ಮಾರಣಾಂತಿಕ ಹೀಮೋಫೀಲಿಯಾ ಬಾಧಿತ ಗರ್ಭಿಣಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

KannadaprabhaNewsNetwork |  
Published : May 10, 2025, 01:21 AM IST
ಮಂಗಳೂರಿನ ಸರ್ಕಾರಿ ಲೇಡಿಗೋಷನ್‌ ಆಸ್ಪತ್ರೆ  | Kannada Prabha

ಸಾರಾಂಶ

175 ವರ್ಷಗಳ ಇತಿಹಾಸದ ಸಂಭ್ರಮಾಚರಣೆಯಲ್ಲಿರುವ ಮಂಗಳೂರಿನ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆ ಅಪರೂಪದ ಹಾಗೂ ಮಾರಣಾಂತಿಕವಾದ ಕಾಯಿಲೆ ಹೊಂದಿದ ಗರ್ಭಿಣಿ ಸ್ತ್ರೀ ಒಬ್ಬರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿ, ತಾಯಿ ಮಗುವಿನ ಪ್ರಾಣ ಸಂರಕ್ಷಣೆಯನ್ನು ಮಾಡಿದೆ.

ತಾಯಿ ಮಗುವಿಗೆ ಪುನರ್ಜನ್ಮ ನೀಡಿದ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಕನ್ನಡಪ್ರಭ ವಾರ್ತೆ ಮಂಗಳೂರು175 ವರ್ಷಗಳ ಇತಿಹಾಸದ ಸಂಭ್ರಮಾಚರಣೆಯಲ್ಲಿರುವ ಮಂಗಳೂರಿನ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆ ಅಪರೂಪದ ಹಾಗೂ ಮಾರಣಾಂತಿಕವಾದ ಕಾಯಿಲೆ ಹೊಂದಿದ ಗರ್ಭಿಣಿ ಸ್ತ್ರೀ ಒಬ್ಬರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿ, ತಾಯಿ ಮಗುವಿನ ಪ್ರಾಣ ಸಂರಕ್ಷಣೆಯನ್ನು ಮಾಡಿದೆ. ಹುಟ್ಟಿನಿಂದ ರಕ್ತಸಂಬಂಧಿತ ಕಾಯಿಲೆಯಾದ ಹೀಮೋಫೀಲಿಯಾ(Von-Willebrands disease)ವನ್ನು ಮಹಿಳೆಯೊಬ್ಬರು ಬಳುವಳಿಯಾಗಿ ಪಡೆದುಕೊಂಡು ಬಂದಿದ್ದರು. ಬಾಲ್ಯದಿಂದಲೇ ಇದಕ್ಕೆ ಸಂಬಂಧಿತ ಚಿಕಿತ್ಸೆಯನ್ನು ಖಾಸಗಿ ಆಸ್ಪತ್ರೆಯಿಂದ ಪಡೆದುಕೊಂಡು ಬರುತ್ತಿದ್ದರು. ಪ್ರಾಯ ಪ್ರಬುದ್ಧರಾಗಿ ವೈವಾಹಿಕ ಜೀವನವನ್ನು ಪ್ರಾರಂಭಿಸಿದ ನಂತರ ಸಹಜವಾಗಿ ಗರ್ಭವತಿಯಾದರು. ಆದರೆ ಗರ್ಭಾವಸ್ಥೆಯಲ್ಲಿ ಹೀಮೋಫೀಲಿಯಾ(ವಾನ್ ವಿಲ್ಲಿ ಬ್ರಾಂಡ್ಸ್ ಕಾಯಿಲೆ)ಇದ್ದಲ್ಲಿ ಯಾವುದೇ ಸಮಯದಲ್ಲಿ ರಕ್ತಸ್ರಾವ ಆಗಿ ತಾಯಿ ಮರಣ ಆಗುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ ದೇಹದಿಂದ ರಕ್ತಸ್ರಾವವಾಗುವ ಸಂದರ್ಭದಲ್ಲಿ ರಕ್ತಸ್ರಾವವನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಫ್ಯಾಕ್ಟರ್ 8 ರ ಕೊರತೆ ಈ ಕಾಯಿಲೆಯ ಬಹುಮುಖ್ಯ ಮೂಲ ಅಂಶ. ದುರಾದೃಷ್ಟವಶಾತ್ ಒಂದು ಲಕ್ಷಕ್ಕೆ ಒಂದರಂತೆ ಇರುವ ಅಪರೂಪದ ಈ ಕಾಯಿಲೆಗೆ ಚಿಕಿತ್ಸೆ ಅಷ್ಟು ಸುಲಭ ಸಾಧ್ಯವಲ್ಲ. ಚಿಕಿತ್ಸೆ ಇದ್ದರೂ ಪ್ಲಾಸ್ಮಾದಿಂದ ಸಂಸ್ಕರಿಸಿ ಉತ್ಪಾದಿಸಲ್ಪಡುವ ಇಂಜೆಕ್ಷನ್ ರೂಪದ ಔಷಧಿಗಳು ಮಾರುಕಟ್ಟೆಯಲ್ಲಿ ದುಬಾರಿ.

