ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಜಿಲ್ಲೆಯ ರೈತರು ಪ್ರಸ್ತಾಪಿಸಿರುವ ಬೇಡಿಕೆಗಳು ಹಾಗೂ ಸಮಸ್ಯೆಗಳನ್ನು ತ್ವರಿತವಾಗಿ ಆದ್ಯತೆ ಮೇರೆಗೆ ಪರಿಹರಿಸಲು ಅಧಿಕಾರಿಗಳು ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರೈತರ ಸಮಸ್ಯೆಗಳನ್ನು ಕುರಿತು ಚರ್ಚಿಸಲು ಕರೆಯಲಾಗಿದ್ದ ರೈತರ ಮುಖಂಡರು, ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆರಂಭದಲ್ಲಿಯೇ ರೈತ ಮುಖಂಡರು ಮಾತನಾಡಿ ಅರಣ್ಯದಂಚಿನ ಭಾಗದಲ್ಲಿ ಜಾನುವಾರುಗಳು ಮೇಯಲು ಅರಣ್ಯ ಇಲಾಖೆಯಿಂದ ನಿರ್ಬಂಧ ಹೇರಲಾಗುತ್ತಿದೆ. ಮಾನವ, ಪ್ರಾಣಿ ಸಂಘರ್ಷ ತಪ್ಪಿಸಬೇಕು. ಕಾಡು ಪ್ರಾಣಿಗಳಿಂದ ಆಗುವ ಬೆಳೆ ಹಾನಿಗೆ ನೀಡಲಾಗುವ ಪರಿಹಾರ ವೈಜ್ಞಾನಿಕವಾಗಿಲ್ಲ. ಕಾಡುಪ್ರಾಣಿಗಳು ಗ್ರಾಮಗಳಿಗೆ ಬರದಂತೆ ಕೈಗೊಳ್ಳಬೇಕಿರುವ ಕಾಮಗಾರಿಗಳನ್ನು ಸಂಪೂರ್ಣಗೊಳಿಸಬೇಕು. ಚೆಕ್ ಪೋಸ್ಟ್ ಗಳಲ್ಲಿ ಸಿಸಿ ಟಿವಿ ಅಳವಡಿಸಿ ಕಟ್ಟುನಿಟ್ಟಿನ ನಿಗಾ ವಹಿಸಿ ಹೆಚ್ಚು ಭಾರ ಹೊತ್ತು ಸಾಗುವ ವಾಹನಗಳಿಗೆ ಕಡಿವಾಣ ಹಾಕಬೇಕು. ಮರ ಕಟಾವಿಗೆ ತ್ವರಿತವಾಗಿ ಅನುಮತಿ ನೀಡಬೇಕು. ಅತ್ತಿಖಾನೆ, ಬೇಡಗುಳಿ, ಹೊನ್ನಮೇಟಿ ಭಾಗದಲ್ಲಿ ಕಳೆ ನಾಶಕದಿಂದ ಪರಿಸರ ಹಾನಿಯಾಗದಂತೆ ನೋಡಿಕೊಳ್ಳಬೇಕು ಎಂದರು.ಅರಣ್ಯ ವ್ಯಾಪ್ತಿಯಲ್ಲಿ ಬರುವ ಗೋಪಾಲಸ್ವಾಮಿ ಬೆಟ್ಟ, ಬೇಲುಕುಪ್ಪೆ ದೇವಾಲಯ ಸೇರಿದಂತೆ ಇನ್ನಿತರ ಧಾರ್ಮಿಕ ಪ್ರದೇಶಗಳಗೆ ನಿರ್ಬಂಧ ಹೇರಬಾರದು. ಬಾಳೆ ಖರೀದಿಸುವ ಸಮಯದಲ್ಲಿ ಎಪಿಎಂಸಿ ಗಳಲ್ಲಿ ಖರೀದಿದಾರರು ತಾರತಮ್ಯ ಮಾಡಬಾರದು. ಎಲ್ಲಾ ಕೆರೆಗಳಿಗೆ ನೀರು ತುಂಬಿಸಬೇಕು. ಕೆರೆಗಳ ಹೂಳೆತ್ತಬೇಕು. ನೀರಾವರಿ ಸಲಹಾ ಸಮಿತಿಯನ್ನ ಆದಷ್ಟು ಬೇಗನೆ ಕರೆಯಬೇಕು. ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗಬೇಕು. ವರ್ಷಪೂರ್ತಿ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳು ನಿರ್ವಹಿಸಬೇಕು. ರಸಗೊಬ್ಬರ, ಬಿತ್ತನೆ ಬೀಜ, ಪರಿಕರಗಳ ವಿತರಣೆ ಸಮಪರ್ಕವಾಗಿ ಆಗಬೇಕು. ಅರಿಶಿಣ ಸಂಸ್ಕರಣ ನಿರ್ವಹಣೆ ಸೌಲಭ್ಯ ತಲುಪಬೇಕು. ವಿದ್ಯುತ್, ಕೆಎಸ್‌ಆರ್‌ಟಿಸಿ ಬಸ್ಸುಗಳ ಸೌಕರ್ಯವೂ ಸರಿಯಾಗಿ ಸಿಗಬೇಕು ಎಂಬೂದು ಸೇರಿದಂತೆ ಹಲವು ಸಮಸ್ಯೆಗಳನ್ನು ರೈತ ಮುಖಂಡರು ವಿವರವಾಗಿ ಸಭೆಯಲ್ಲಿ ಪ್ರಸ್ತಾಪಿಸಿದರು.
