಂಟಿ ಆನೆ ಕಾಣಲಿಲ್ಲ. ಆದರೆ, ಆನೆಯ ಹೆಜ್ಜೆ ಗುರುತು ಕಂಡಿದೆ.

ಗ್ರಾಮಸ್ಥರ ಪ್ರಕಾರ ಕಳೆದ 6 ತಿಂಗಳಿಂದ ಅರಳಿಕೊಪ್ಪ, ವಗಡೆ, ಸಂಕ್ಸೆ, ಗುಬ್ಬಿಗಾ ಗ್ರಾಮಗಳಲ್ಲೇ ಒಂಟಿ ಆನೆ ಸುತ್ತಾಡುತ್ತಾ ಅಡಿಕೆ, ಬಾಳೆ, ತೆಂಗಿನ ಮರ ಹಾಗೂ ಭತ್ತದ ಗದ್ದೆ ಹಾಳು ಮಾಡುತ್ತಿದೆ. ಅರಣ್ಯ ಇಲಾಖೆ ಹಾಗೂ ಆನೆ ನಿಗ್ರಹ ಪಡೆಯವರು ಆಗಮಿಸಿ ಪಟಾಕಿ ಸಿಡಿಸಿ ಕಾಡಾನೆ ಅಟ್ಟಿದರೂ ಪ್ರಯೋಜನವಾಗದೆ ಮತ್ತೆ ವಾಪಸು ಬಂದು ಇದೇ ಗ್ರಾಮಗಳಲ್ಲೇ ಸುತ್ತಾಡುತ್ತಿದೆ. ಹೆಚ್ಚಾಗಿ ಸಿದ್ದನಕೊಡಿಗೆ, ಮಾವಿನಮನೆ, ಗುಡಿಕೆರೆ,ಕೋಡಿಹಳ್ಳಿ, ಟೆಂಕಬೈಲು ಮುಂತಾದ ಹಳ್ಳಿಗಳಲ್ಲೇ ಸುತ್ತಾಡುತ್ತಿದೆ.

ಅರಣ್ಯ ಇಲಾಖೆಗೆ ಮುತ್ತಿಗೆ:

ಒಂಟಿ ಆನೆಯು ಶಾಲೆಯ ಮಕ್ಕಳನ್ನು ಬೆನ್ನಟ್ಟಿದ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಗ್ರಾಮಸ್ಥರು ಒಟ್ಟಾಗಿ ಚಿಕ್ಕಅಗ್ರಹಾರ ವಲಯ ಅರಣ್ಯಾಧಿಕಾರಿಗಳ ಕಚೇರಿಗೆ ಆಗಮಿಸಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ರೈತ ಮುಖಂಡ ಎಂ.ಎನ್. ನಾಗೇಶ್ ಮಾತನಾಡಿ, ಆ ಭಾಗದಲ್ಲಿ 3 ಒಂಟಿ ಆನೆಗಳು ಸುತ್ತಾಡುತ್ತಿದೆ.ಅದರಲ್ಲಿ ಒಂದು ಪುಂಡಾನೆಯ ಮಕ್ಕಳನ್ನು ಅಟ್ಟಿಸಿಕೊಂಡು ಬಂದಿದೆ. ಕಾಡಿನಿಂದ ಗ್ರಾಮಕ್ಕೆ ಕಾಡಾನೆ ಬಾರದಂತೆ ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕು. ಬೇಸಿಗೆ ದಿನದಲ್ಲೇ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿ ಭದ್ರಾ ಹಿನ್ನೀರಿನಿಂದ ಒಂಟಿ ಆನೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದ್ದೆವು. ಅವರು ಭರವಸೆ ನೀಡಿದ್ದರು. ಆದರೆ, ಭರವಸೆ ಈಡೇರಿಸಿಲ್ಲ. ಈ ಆನೆಯಿಂದ ಅವಘಡವಾಗದಂತೆ ಅರಣ್ಯ ಇಲಾಖೆಯು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಡಿ.ಲೋಕೇಶ್ ಮಾತನಾಡಿ, ಈ ಪುಂಡಾನೆ ಹಿಡಿದು ಸ್ಥಳಾಂತರಿಸಬೇಕು.ಪಟಾಕಿ ಸಿಡಿಸಿ ಓಡಿಸಿದರೂ ಮತ್ತೆ ಬರುತ್ತಿದೆ.4 ಗ್ರಾಮದ ಜನರಿಗೆ ತೀವ್ರ ತೊಂದರೆ ನೀಡುತ್ತಿದೆ ಎಂದರು.

ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಶ್ರೀ ಹರ್ಷ ಮಾತನಾಡಿ, ಯಾವುದೇ ಅನಾಹುತ ಆಗುವ ಮುನ್ನ ಅರಣ್ಯ ಇಲಾಖೆ ಕ್ರಮ ತೆಗೆದುಕೊಳ್ಳಬೇಕು. ಬೆಳೆ ಹಾನಿಯಾದರೆ ಮತ್ತೆ ಬೆಳೆ ಬೆಳೆಯಬಹುದು. ಆದರೆ ಜೀವ ಹಾನಿಯಾದರೆ ಯಾರು ಜವಾಬ್ದಾರಿ. ಅರಣ್ಯ ಇಲಾಖೆಯವರು ಭರವಸೆ ನೀಡಿದಂತೆ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ತೀವ್ರ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ನಂತರ ಉಪ ವಲಯ ಅರಣ್ಯಾಧಿಕಾರಿ ಬೀರೇಶ್ ಹೊನ್ನಮ್ಮನವರ್ ಅವರಿಗೆ ಮನವಿ ಅರ್ಪಿಸಿದರು. ಗ್ರಾಮಸ್ಥರಾದ ಮಾವಿನ ಮನೆ ಮಂಜುನಾಥ್, ಸಿದ್ದನಕೊಡಿಗೆ ಮನುಕುಮಾರ್, ಗುಡ್ಡಿಕೆರೆ ಸುಮಂತ್, ಮಾವಿನ ಮನೆ ವಿಕಾಸ್, ಕಲ್ಮನೆ ಸತೀಶ್, ಮಂಜು ಮಾವಿನಮನೆ, ಭವಾನಿ,ಭಾಗ್ಯ, ಗಾನವಿ, ಗೀತ, ಅಶ್ವಿನಿ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನನ್ನನ್ನು ಮುಗಿಸಲು ಕಿಮ್ಮನೆ ಸುಪಾರಿ ನೀಡಲೂ ಸಿದ್ಧ: ಶಾಸಕ ಆರಗ ಜ್ಞಾನೇಂದ್ರ ಆರೋಪ
ರಾಜ್ಯ ಸರ್ಕಾರದ ಆಡಳಿತ ವೈಪಲ್ಯ ಖಂಡಿಸಿ ಬಿಜೆಪಿ ಪ್ರತಿಭಟನೆ