ಧಾರವಾಡ: ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ. ವೆಂಕಟೇಶನ್ ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಫಾಯಿ ಕರ್ಮಚಾರಿಗಳ ಕಲ್ಯಾಣ ಕಾರ್ಯಕ್ರಮಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ಜರುಗಿಸಿದರು.
ಸಭೆಯಲ್ಲಿ ಪೌರಕಾರ್ಮಿಕರ ನೇಮಕಾತಿ, ಬಡ್ತಿ, ವೇತನ ಪಾವತಿ, ಸಂಕಷ್ಟ ಭತ್ಯೆ ಮತ್ತು ಇಎಸ್‌ಐ, ಪಿಎಫ್ ಜಮೆ ಕುರಿತು ನೇರವಾಗಿ ಪೌರಕಾರ್ಮಿಕರಿಂದ ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಯಾವುದೇ ಕಾರಣಕ್ಕೂ ಪೌರಕಾರ್ಮಿಕ ಸಮಸ್ಯೆಗಳಿಗೆ ಶೀಘ್ರ ಪರಿಹಾರ ನೀಡುವಲ್ಲಿ ಅಧಿಕಾರಿಗಳು ವಿಳಂಬ ಮಾಡುವಂತಿಲ್ಲ ಎಂಬ ಎಚ್ಚರಿಕೆ ನೀಡಿದರು.ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕರ ನೇಮಕಾತಿ ಪತ್ರಗಳನ್ನು ಆದಷ್ಟು ಬೇಗ ನೀಡುವಂತೆ ಸೂಚಿಸಿದ ಅವರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಅಳ್ನಾವರ ಮತ್ತು ಕಲಘಟಗಿ ಪಟ್ಟಣ ಪಂಚಾಯಿತಿಗಳಲ್ಲಿ ಹಾಗೂ ಕುಂದಗೋಳ, ಅಣ್ಣಿಗೇರಿ ಮತ್ತು ನವಲಗುಂದ ಪುರಸಭೆಗಳಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರನ್ನು ಪ್ರತ್ಯೇಕವಾಗಿ ಮಾತನಾಡಿಸಿ ಕುಂದು-ಕೊರತೆಗಳನ್ನು ವಿಚಾರಿಸಿದರು. ಜೊತೆಗೆ ಸಮಸ್ಯೆಗಳಿಗೆ ಸರ್ಕಾರದಿಂದ ಪರಿಹಾರ ಒದಗಿಸುವ ಭರವಸೆ ನೀಡಿದರು.
ನಗರ, ಸ್ಥಳೀಯ ಸಂಸ್ಥೆಗಳು ಪೌರಕಾರ್ಮಿಕರ ಎಲ್ಲ ಬೇಡಿಕೆಗಳನ್ನು ಪರಿಶೀಲಿಸಿ, ಪೂರೈಸಬೇಕು. ಕೆಲಸದಲ್ಲಿ ಉತ್ತಮ ಉಪಹಾರ, ಸುರಕ್ಷಾ ಸಾಧನಗಳನ್ನು ನೀಡಬೇಕು ಮತ್ತು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಬೇಕು ಎಂದು ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚಿಸಿದರು.ಪಾಲಿಕೆ ಆಯುಕ್ತ ರುದ್ರೇಶ ಗಾಳಿ ಪೌರಕಾರ್ಮಿಕರ ಆರೋಗ್ಯ, ಸಂಕಷ್ಟಗಳ ಪರಿಹಾರಕ್ಕೆ ತಾವು ಸಿದ್ಧರಿದ್ದೇವೆ ಎಂದರು. ಪಾಲಿಕೆ ಮಹಾಪೌರ ರಾಮಪ್ಪ ಕೃಷ್ಣಪ್ಪ ಬಡಿಗೇರ, ಉಪ ಮಹಾಪೌರ ಬಿಜವಾಡ ದುರ್ಗಮ್ಮ ಶಶಿಕಾಂತ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ಅಧೀಕ್ಷಕ ಗೋಪಾಲ ಬ್ಯಾಕೋಡ್, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಪಾಲಿಕೆ ವಿರೋಧ ಪಕ್ಷದ ನಾಯಕ ರಾಜು ಕಮತಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ. ಶುಭ ವೇದಿಕೆಯಲ್ಲಿದ್ದರು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ನಗರ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಪೌರಕಾರ್ಮಿಕರು, ಜಿಲ್ಲಾ ಸಫಾಯಿ ಕರ್ಮಚಾರಿಗಳ ಸಮಿತಿ ಸದಸ್ಯರು, ಪೌರಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.