ಸಮಸ್ಯೆ ಹಾಗೂ ಬೇಡಿಕೆಗಳನ್ನು ಸುಧೀರ್ಘವಾಗಿ ಆಲಿಸಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು, ಕಾಡಂಚಿನ ಪ್ರದೇಶಗಳಲ್ಲಿ ರೈತರಿಗೆ, ಗ್ರಾಮಸ್ಥರಿಗೆ ಯಾವುದೆ ತೊಂದರೆ ಕೊಡಬಾರದು. ಮಾನವ, ಪ್ರಾಣಿ ಸಂಘರ್ಷ ತಪ್ಪಿಸಲು ಕೈಗೊಳ್ಳಲಾಗಿರುವ ಕಾಮಗಾರಿ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಅರಣ್ಯ ಭಾಗದ ಸಮಸ್ಯೆಗಳನ್ನು ಪರಿಹರಿಸಲಕು ಉನ್ನತ ಮಟ್ಟದಲ್ಲಿ ಹಿರಿಯ ಅರಣ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಮನವಿ ಮಾಡಲಾಗುವುದು. ಈ ಸಭೆಯಲ್ಲಿ ವಿವರವಾಗಿ ಎಲ್ಲವನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುತ್ತದೆ. ಹನೂರು ಭಾಗದ ಕಾಡಂಚಿನ ಭಾಗಗಳಲ್ಲಿ ಜಾನುವಾರುಗಳ ಮೇವಿಗಾಗಿ ಹುಲ್ಲು ಪ್ರದೇಶ ಬೆಳೆಸಲು ಯೋಜನೆ ರೂಪಿಸಲಾಗುತ್ತಿದೆ. ರೈತರ ಬೇಡಿಕೆಯಂತೆ ಮರ ಕಟಾವು ಮಾಡಲು ಶೀಘ್ರ ಅನುಮತಿ ಸಂಬಂಧ ಕ್ರಮ ವಹಿಸಲಾಗುತ್ತದೆ. ವಿಳಂಬ ಧೋರಣೆ ಅನುಸರಿಸಿದರೆ ಸಂಬಂಧಪಟ್ಟವರ ವಿರುದ್ದ ಕ್ರಮ ಜರುಗಿಸಲಾಗುತ್ತದೆ ಎಂದರು.
