ಸಮಸ್ಯೆಗಳ ಬಗೆಹರಿಸಿ, ಇಲ್ಲ ಪ್ರತ್ಯೇಕ ರಾಜ್ಯ ಕೊಡಿ

KannadaprabhaNewsNetwork |  
Published : Oct 17, 2024, 12:50 AM IST
ಪೊಟೋ: 16ಎಸ್‌ಎಂಜಿಕೆಪಿ03ಶಿವಮೊಗ್ಗದ ಪತ್ರಿಕಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಲೆನಾಡು ರೈತರ ಹೋರಾಟ ಸಮಿತಿ ಸಂಚಾಲಕ ತಿ.ನಾ.ಶ್ರೀನಿವಾಸ್ ಮಾತನಾಡಿದರು. | Kannada Prabha

ಸಾರಾಂಶ

ರೈತರು, ಮುಳುಗಡೆ ಸಂತ್ರಸ್ಥರ ಹಾಗೂ ಭೂ ಹಕ್ಕು ವಂಚಿತರ ಸಮಸ್ಯೆಗಳನ್ನು ಬಗೆಹರಿಸಿ. ಇಲ್ಲವಾದರೆ ಮಲೆನಾಡು, ಕರಾವಳಿ ಸೇರಿ ರಾಜ್ಯದ 12 ಜಿಲ್ಲೆಗಳನ್ನೊಳಗೊಂಡಂತೆ ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ರೈತರ, ಮುಳುಗಡೆ ಸಂತ್ರಸ್ಥರ ಹಾಗೂ ಭೂ ಹಕ್ಕು ವಂಚಿತರ ಸಂಯುಕ್ತ ವೇದಿಕೆಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮಲೆನಾಡು ರೈತರ ಹೋರಾಟ ಸಮಿತಿ ಸಂಚಾಲಕ ತಿ.ನಾ. ಶ್ರೀನಿವಾಸ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರೈತರು, ಮುಳುಗಡೆ ಸಂತ್ರಸ್ಥರ ಹಾಗೂ ಭೂ ಹಕ್ಕು ವಂಚಿತರ ಸಮಸ್ಯೆಗಳನ್ನು ಬಗೆಹರಿಸಿ. ಇಲ್ಲವಾದರೆ ಮಲೆನಾಡು, ಕರಾವಳಿ ಸೇರಿ ರಾಜ್ಯದ 12 ಜಿಲ್ಲೆಗಳನ್ನೊಳಗೊಂಡಂತೆ ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ರೈತರ, ಮುಳುಗಡೆ ಸಂತ್ರಸ್ಥರ ಹಾಗೂ ಭೂ ಹಕ್ಕು ವಂಚಿತರ ಸಂಯುಕ್ತ ವೇದಿಕೆಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮಲೆನಾಡು ರೈತರ ಹೋರಾಟ ಸಮಿತಿ ಸಂಚಾಲಕ ತಿ.ನಾ. ಶ್ರೀನಿವಾಸ್ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶಿವಮೊಗ್ಗ ಜಿಲ್ಲೆಯ ಚಕ್ರ, ಸಾವೇಹಕ್ಲು, ಶರಾವತಿ, ಲಿಂಗನಮಕ್ಕಿ ,ತುಂಗಾ ಹಾಗೂ ಭದ್ರಾ ಅಣೆಕಟ್ಟಿನ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಹೀಗಾಗಿ ಡಾ. ಎಚ್. ಗಣಪತಿಯಪ್ಪ ಸ್ಥಾಪಿತ ಶಿವಮೊಗ್ಗ ಜಿಲ್ಲಾ ರೈತ ಸಂಘ, ಮಲೆನಾಡು ರೈತರ ಹೋರಾಟ ಸಮಿತಿ, ಮುಳುಗಡೆ ಸಂತ್ರಸ್ತ ಹಾಗೂ ಭೂ ಹಕ್ಕು ವಂಚಿತರ ಸಂಯುಕ್ತ ವೇದಿಕೆ, ಜಿಲ್ಲಾ ವಂಚಿತರ ಭೂಹಕ್ಕು ವಂಚಿತರು, ಮುಳುಗಡೆ ಸಂತ್ರಸ್ತರ ಪರ ಹೋರಾಡುತ್ತಿರುವ ಸಂಘಟನೆಗಳೆಲ್ಲ ಸೇರಿ ಶಿವಮೊಗ್ಗ ಜಿಲ್ಲಾ ರೈತರ, ಮುಳುಗಡೆ ಸಂತ್ರಸ್ಥರ ಹಾಗೂ ಭೂ ಹಕ್ಕು ವಂಚಿತರ ಸಂಯುಕ್ತ ವೇದಿಕೆ ರಚಿಸಿಕೊಂಡು ಈ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಜಿಲ್ಲೆಯ ಜನರ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಆದ್ದರಿಂದ ಬೇಡಿಕೆಗಳನ್ನು ಈಡೇರಿಸುವ ತನಕ ಅ.21ರಿಂದ ಸಾಗರದ ಎಸಿ ಕಚೇರಿ ಆವರಣದಲ್ಲಿ ಬೃಹತ್ ಅನಿರ್ದಿಷ್ಟಾವಧಿ ಧರಣಿ ಮತ್ತು ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.