ಈ ಸಂದರ್ಭದಲ್ಲಿ ಮಹಿಳೆಗೆ ಆಪ್ತಸಮಾಲೋಚನೆ ಮಾಡಿ ಗಂಭೀರತೆಯನ್ನು ತಿಳಿಹೇಳಲಾಯಿತು. ಆದರೂ ವಿವಿಧ ಕೌಟುಂಬಿಕ ಕಾರಣಗಳಿಗಾಗಿ ಸಂದಿಗ್ಧತೆಯಲ್ಲಿ ಸಿಲುಕಿದ ಮಹಿಳೆ ತನ್ನ ಬಲಿದಾನವಾದರೂ ಸರಿ ತಾನು ಒಂದು ಮಗುವಿನ ತಾಯಿಯಾಗಲೇ ಬೇಕು ಎನ್ನುವ ತೀರ್ಮಾನಕ್ಕೆ ಬದ್ಧತೆ ತೋರಿದರು.ಇಂತಹ ಅಸಹಾಯಕ ಪರಿಸ್ಥಿತಿಯಲ್ಲಿ ವೆನ್ಲಾಕ್ ಬ್ಲಡ್ ಬ್ಯಾಂಕ್‌ನ ಡಾ. ಶರತ್ ಅವರನ್ನು ಭೇಟಿಯಾದ ಸಂಬಂಧಿಕರು, ಫ್ಯಾಕ್ಟರ್ 8 ಇಂಜೆಕ್ಷನ್ಗನ್‌ಗಳ ಪೂರೈಕೆಯ ಬಗ್ಗೆ ಕೇಳಿಕೊಂಡರು. ಲೇಡಿಗೋಷನ್ ಆಸ್ಪತ್ರೆ, ಈ ಮಹಿಳೆಯ ಪ್ರಾಣ ರಕ್ಷಣೆಯನ್ನು ಮಾಡುವ ವೈದ್ಯಕೀಯ ಲೋಕದ ಸವಾಲನ್ನು ಸ್ವೀಕರಿಸಿತು.

ಬಳಿಕ ನಿಯಮಿತವಾಗಿ ಗರ್ಭಿಣಿ ಪರೀಕ್ಷೆಯನ್ನು ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ನಡೆಸಿಕೊಡಲಾಯಿತು. ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್.ಎಂ.ಆರ್. ಇವರು ವೆನ್ಲಾಕ್ ಬ್ಲಡ್ ಬ್ಯಾಂಕ್ ನ ನಿರಂತರ ಸಂಪರ್ಕದಲ್ಲಿದ್ದು, ಆರೋಗ್ಯ ಇಲಾಖೆಯ ರಾಜ್ಯಮಟ್ಟದ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರು. ಸರ್ಕಾರದಿಂದಲೇ ಈ ಮಹಿಳೆಗೆ ವಾರಕ್ಕೆ ಒಂದಾವರ್ತಿ ಅಗತ್ಯತೆಯ ಈ ಇಂಜೆಕ್ಷನ್ ನೀಡುವ ವ್ಯವಸ್ಥೆಯನ್ನು ಗರ್ಭಾವಸ್ಥೆಯ ಪೂರ್ಣ ಅವಧಿಯವರೆಗೂ ನೋಡಿಕೊಂಡರು.

ನಿರಂತರವಾದ ಆರೈಕೆ ನಡೆದು ಆಕೆಯ ನಿರೀಕ್ಷಿತ ಹೆರಿಗೆ ದಿನಾಂಕಕ್ಕೆ ಸರಿಯಾಗಿ ಇಪ್ಪತ್ತು ದಿನಗಳ ಮುಂಚಿತವಾಗಿ ದಾಖಲು ಮಾಡಿಕೊಳ್ಳಲಾಯಿತು. ಫ್ಯಾಕ್ಟರ್ V III (8) ಇಂಜೆಕ್ಷನ್‌ಗಳ ಪೂರೈಕೆಯನ್ನು ಖಾತರಿಪಡಿಸಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಸುರಕ್ಷಿತವಾಗಿ ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆ ಮಾಡಿಸಲಾಯಿತು.

ಕೆ.ಎಂ.ಸಿ.ಯ ತಜ್ಞ ವೈದ್ಯರು, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ.ಅನುಪಮಾ ರಾವ್, ಡಾ. ಸಿರಿಗಣೇಶ್, ಡಾ. ನಮಿತಾ ಅಲ್ಲದೆ ಅರಿವಳಿಕೆ ತಜ್ಞರಾದ ಡಾ.ಸುಮೇಶ್ ರಾವ್, ಡಾ. ರಂಜನ್ ಹಾಗೂ ಲೇಡಿಗೋಷನ್ ಶುಶ್ರೂಷಕ ವೃಂದ ಸಹಕರಿಸಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ 33 ಹಳ್ಳಿಗಳಲ್ಲಿ ಪ್ರತಿ ದಿನ ಸಂಜೆ 7- 9 ಗಂಟೆವರೆಗೆ ಮೊಬೈಲ್‌, ಟಿವಿ ಬಂದ್‌
ಗೃಹಲಕ್ಷ್ಮೀಯರಿಗೆ ಗುಡ್ ನ್ಯೂಸ್ ಕೊಟ್ರು ಸಚಿವೆ ಲಕ್ಷ್ಮೀ