ಸೋಲೂರು ಹೋಬಳಿ ನೆಲಮಂಗಲಕ್ಕೆಸೇರ್ಪಡೆಗೆ ಬೆಂಬಲ: ಬಿಜೆಪಿಯ ಜಗದೀಶ್‌

KannadaprabhaNewsNetwork |  
Published : Oct 14, 2024, 01:20 AM IST
ಪೋಟೋ 8 : ಬಿಜೆಪಿ ತಾಲ್ಲೂಕು ಅಧ್ಯಕ್ಷ ಜಗದೀಶ್ ಚೌಧರಿ | Kannada Prabha

ಸಾರಾಂಶ

ದಾಬಸ್‌ಪೇಟೆ: ಸೋಲೂರು ಹೋಬಳಿಯನ್ನು ನೆಲಮಂಗಲ ತಾಲೂಕಿಗೆ ಸೇರ್ಪಡೆಗೊಳಿಸಲು ಸರ್ಕಾರದ ಮಟ್ಟದಲ್ಲಿ ಶ್ರಮಿಸುತ್ತಿರುವ ನಮ್ಮ ಕ್ಷೇತ್ರದ ಶಾಸಕ ಎನ್.ಶ್ರೀನಿವಾಸ್ ಅವರಿಗೆ ಪಕ್ಷಬೇಧವಿಲ್ಲದೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಚೌಧರಿ ತಿಳಿಸಿದರು.

ದಾಬಸ್‌ಪೇಟೆ: ಸೋಲೂರು ಹೋಬಳಿಯನ್ನು ನೆಲಮಂಗಲ ತಾಲೂಕಿಗೆ ಸೇರ್ಪಡೆಗೊಳಿಸಲು ಸರ್ಕಾರದ ಮಟ್ಟದಲ್ಲಿ ಶ್ರಮಿಸುತ್ತಿರುವ ನಮ್ಮ ಕ್ಷೇತ್ರದ ಶಾಸಕ ಎನ್.ಶ್ರೀನಿವಾಸ್ ಅವರಿಗೆ ಪಕ್ಷಬೇಧವಿಲ್ಲದೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಚೌಧರಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಗಡಿ ತಾಲೂಕಿಗೆ ಒಳಪಟ್ಟಿರುವ ಸೋಲೂರು ಹೋಬಳಿ ಕಳೆದ 20 ವರ್ಷಗಳಿಂದ ನೆಲಮಂಗಲ ವಿಧಾನಸಭಾ ಕ್ಷೇತ್ರ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದೆ. ಶಾಸಕರು ಹಾಗೂ ಲೋಕಸಭಾ ಸದಸ್ಯರನ್ನು ಹೋಬಳಿಯ ಜನತೆ ಆಯ್ಕೆ ಮಾಡುತ್ತಿದ್ದಾರೆ. ಆಡಳಿತಾತ್ಮಕ ದೃಷ್ಟಿಯಿಂದ ಮಾಗಡಿ ತಾಲೂಕಿಗೆ ಸೇರುತ್ತಿದ್ದು, ತಾಲೂಕಿನಲ್ಲಿ ಜನರ ಸಮಸ್ಯೆಗಳಿಗೆ ಪರಿಹಾರದ ಸಿಗದ ಹಿನ್ನೆಲೆಯಲ್ಲಿ ಸೋಲೂರು ಹೋಬಳಿಯನ್ನು ನೆಲಮಂಗಲ ತಾಲೂಕಿಗೆ ಸೇರಿಸಿ ಕ್ಷೇತ್ರದ ಜನತೆಗೆ ಸರ್ಕಾರ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಶಾಸಕರಿಗೆ ಸಂಪೂರ್ಣ ಬೆಂಬಲ: 2008ರಲ್ಲಿ ಶಾಸಕರಾಗಿದ್ದ ಎಂ.ವಿ.ನಾಗರಾಜು, 2013 ಹಾಗೂ 2018ರಲ್ಲಿ ಶಾಸಕರಾಗಿದ್ದ ಡಾ.ಕೆ.ಶ್ರೀನಿವಾಸಮೂರ್ತಿ ಅವರು ಸಹ ಸೋಲೂರು ಹೋಬಳಿಯನ್ನು ನೆಲಮಂಗಲ ತಾಲೂಕಿಗೆ ಸೇರ್ಪಡೆಗೊಳಿಸಲು ಸರ್ಕಾರಕ್ಕೆ ಪತ್ರ ಬರೆದಿದ್ದರು. ಹಾಲಿ ಶಾಸಕ ಎನ್.ಶ್ರೀನಿವಾಸ್ ಒಂದು ಹೆಜ್ಜೆ ಮುಂದೆ ಹೋಗಿ ಸಚಿವ ಸಂಪುಟದಲ್ಲಿ ಈ ವಿಷಯ ಚರ್ಚೆಗೆ ಬರುವಂತೆ ಸರ್ಕಾರದ ಮಟ್ಟದಲ್ಲಿ ಶ್ರಮಿಸುತ್ತಿದ್ದು ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಸೋಲೂರು ಹೋಬಳಿ ನೆಲಮಂಗಲ ತಾಲೂಕಿಗೆ ಸೇರಿಸಲು ಬಿಜೆಪಿ ಪಕ್ಷದ ಸಂಪೂರ್ಣ ಸಹಮತವಿದೆ ಎಂದು ಹೇಳಿದರು.