ಕೆರೆಗಳ ಹೂಳೆತ್ತುವ ಕಾರ್ಯವನ್ನು ಕೈಗೊಳ್ಳಬೇಕು. ನೀರಾವರಿ ಇಲಾಖೆ ಹಾಗೂ ನಿಗಮದ ಅಧಿಕಾರಿಗಳು ನೀರಾವರಿ ಯೋಜನೆಗೆ ಸಂಬAಧಿಸಿದ ಕಾಮಗಾರಿ ಅನುಷ್ಠಾನಕ್ಕೆ ಕೈಗೊಂಡಿರುವ ಸರ್ವೆ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಕೆರೆ ಒತ್ತುವರಿ ತೆರವುಗೊಳಿಸಬೇಕು. ರೈತರ ಜೊತೆ ಸಭೆ ನಡೆಸಬೇಕು. ಏನೇ ಸಮಸ್ಯೆಗಳಿದ್ದರೂ ಗಮನಕ್ಕೆ ತರುವಂತೆ ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು.ಬಾಳೆ, ಅರಿಶಿಣ, ಕಬ್ಬು ಬೆಳೆಗೆ ಸಂಬಂಧಿಸಿದಂತೆ ರೈತ ಮುಖಂಡರು ಪ್ರಸ್ತಾಪಿಸಿರುವ ವಿಷಯಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಆದ್ಯತೆ ಮೇರೆಗೆ ಕ್ರಮ ತೆಗೆದುಕೊಳ್ಳಬೇಕು. ಬಾಳೆ ಖರೀದಿದಾರರ ಸಭೆ ಕರೆಯಬೇಕು. ಅರಿಶಿಣ ಸಂಸ್ಕರಣೆ ಪೂರಕವಾಗಿರುವ ಕಾರ್ಯಗಳನ್ನು ಚುರುಕುಗೊಳಿಸಬೇಕು. ಕೃಷಿ ಅಧಿಕಾರಿಗಳು ಉತ್ತಮ ಗುಣಮಟ್ಟದ ಪರಿಕರಗಳು, ಬಿತ್ತನೆ ಬೀಜ, ರಸಗೊಬ್ಬರ ಪೂರೈಸುವ ನಿಟ್ಟಿನಲ್ಲಿ ನಿಗಾ ವಹಿಸಬೇಕು. ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳನ್ನು ತೆರೆಯುವ ಪ್ರಕ್ರಿಯೆಗೆ ಮುಂದಾಗಬೇಕು ಎಂದರು.
ವಿದ್ಯುತ್ ಗುತ್ತಿಗೆದಾರರಿಂದ ರೈತರಿಗೆ, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಗುತ್ತಿಗೆದಾರರ ಸಭೆ ಕರೆದು ಜನಸ್ನೇಹಿಯಾಗಿ ವರ್ತಿಸಲು ಸೂಚಿಸಬೇಕು. ಕೆಎಸ್‌ಆರ್‌ಟಿಸಿ ಅಧಿಕಾರಿಗಳು ನೇರ ಫೋನ್ ಇನ್ ಕಾರ್ಯಕ್ರಮ ನಡೆಸಿ ಸಾರ್ವಜನಿಕರ ಸಮಸ್ಯೆ ಆಲಿಸಬೇಕು. ಅಗತ್ಯಕ್ಕನುಗುಣವಾಗಿ ಬಸ್ಸುಗಳನ್ನು ನಿಯೋಜಿಸಬೇಕು. ಪೊಲೀಸ್, ಅರಣ್ಯ, ಆರ್.ಟಿ.ಒ, ಗಣಿ ಮತ್ತು ಭೂ ವಿಜ್ಞಾನ, ಅಬಕಾರಿ ಇಲಾಖೆಯನ್ನೊಳಗೊಂಡ ಚೆಕ್ ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಾಗಿ ಎಲ್ಲವನ್ನು ಪರಿಶೀಲಸಬೇಕು. ಓವರ್ ಲೋಡ್ ಸಾಗಾಣೆ ವಾಹನಗಳಿಗೆ ಅವಕಾಶ ಮಾಡಿಕೊಡಬಾರದು. ಯಾವುದೇ ನಿಯಮ ಮಿರಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸೂಚನೆ ನೀಡಿದರು.ಬೆಳಗ್ಗೆನಿಂದ ಸಂಜೆಯವರೆಗೂ ಸುಧೀರ್ಘವಾಗಿ ರೈರ ಮುಖಂಡರು, ಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ರೈತರ ಸಮಸ್ಯೆ ಪರಿಹರಿಸುವ ಸಂಬಂಧ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸಭೆ ನಡೆಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಹಿರಿಯ ಅರಣ್ಯ ಅಧಿಕಾರಿಗಳಾದ ಶ್ರೀಪತಿ, ಪ್ರಭಾಕರ್, ಭಾಸ್ಕರ್, ರೈತ ಮುಖಂಡರಾದ ಹೊನ್ನೂರು ಪ್ರಕಾಶ್, ಹೆಬ್ಬಸೂರು ಬಸವಣ್ಣ, ಡಾ. ಗುರುಪ್ರಸಾದ್, ಮಹದೇವಪ್ಪ, ಕರಿಯಪ್ಪ, ಮಹೇಶ್ ಕುಮಾರ್, ರಂಗಸ್ವಾಮಿ, ರಾಜೇಂದ್ರ, ಹೊನ್ನೂರು ಬಸವಣ್ಣ, ಇನ್ನಿತರ ಮುಖಂಡರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.