ತಾಂತ್ರಿಕ ಸಮಸ್ಯೆಗೆ ಪರಿಹಾರ: ಶ್ರೀನಿವಾಸ್ ರಾವ್

KannadaprabhaNewsNetwork | Published : Mar 7, 2025 12:46 AM

ಸಾರಾಂಶ

ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕಂಪ್ಲಿ ತಾಲೂಕಿನಲ್ಲಿ ಸುಸೂತ್ರವಾಗಿ ನಡೆಯುತ್ತಿದೆ. ಕೆಲವು ತಾಂತ್ರಿಕ ಸಮಸ್ಯೆಗಳನ್ನು ಆಯಾ ಇಲಾಖೆಯ ಮಟ್ಟದಲ್ಲಿ ಪರಿಹರಿಸಲಾಗುತ್ತಿದೆ.

ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಕನ್ನಡಪ್ರಭ ವಾರ್ತೆ ಕಂಪ್ಲಿ

ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕಂಪ್ಲಿ ತಾಲೂಕಿನಲ್ಲಿ ಸುಸೂತ್ರವಾಗಿ ನಡೆಯುತ್ತಿದೆ. ಕೆಲವು ತಾಂತ್ರಿಕ ಸಮಸ್ಯೆಗಳನ್ನು ಆಯಾ ಇಲಾಖೆಯ ಮಟ್ಟದಲ್ಲಿ ಪರಿಹರಿಸಲಾಗುತ್ತಿದೆ ಎಂದು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಶ್ರೀನಿವಾಸ್ ರಾವ್ ತಿಳಿಸಿದರು.

ಪಟ್ಟಣದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಬುಧವಾರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯಿಂದ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿ ಅವರು ಮಾಹಿತಿ ನೀಡಿದರು.

ಯುವ ನಿಧಿ ಯೋಜನೆಯ ಮೂಲಕು ತಾಲೂಕಿನಲ್ಲಿ 352 ಪುರುಷ, 334 ಮಹಿಳೆಯರು ಸೇರಿ ಒಟ್ಟಾರೆ 686 ಫಲಾನುಭವಿಗಳು ಯೋಜನೆಯ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. 686 ಜನ ಫಲಾನುಭವಿಗಳಿಗೆ ಈವರೆಗೂ ₹71,59,500 ಸರ್ಕಾರ ಬಿಡುಗಡೆಗೊಳಿಸಿದೆ. ಗೃಹ ಜ್ಯೋತಿ ಯೋಜನೆಯಲ್ಲಿ ನಗರದಲ್ಲಿ 10,260 ಗ್ರಾಮೀಣ 13,222 ಸೇರಿ ಒಟ್ಟಾರೆ ತಾಲೂಕಿನಲ್ಲಿನ 23,482 ಫಲಾನುಭವಿಗಳಿಗೆ ₹1,10,18,083 ಸರ್ಕಾರ ಬಿಡುಗಡೆಗೊಳಿಸಿದೆ. ಅನ್ನಭಾಗ್ಯ ಯೋಜನೆಯಲ್ಲಿ ಈವರೆಗೂ 1,77,592 ಪಡಿತರ ಚೀಟಿಗಳಿದ್ದು, 6,54,438 ಜನ ಫಲಾನುಭವಿಗಳಿಗೆ ಸೇರಿ ಒಟ್ಟಾರೆ ₹10,77,43,280 ಸರ್ಕಾರ ಬಿಡುಗಡೆಗೊಳಿಸಿದೆ. ಗೃಹ ಲಕ್ಷ್ಮಿ ಯೋಜನೆಯಲ್ಲಿ 30,050 ಫಲಾನುಭವಿಗಳಿದ್ದು 2023ರ ಆಗಸ್ಟ್ ನಿಂದ 2024ರ ಸೆಪ್ಟೆಂಬರ್ ನವರೆಗೂ ಸೇರಿ ಒಟ್ಟಾರೆ ₹69 ಕೋಟಿ ಸರ್ಕಾರ ಬಿಡುಗಡೆಗೊಳಿಸಿದೆ. ಶಕ್ತಿ ಯೋಜನೆಯ ಮೂಲಕ ಕುರುಗೋಡು-ಕಂಪ್ಲಿ ಸೇರಿ 2023ರ ಜೂನ್ ರಿಂದ 2025ರ ಫೆಬ್ರವರಿ ವರೆಗೂ ಒಟ್ಟಾರೆ 40,53,083 ಫಲಾನುಭವಿಗಳು ಬಸ್‌ನಲ್ಲಿ ಪ್ರಯಾಣಿಸಿದ್ದು ಇದಕ್ಕಾಗಿ ಸರ್ಕಾರ ₹17,19,50,198 ಬಿಡುಗಡೆಗೊಳಿಸಿದೆ ಎಂದರು.

