ಕನ್ನಡಪ್ರಭ ವಾರ್ತೆ ಅರಕಲಗೂಡು ರೈತರ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ವ್ಯವಸ್ಥಿತ ರೀತಿಯಲ್ಲಿ ಸರಿಪಡಿಸಿಕೊಡುವ ಕೆಲಸವನ್ನು ಕಂದಾಯ ಇಲಾಖೆ ನಿಗದಿತ ಕಾಲಮಿತಿಯಲ್ಲಿ ಮಾಡಿಕೊಡುವಂತೆ ಶಾಸಕ ಎ. ಮಂಜು ತಿಳಿಸಿದರು.
ಜನರು ಸರ್ಕಾರದ ಸವಲತ್ತುಗಳನ್ನು ಬಳಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳುವ ಜತೆಗೆ ಇತರೆ ಅರ್ಹರಿಗೂ ಇದರ ಬಗ್ಗೆ ಅರಿವು ಮೂಡಿಸಬೇಕು. ರೈತಾಪಿ ವರ್ಗದವರಿಗೆ ಹಲವು ತೊಂದರೆಗಳಿವೆ. ಇದರಿಂದಾಗಿಯೇ ಕೃಷಿಕರ ಮಕ್ಕಳಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬರುತ್ತಿಲ್ಲ. ರೈತರು ದುಶ್ಚಟಗಳಿಂದ ದೂರವಿದ್ದು ತಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಲು ಮುಂದಾಗುವಂತೆ ಸಲಹೆ ನೀಡಿದರು. ತಹಶೀಲ್ದಾರ್ ಕೆ.ಸಿ. ಸೌಮ್ಯ ಮಾತನಾಡಿ, ಕಂದಾಯ ಇಲಾಖೆಯ ಸವಲತ್ತುಗಳನ್ನು ಜನರಿಗೆ ತಲುಪಿಸುವ ಮೂಲಕ ಅರ್ಥಪೂರ್ಣ ರೀತಿಯಲ್ಲಿ ಭೂಮಿ ದಸರಾ ಆಚರಣೆ ನಡೆಸಿದ್ದು, ಇಲಾಖೆಯನ್ನು ಚುರುಕುಗೊಳಿಸಿ ಜನಸ್ನೇಹಿ ಮಾಡುವುದಾಗಿ ಹೇಳಿದರು.
50 ಜನರಿಗೆ ಬಗರ್‌ಹುಕುಂ ಸಾಗುವಳಿ ಪತ್ರ, 26 ಜನರಿಗೆ ವಿವಿಧ ಪಿಂಚಣಿ ಯೋಜನೆಯ ಮಂಜೂರಾತಿ ಪತ್ರ ಹಾಗೂ 5 ಮಂದಿ ಅರ್ಚಕರಿಗೆ ನೇಮಕಾತಿ ಪತ್ರವನ್ನು ವಿತರಿಸಲಾಯಿತು. ಪಪಂ ಉಪಾಧ್ಯಕ್ಷ ಸುಬಾನ್ ಷರೀಫ್, ದೊಡ್ಡಮಗ್ಗೆ ಗ್ರಾಪಂ ಅಧ್ಯಕ್ಷ ಕೊಡಕಹಳ್ಳಿ ಅಶೋಕ್, ಮುಖಂಡ ಎಂ.ಜಿ.ರಾಜೇಗೌಡ, ಗ್ರೇಡ್ -2 ತಹಶೀಲ್ದಾರ್ ಮಲ್ಲಿಕಾರ್ಜುನ್, ತಾಪಂ ಇಒ ಡಿ.ಡಿ.ಪ್ರಕಾಶ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಿ. ರಾಜೇಶ್, ಉಪ ನೋಂದಣಿ ಅಧಿಕಾರಿ ಸೋಮಶೇಖರ್, ಎಡಿಎಲ್‌ಆರ್ ಸುಂದರ್ , ಶಿರಸ್ತೇದಾರ್ ಸಿ. ಸ್ವಾಮಿ, ಕಂದಾಯ ನಿರೀಕ್ಷಕ ಕೆ.ಎಸ್. ಲೋಕೇಶ್. ದಸರಾ ಉತ್ಸವ ಸಮಿತಿಯ ರವಿಕುಮಾರ್, ಭಾಸ್ಕರ್, ಗೋಪಾಲ್ ಉಪಸ್ಥಿತರಿದ್ದರು.