ಮುಂಗಾರಿಗೆ ಈಗಿನಿಂದಲೇ ಮುನ್ನೆಚ್ಚರಿಕಾ ಕ್ರಮ ವಹಿಸಿ: ಜಿಲ್ಲಾಧಿಕಾರಿ

KannadaprabhaNewsNetwork |  
Published : May 10, 2025, 01:22 AM IST
ಚಿತ್ರ : 9ಎಂಡಿಕೆ1 : ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು.  | Kannada Prabha

ಸಾರಾಂಶ

ಕೊಡಗು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ‘ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ’ ನಡೆಯಿತು. ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮುಂಗಾರು ಸಂಬಂಧ ನೋಡಲ್ ಅಧಿಕಾರಿಗಳು ಹಾಗೂ ಎಂಜಿನಿಯರ್‌ಗಳು ಈಗಿನಿಂದಲೇ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದ್ದಾರೆ.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ‘ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಜೂನ್‌ನಲ್ಲಿ ಮುಂಗಾರು ಆರಂಭವಾಗುವ ಸಾಧ್ಯತೆ ಇದೆ. ಆದ್ದರಿಂದ ವ್ಯಾಪಕ ಮಳೆಯಿಂದ ಸಂಭವಿಸಬಹುದಾದ ಅನಾಹುತವನ್ನು ತಡೆಯುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಮುಂಗಾರು ಸಂದರ್ಭದಲ್ಲಿ ಯಾವುದೇ ರೀತಿಯ ಪ್ರಾಣ ಹಾನಿ, ಜಾನುವಾರು ಹಾನಿಯಾಗದಂತೆ ಎಚ್ಚರವಹಿಸಬೇಕು ಎಂದು ಸೂಚಿಸಿದರು.

ಈಗಾಗಲೇ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ತಮ್ಮ ತಮ್ಮ ವ್ಯಾಪ್ತಿಯಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ನಿಗಾವಹಿಸಬೇಕು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನರ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಅಗ್ನಿಶಾಮಕ ಸಿಬ್ಬಂದಿ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಎನ್‌ಡಿಆರ್‌ಎಫ್ ತಂಡದ ಜೊತೆ ಸಮನ್ವಯ ಸಾಧಿಸಬೇಕು ಎಂದು ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಔಷಧಿಗಳನ್ನು ದಾಸ್ತಾನು ಮಾಡಿಕೊಂಡು ಮುಂಗಾರು ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಭಣಗೊಳ್ಳದಂತೆ ಹೆಚ್ಚಿನ ಜಾಗೃತಿ ಮೂಡಿಸಬೇಕು. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಎಚ್ಚರವಹಿಸಬೇಕು. ಲೋಕೋಪಯೋಗಿ, ಪಂಚಾಯತ್‌ರಾಜ್ ಇಲಾಖೆ ಎಂಜಿನಿಯರ್‌ಗಳು ತಮ್ಮ ತಮ್ಮ ವ್ಯಾಪ್ತಿಯ ರಸ್ತೆಯನ್ನು ಸರಿಪಡಿಸಬೇಕು ಎಂದು ಸೂಚಿಸಿದರು.

ಪೊಲೀಸ್, ಕಂದಾಯ, ಪಂಚಾಯತ್ ರಾಜ್, ಲೋಕೋಪಯೋಗಿ, ಅಗ್ನಿಶಾಮಕ ಹೀಗೆ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ತಮ್ಮ ಇಲಾಖಾ ವ್ಯಾಪ್ತಿಯಲ್ಲಿ ಆಗಬೇಕಿರುವ ಕಾರ್ಯಗಳ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಹೇಳಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಡೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇತರರು ಇದ್ದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