ಇದೇ ವೇಳೆ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರು ಮಾತನಾಡಿ, ಸಾರಿಗೆ ಇಲಾಖೆಯ ಬಸ್ ಚಾಲಕರು ಮಹಿಳೆಯರು ನೆರೆದಿರುವ ಕಡೆ ಬಸ್ ನಿಲ್ಲಿಸದೆ ಹಾಗೆ ಹೊರಡುತ್ತಾರೆ. ಇದರಿಂದ ಮಹಿಳೆಯರಿಗೆ ಸಮಸ್ಯೆಯಾಗಿದ್ದು ಅನೇಕರು ಆಟೋಗಳ ಮೊರೆ ಹೋಗುವುದು ಕಂಡು ಬರುತ್ತಿದೆ. ಅಧಿಕಾರಿಗಳು ಗಮನ ಹರಿಸಿ ಈ ರೀತಿ ಸಮಸ್ಯೆ ಮರುಕಳಿಸದಂತೆ ಕ್ರಮ ವಹಿಸುವ ಮೂಲಕ ಶಕ್ತಿ ಯೋಜನೆಯ ಯಶಸ್ವಿಗೆ ಸಹಕರಿಸಬೇಕು ಎಂದರು.

ತಾಂತ್ರಿಕ ಸಮಸ್ಯೆ ಸರಿಪಡಿಸಿ:

ನಿರುದ್ಯೋಗಿಗಳ ಆರ್ಥಿಕ ನೆರವಿಗಾಗಿ ಸರ್ಕಾರ ಯುವನಿಧಿ ಯೋಜನೆ ಜಾರಿಗೊಳಿಸಿದ್ದು, ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಲು ತಾಂತ್ರಿಕ ಸಮಸ್ಯೆ ಎದುರಾಗಿದೆ. ಈ ಯೋಜನೆ ಇದ್ದು ಉಪಯೋಗಕ್ಕೆ ಬಾರದಂತಾಗಿದೆ ಎಂದರು. ಈ ಕುರಿತು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ತರಬೇತುದಾರ ವೆಂಕಟೇಶ್ ಪ್ರತಿಕ್ರಿಯಿಸಿ ಮಾತನಾಡಿ, ಯುವನಿಧಿ ಅರ್ಜಿ ಸಲ್ಲಿಕೆಯಲ್ಲಿ ತಾಂತ್ರಿಕ ಸಮಸ್ಯೆಯಾಗಿದ್ದು, ಈ ಕುರಿತು ಸರ್ಕಾರದ ಗಮನಕ್ಕೆ ತರಲಾಗಿದೆ. ಹಂತ-ಹಂತವಾಗಿ ತಾಂತ್ರಿಕ ಸಮಸ್ಯೆ ನಿವಾರಣೆಯಾಗಲಿದೆ. ಪದವಿ, ಡಿಪ್ಲೋಮೊ ಅಥವಾ ಸ್ನಾತಕೋತ್ತರ ಪದವಿ ಮುಗಿಸಿದ ಅರ್ಹ ಅಭ್ಯರ್ಥಿಗಳು ಫಲಿತಾಂಶ ಬಂದ 180 ದಿನಗಳ ಬಳಿಕ ಅರ್ಜಿ ಸಲ್ಲಿಸಬೇಕು. ಇನ್ನು ಈ ಯುವ ನಿಧಿ ಯೋಜನೆಗೆ ಯಾವುದೇ ರೀತಿಯ ಕೊನೆಯ ದಿನಾಂಕ ಇರುವುದಿಲ್ಲ. ಯಾವುದೇ ಗೊಂದಲಗಳಿಗೆ ಕಿವಿಗೊಡದೆ ಯಾವುದೇ ಸಮಸ್ಯೆ ಇದ್ದರೂ ಇಲಾಖೆಗೆ ಸಂಪರ್ಕಿಸಲು ತಿಳಿಸಿದರು.

ಈ ಸಂದರ್ಭ ತಾಪಂ ಇಒ ಆರ್.ಕೆ. ಶ್ರೀಕುಮಾರ್, ಎಡಿ ಕೆ.ಎಸ್. ಮಲ್ಲನಗೌಡ, ಜೆಸ್ಕಾಂ ಎಇಇ ಮಲ್ಲಿಕಾರ್ಜುನಗೌಡ, ಆಹಾರ ನಿರೀಕ್ಷಕ ವಿರುಪಾಕ್ಷಿ ಗೌಡ, ಕೆಎಸ್‌ಆರ್‌ಟಿಸಿ ಕುರುಗೋಡು ವಿಭಾಗೀಯ ವ್ಯವಸ್ಥಾಪಕ ಚಂದ್ರಶೇಖರ್, ಸಿಡಿಪಿಒ ಮೋಹನ್ ಎಸ್. ಕಾಳಾಪುರ ಸೇರಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಿದ್ದರು.

Share this article