ರೈತರ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಿ

KannadaprabhaNewsNetwork | Published : May 10, 2025 1:22 AM
Follow Us

ಸಾರಾಂಶ

ತಾಲೂಕಿನ ರೈತರ ಜ್ವಲಂತ ಸಮಸ್ಯೆಗಳನ್ನು ಕೂಡಲೇ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಾಮೂಹಿಕ ನಾಯಕತ್ವದಲ್ಲಿ ಶುಕ್ರವಾರ ತಾಲೂಕು ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ, ಅರಕಲಗೂಡು

ತಾಲೂಕಿನ ರೈತರ ಜ್ವಲಂತ ಸಮಸ್ಯೆಗಳನ್ನು ಕೂಡಲೇ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಾಮೂಹಿಕ ನಾಯಕತ್ವದಲ್ಲಿ ಶುಕ್ರವಾರ ತಾಲೂಕು ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿದರು.

ಅನಕೃ ವೃತ್ತದಲ್ಲಿ ಜಮಾವಣೆಗೊಂಡ ರೈತರು ಮಾನವ ಸರಪಳಿ ನಿರ್ಮಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಅನಕೃ ವೃತ್ತದಿಂದ ತಾಲೂಕು ಕಚೇರಿವೆರೆಗೆ ಮೆರವಣಿಗೆಯಲ್ಲಿ ತೆರಳಿ, ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.ಈಗಾಗಲೇ ಮಳೆ ಆರಂಭಗೊಂಡಿದ್ದು, ಕೆಲವು ಬೆಳೆಗಳ ಬಿತ್ತನೆ ಆರಂಭಗೊಂಡಿದೆ. ರೈತರಿಗೆ ಅಗತ್ಯವಾಗಿ ಬೇಕಿರುವ ರಾಸಾಯನಿಕ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳ ಬೆಲೆ ಏರಿಕೆಯಾಗಿದೆ. ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ದಿನ ನಿತ್ಯ ಬಳಕೆಯ ವಸ್ತುಗಳ ಬೆಲೆಯನ್ನು ಅಧಿಕವಾಗಿ ಹೆಚ್ಚಿಸಿ ಜನ ಸಾಮಾನ್ಯರಿಗೆ ಹೊರೆಯಂಬ ಬರೆಯನ್ನು ವಿಧಿಸಲಾಗುತ್ತಿದೆ.ಈ ಬೆಲೆ ಏರಿಕೆಯಿಂದ ರೈತರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಬದಲಾಗಿ ಶೋಷಣೆ ಮಾಡಲಾಗುತ್ತಿದೆ. ಗಂಗನಾಳು ಏತನೀರಾವರಿ ಯೋಜನೆಯಿಂದ ಬೇಸಿಗೆ ಕಾಲದಲ್ಲಿ ಕೆರೆ ಕಟ್ಟೆಗಳಿಗೆ ನೀರು ತುಂಬಿಸಬೇಕು. ಬೇಸಿಗೆ ಆರಂಭಗೊಂಡು ಮೂರು ತಿಂಗಳು ಕಳೆದರೂ ಕೂಡ ನೀರು ಹರಿಸಿಲ್ಲ. ಕೂಡಲೇ ಕೆರೆ ಕಟ್ಟೆಗಳಿಗೆ ನೀರು ಹರಿಸಿ ಜನ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಬೇಕಿದೆ. ಪ್ರಮುಖವಾಗಿ ರೈತರಿಗೆ ವಿವಿಧ ಇಲಾಖೆಗಳಿಂದ ಆಗುತ್ತಿರುವ ಲೋಪ ಕುರಿತು ಅಧಿಕಾರಿಗಳ ಸಭೆ ಕರೆಯುವಂತೆ ತಾಲೂಕು ದಂಡಾಧಿಕಾರಿಯವರಿಗೆ ಮನವಿ ಸಲ್ಲಿಸಿ ತಿಂಗಳು ಕಳೆದಿದ್ದರೂ ಕೂಡ ತಹಸೀಲ್ದಾರ್ ಕ್ರಮ ಕೈಗೊಂಡಿಲ್ಲ.

ಅರಣ್ಯ ಇಲಾಖೆಯಲ್ಲಿ ಗಿಡ ನೆಟ್ಟಿರುವ ರೈತರಿಗೆ ಇದುವರೆಗೂ ಹಣ ಹಾಕಿಲ್ಲ. ಕೃಷಿ, ತೋಟಗಾರಿಕೆ ಮತ್ತು ರೇಷ್ಮೇ ಇಲಾಖೆಗಳಲ್ಲಿ ರೈತರಿಗೆ ಸಿಗಬೇಕಾದ ಸವಲತ್ತುಗಳು ಪ್ರಾಮಾಣಿಕ ರೈತರಿಗೆ ಸಿಗದೇ ಶ್ರೀಮಂತರ ಪಾಲಾಗುತ್ತಿವೆ. ಖಾಸಗಿ ಆಗ್ರೋ ಕೇಂದ್ರಗಳಿಂದ ಕಳಪೆ ಬೀಜ, ಕೀಟನಾಶಕ ಮತ್ತು ಗೊಬ್ಬರಗಳನ್ನು ಮಾರಾಟ ಮಾಡುತ್ತಿದ್ದರೂ ಕೃಷಿ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ತಾಲೂಕು ಘಟಕ ಅಧ್ಯಕ್ಷ ಹೊಂಬೇಗೌಡ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ಎಲ್.ಜಗದೀಶ್, ರೈತ ಸಂಘ ಕಾರ್ಯಾಧ್ಯಕ್ಷ ಹೊನ್ನವಳ್ಳಿ ಭುವನೇಶ್, ಸಂಚಾಲಕ ರವಿ, ತಾಲೂಕು ಉಪಾಧ್ಯಕ್ಷ ಮಂಜಣ್ಣ,ಕಾರ್ಯದರ್ಶಿ ವೀರೇಂದ್ರ ಹಾಗೂ ಹಿರಿಯ ಹೋರಾಟಗಾರರಾದ ಕೃಷ್ಣೇಗೌಡ,ಚಲುವೇರಾಜೆ ಅರಸು, ಲಕ್ಷ್ಮಮ್ಮ ಮತ್ತಿತರಿದ್ದರು.