ಕನ್ನಡಪ್ರಭ ವಾರ್ತೆ ಸಿದ್ದಾಪುರ
ಕಸ ವಿಲೇವಾರಿ ಸ್ಥಳದ ವಿಷಯ ಮುಂದಿಟ್ಟು ಕಾಂಗ್ರೆಸ್ ಪಕ್ಷ ಮಾಲ್ದಾರೆಯಲ್ಲಿ ಪ್ರತಿಭಟನೆ ಮಾಡಿ ರಾಜಕೀಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಸ್ಥಾನೀಯ ಸಮಿತಿ ಆರೋಪಿಸಿದ್ದು ಹಿಂದಿನ ಶಾಸಕರು ಕಸವಿಲೇವಾರಿಗೆ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ ಎನ್ನುವ ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರತೀಶ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದೆ.ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ರೂಪೇಶ್, ಹಿಂದಿನ ಶಾಸಕರಾದ ಕೆ.ಜಿ.ಬೋಪಯ್ಯ ಘಟ್ಟದಳದಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣ ಮಾಡಲು 1 ಏಕರೆ ಜಾಗ ಮಂಜೂರು ಮಾಡಿಸಿ ಸಿದ್ದಾಪುರ ಮತ್ತು ಮಾಲ್ದಾರೆ ಪಂಚಾಯ್ತಿಯ ಕಸ ವಿಲೇವಾರಿಗೆ ತಲಾ 50ಸೆಂಟ್ ಜಾಗ ಮಂಜೂರು ಮಾಡಿ, ಗ್ರಾಮ ಪಂಚಾಯಿತಿ ಹೆಸರಿನಲ್ಲಿ ದಾಖಲೆ ಕೂಡ ಮಾಡಿಸಿದ್ದು ಕಸ ವಿಲೇವಾರಿ ಘಟಕದ ಕಾಮಗಾರಿ ಕೂಡ ಪ್ರಾರಂಭಿಸಿದ್ದರು. ಈ ಸಂದರ್ಭ ಅಲ್ಲಿನ ಒಂದು ಕುಟುಂಬ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿದೆ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ರೀನಾ ತುಳಸಿ ಮಾತನಾಡಿ, ಕಸ ವಿಲೇವಾರಿ ವಿಷಯದ ಸಂಪೂರ್ಣ ಮಾಹಿತಿಯನ್ನು ಈಗಿನ ಶಾಸಕರಾದ ಪೊನ್ನಣ್ಣನವರ ಗಮನಕ್ಕೆ ತಂದು ಅದರ ದಾಖಲೆಗಳನ್ನು ಅವರಿಗೆ ನೀಡಿರುವುದಾಗಿ ತಿಳಿಸಿದರು. ಆದರೂ ಶಾಸಕರು ನ್ಯಾಯಾಲದಲ್ಲಿರುವ ವ್ಯಾಜ್ಯವನ್ನು ಮುಗಿಸಿ ಅಲ್ಲೆ ಕಸ ವಿಲೇವಾರಿ ಘಟಕ ನಿರ್ಮಿಸದೆ ನಿರ್ಲಕ್ಷ್ಯ ವಹಿಸಿ ರಾಜಕೀಯ ಮಾಡುತ್ತಿದ್ದು ತಾವು ಕಸ ಸಮಸ್ಯೆಯನ್ನು ಬಗೆಹರಿಸಿರುವುದಾಗಿ ಬಿಂಬಿಸಲು ಸಿದ್ದಾಪುರದ ಒಂದು ಖಾಸಗಿ ಸಂಸ್ಥೆ ತಮ್ಮ ಸ್ವ ಲಾಭಕೋಸ್ಕರ ಸುಮಾರು ಸಿದ್ದಾಪುರ ದಿಂದ 14 ಕಿ. ಮೀ ದೂರದಲ್ಲಿ ಜನವಸತಿ ಪ್ರದೇಶದಲ್ಲಿ ಖರೀದಿಸಿ ನೀಡಿದ ಜಾಗದಲ್ಲಿ ಅಲ್ಲಿನ ಜನರ ವಿರೋಧದ ನಡುವೆ ತಮ್ಮ ಪಕ್ಷ ಕಸ ವಿಲೇವಾರಿ ಮಾಡಲು ಸ್ಥಳ ಮಾಡಿದ್ದು ಎಂದು ತಮ್ಮ ಪಕ್ಷಕ್ಕೆ ಲಾಭ ಮಾಡಲು ಹೊರಟಿದ್ದಾರೆ ಎಂದು ಹೇಳಿದ ಅವರು ಕಾಂಗ್ರೆಸ್ ಪಕ್ಷದವರು ಕಸದ ಸಮಸ್ಯೆಯಲ್ಲಿ ರಾಜಕೀಯ ಮಾಡದೆ ಗ್ರಾಮ ಪಂಚಾಯಿತಿ ಹೆಸರಿನಲ್ಲಿರುವ ಜಾಗದ ವ್ಯಾಜ್ಯವನ್ನು ಇತ್ಯರ್ಥ ಪಡಿಸಿ ಕಸ ವಿಲೇವಾರಿ ಘಟಕ ನಿರ್ಮಿಸಿ ಮಾಲ್ದಾರೆ ಮತ್ತು ಸಿದ್ದಾಪುರ ಭಾಗದ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕುವಂತೆ ಶಾಸಕ ಪೊನ್ನಣ್ಣ ಗಮನ ಹರಿಸಬೇಕೆಂದು ಒತ್ತಾಯಿಸಿದರು.ಈ ಸಂದರ್ಭ ಶಕ್ತಿ ಕೇಂದ್ರ ಉಪಪ್ರಮುಖ್ ದಿಜಿತ್ ಟಿ ಆರ್ ಪಕ್ಷದ ಪ್ರಮುಖರಾದ ಚಿಮ್ಮಿ ಪೂವಯ್ಯ, ಗ್ರಾಮ ಪಂಚಾಯಿತಿ ಸದಸ್ಯ ಎಂ ಎ ಆನಂದ ಇದ್ದರು.