ಬಾಲಕೃಷ್ಣ ಮನಸ್ಸು ಮಾಡಬೇಕು:

ಈ ವಿಚಾರದಲ್ಲಿ ಮಾಗಡಿ ಹಾಗೂ ನೆಲಮಂಗಲದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರೇ ಇದ್ದು, ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಸೋಲೂರನ್ನು ನೆಲಮಂಗಲ ತಾಲೂಕಿಗೆ ಸೇರ್ಪಡೆಗೊಳಿಸಲು ವಿರೋಧಿಸುತ್ತಿದ್ದಾರೆ. ಆದರೆ ಇನ್ನು ಮುಂದೆ ವಿರೋಧಿಸದೆ ನೆಲಮಂಗಲ ತಾಲೂಕಿಗೆ ಸೇರ್ಪಡೆಗೊಳಿಸಲು ಮನಸ್ಸು ಮಾಡಿ ನನ್ನ ಅಭ್ಯಂತರವಿಲ್ಲವೆಂದು ಸರ್ಕಾರಕ್ಕೆ ತಿಳಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಪಕ್ಷದಿಂದಲೂ ಡಿಸಿಗೆ ಮನವಿ:

ನೆಲಮಂಗಲ ತಾಲೂಕಿಗೆ ಸೋಲೂರು ಹೋಬಳಿ ಸೇರ್ಪಡೆ ವಿಚಾರವಾಗಿ ಬಿಜೆಪಿ ಪಕ್ಷದಿಂದ ಬೈಕ್ ರ‍್ಯಾಲಿ ಅಥವಾ ಪಾದಯಾತ್ರೆ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಯೋಜನೆ ಮಾಡಲಿದ್ದು, ಶೀಘ್ರದಲ್ಲಿ ಕಾರ್ಯಕರ್ತರ ಜೊತೆ ಚರ್ಚಿಸಿ ದಿನಾಂಕ ನಿಗಡಿಪಡಿಸುತ್ತೇವೆ ಎಂದರು.

ಬಾಕ್ಸ್‌.........

ಡಿಸಿಎಂ ಮಾತು ಉಳಿಸಿಕೊಳ್ಳುವರೋ ನೋಡೋಣ

ಇತ್ತೀಚಿಗೆ ನೆಲಮಂಗಲದಲ್ಲಿ ನಡೆದ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸೋಲೂರು ಹೋಬಳಿಯನ್ನು ನೆಲಮಂಗಲ ತಾಲೂಕಿಗೆ ಸೇರ್ಪಡೆ ಮಾಡಲು ನಮ್ಮ ಸರ್ಕಾರ ಕ್ರಮ ವಹಿಸಲಿದೆ. ಈ ಕ್ಷೇತ್ರದ ಶಾಸಕರು ಒತ್ತಡ ಹಾಕುತ್ತಿದ್ದು ಅವರ ಶ್ರಮಕ್ಕೆ ಪ್ರತಿಫಲ ದೊರೆಯಲಿದೆ ಎಂದು ಮಾಧ್ಯಮಗಳ ಮೂಲಕ ತಿಳಿಸಿದ್ದರು. ಇದೀಗ ಬಾಲಕೃಷ್ಣ ವಿರೋಧಿಸಿದ್ದು ಅವರ ಮಾತಿಗೆ ಬೆಲೆ ನೀಡದೆ ಕೊಟ್ಟ ಮಾತನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಉಳಿಸಿಕೊಳ್ಳುತ್ತಾರೋ ಇಲ್ಲವೋ ಕಾದು ನೋಡೋಣ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಚೌಧರಿ ಹೇಳಿದರು.

(ಮಗ್‌ಶಾಟ್‌ ಮಾತ್ರ ಸಾಕು)

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