ಕನ್ನಡಪ್ರಭ ವಾರ್ತೆ ವಿಜಯಪುರಕೂಡಗಿ ಉಷ್ಣ ವಿದ್ಯುತ್ ಸ್ಥಾವರ ಮತ್ತು ರೈತರಿಗೆ ತೊಂದರೆಯಾಗದಂತೆ ಸಮಸ್ಯೆ ಬಗೆ ಹರಿಸುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.ಉಷ್ಣ ವಿದ್ಯುತ್ ಸ್ಥಾವರದಿಂದ ಉಂಟಾಗಿರುವ ಸಮಸ್ಯೆಗಳನ್ನು ಬಗೆ ಹರಿಸುವಂತೆ ಆಗ್ರಹಿಸಿ ಮಸೂತಿ, ಕೂಡಗಿ, ಗೊಳಸಂಗಿ ಮತ್ತು ತೆಲಗಿ ಗ್ರಾಮಸ್ಥರು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರನ್ನು ಇಂದು ಬುಧವಾರ ಬೆಳಿಗ್ಗೆ ಭೇಟಿ ಮಾಡಿ ಮನವಿ ಮಾಡಿದರು. ಕೂಡಗಿ ಉಷ್ಣ ವಿದ್ಯುತ್ ಸ್ಥಾವರಕ್ಕೆ ಭೂಮಿ ನೀಡಿರುವ ರೈತರ ಜಮೀನಿಗೆ ಹೆಚ್ಚುವರಿಯಾಗಿ ಪ್ರತಿ ಎಕರೆಗೆ ತಲಾ ₹4 ಲಕ್ಷ ಹೆಚ್ವುವರಿ ಪರಿಹಾರ ನೀಡಬೇಕು. ಭೂಮಿ ನೀಡಿದ ರೈತರ ಕುಟುಂಬಗಳಿಗೆ ಉದ್ಯೋಗ ನೀಡಬೇಕು. ಸ್ಥಾವರಕ್ಕಾಗಿ ನಿರ್ಮಿಸಲಾಗಿರುವ ಹಾರುಬೂದಿ ಕೆರೆಯಿಂದಾಗಿ ಕೆಳಭಾಗದ ಮಸೂತಿ ಗ್ರಾಮದ ಸುಮಾರು 400 ಎಕರೆ ಜಮೀನಿಗೆ ಸವಳು-ಜವಳು ಸಮಸ್ಯೆ ಎದುರಾಗಿದೆ. ಈ ಜಮೀನಿನಲ್ಲಿ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಕಳೆದ ಆರು ವರ್ಷಗಳಿಂದ ಸಮಸ್ಯೆಗಳ ಬಗ್ಗೆ ಗಮನ ಸೆಳೆದರೂ ಯಾರೂ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಸಚಿವರ ಬಳಿ ಅಳಲು ತೋಡಿಕೊಂಡರು.
ಈ ವೇಳೆ ಮಸೂತಿ, ಗೊಳಸಂಗಿ, ಕೂಡಗಿ, ತೆಲಗಿ ಗ್ರಾಮಗಳ ಮುಖಂಡ ಸಿ. ಪಿ.ಪಾಟೀಲ, ಹೊನ್ನಪ್ಪ ಅಂಗಡಿ, ವಿವೇಕ ಪಾಟೀಲ, ಎಸ್.ಎಸ್. ಗರಸಂಗಿ, ನರೇಂದ್ರ ಪಾಟೀಲ, ಮಲ್ಲು ವೀರಣ್ಣವರ, ಸುರೇಶ ಬಡಿಗೇರ, ಮಹಾಂತೇಶ ಕಮತಗಿ, ಸುರೇಶ ದಳವಾಯಿ, ರಾಘವೇಂದ್ರ ಕುಲಕರ್ಣಿ, ಗುರುರಾಜ ಹಂಡಗಿ, ದೊಡ್ಡನಗೌಡ ಪಾಟೀಲ ಮುಂತಾದವರು ಇದ್ದರು.