ಹಕ್ಕುಪತ್ರಗಳನ್ನ ವಜಾ ಮಾಡಲು ಸರ್ಕಾರ ಕ್ರಮ ಕೈಗೊಂಡಿರುವ ಆದೇಶ ಹಿಂಪಡೆಯಬೇಕು. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮಲ್ಲಂದೂರು ಗ್ರಾಮದ ಹಕ್ಕುಪತ್ರ ನೀಡದಂತೆ ಸೂಚನೆ ಮಾಡಲಾಗಿದೆ. ಇದನ್ನ ವಜಾಗೊಳಿಸಿ 80 ಸಾವಿರ ಅರ್ಜಿಯನ್ನ ಪುನರ್ ಪರಿಶೀಲಿಸಬೇಕು. ಅಲ್ಲದೇ ನಮ್ಮ ಬೇಡಿಕೆಗಳನ್ನು ಸರ್ಕಾರ ನವೆಂಬರ್‌ 1ರೊಳಗೆ ಈಡೇರಿಸದಿದ್ದಲ್ಲಿ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಖಡಕ್‌ ಎಚ್ಚರಿಕೆ ನೀಡಿದರು.ಹೋರಾಟಕ್ಕೆ ಬೆಂಬಲಿಸಿರುವ ಸಾಮಾಜಿಕ ಸೇವಾ ಕಾರ್ಯಕರ್ತ ವಿ.ಜಿ. ಶ್ರೀಕರ್ ಮಾತನಾಡಿ, ಸಾಗರ ತಾಲೂಕು, ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಹಾಗೂ ನಗರ ಹೋಬಳಿಯಲ್ಲಿ 15 ಸಾವಿರಕ್ಕೂ ಹೆಚ್ಚು ಕುಟುಂಬಗಳು ಕೆಪಿಸಿ ಭೂಮಿಯಲ್ಲಿ ಮನೆಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಕಾಗೋಡು ತಿಮ್ಮಪ್ಪ ಈ ಎಲ್ಲಾ ಜಮೀನನ್ನು ರೈತರಿಗೆ ವಾಪಾಸ್ ನೀಡಲು ಆದೇಶಿಸಿದ್ದರು. ಇದನ್ನು ತಕ್ಷಣ ರೈತರಿಗೆ ವಾಪಾಸ್ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯ ವೇಳೆ ಬೇಡಿಕೆ ಈಡೇರದಿದ್ದರೆ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು 9 ರೈತರ ಸಂಘಟನೆಗಳು ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲು ತೀರ್ಮಾನಿಸಿವೆ ಎಂದು ಎಚ್ಚರಿಕೆ ನೀಡಿದರು.ರೈತ ಸಂಘಟನೆ ಮುಖಂಡ ದಿನೇಶ್ ಶಿರವಾಳ ಮಾತನಾಡಿ, ಅ.21ರಂದು ಸಾಗರದ ಪಟ್ಟಣ ಗಣಪತಿ ದೇವಸ್ಥಾನದಿಂದ ಕಾಲ್ನಡಿಗೆ ಮೆರವಣಿಗೆ ಮೂಲಕ ಧರಣಿ ಸ್ಥಳಕ್ಕೆ ತೆರಳಲಿದ್ದೇವೆ. ಈ ಸಭೆಗೆ ಗಣ್ಯಾತಿಗಣ್ಯರೂ, ರಾಜ್ಯ ಮಟ್ಟದ ಹೋರಾಟಗಾರರು, ವಿವಿಧ ಮಠಪತಿಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸಚಿವರು, ಶಾಸಕರು ಯಾವುದೇ ಭರವಸೆ ನೀಡಿದರೂ ಜಗ್ಗದೆ ಮುಖ್ಯಮಂತ್ರಿಗಳು ಧರಣಿ ಸ್ಥಳಕ್ಕೆ ಆಗಮಿಸಿ ಆದೇಶ ಪತ್ರ ನೀಡಿದ್ದಲ್ಲಿ ಮಾತ್ರ ಹೋರಾಟವನ್ನು ನಿಲ್ಲಿಸಲಾಗುವುದು. ಇಲ್ಲದಿದ್ದಲ್ಲಿ ಅಮರಣಾಂತ ಉಪವಾಸ ಹೋರಾಟ ಮುಂದುವರಿಸಲಾಗುವುದು ಎಂದರು.ಗೋಷ್ಠಿಯಲ್ಲಿ ರೈತ ಮುಖಂಡರಾದ ಶಿವಾನಂದ ಕುಗ್ವೆ, ಮಂಜುನಾಥ್, ಎಚ್.ಎಂ. ರಾಘವೇಂದ್ರ, ಎಚ್.ಕೆ. ಸ್ವಾಮಿ, ರಾಜೇಶ್ ಶೆಟ್ಟಿ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