ಅವೈಜ್ಞಾನಿಕ ಹೆದ್ದಾರಿ ಕಾಮಗಾರಿ ಬಗ್ಗೆ ಶೀಘ್ರ ಬೃಹತ್ ಹೋರಾಟ: ಪ್ರೊ. ನಾಗೇಶ ನಾಯ್ಕ

KannadaprabhaNewsNetwork | Published : Oct 17, 2024 12:50 AM

ಸಾರಾಂಶ

ಚತುಷ್ಪಥ ಹೆದ್ದಾರಿ ಕಾಮಗಾರಿ ಮುಕ್ತಗೊಳ್ಳುವವರೆಗೆ ಉತ್ತರಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ಈಗ ಮುಂದುವರಿಸಿರುವ ಟೋಲ್ ವಸೂಲಾತಿಯನ್ನು ತಕ್ಷಣದಿಂದ ನಿಲ್ಲಿಸಬೇಕು.

ಭಟ್ಕಳ: ಜಿಲ್ಲೆಯಲ್ಲಿ ಅವೈಜ್ಞಾನಿಕ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಜನತೆ ಸಮಸ್ಯೆ ಅನುಭವಿಸುತ್ತಿದ್ದು, ದಿನದಿಂದ ದಿನಕ್ಕೆ ಅಪಘಾತಗಳು ಹೆಚ್ಚಾಗಿ ಸಾವು- ನೋವು ಸಂಭವಿಸುತ್ತಲೇ ಇದೆ. ಸಮಸ್ಯೆಯ ಪರಿಹಾರಕ್ಕೆ ಶೀಘ್ರದಲ್ಲಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಪ್ರೊ. ನಾಗೇಶ ನಾಯ್ಕ ಶಿರಸಿ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸಲು ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸುತ್ತಿರುವುದು ಸರಿಯಲ್ಲ. ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಪ್ರತಿ ತಾಲೂಕಿನಲ್ಲೂ ಇದ್ದು, ಇದನ್ನು ಬಗೆಹರಿಸಲು ಕಾನೂನಾತ್ಮಕ ಹೋರಾಟದ ಅಗತ್ಯವಿದೆ. ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದ ಐಆರ್‌ಬಿ ಬೃಹತ್ ಕಂಪನಿಯಾಗಿದ್ದು, ಅವರು ಮಂತ್ರಿಗಳ ಹಾಗೂ ಮುಖ್ಯಮಂತ್ರಿಗಳ ಆದೇಶವನ್ನು ಧಿಕ್ಕರಿಸುತ್ತಿರುವುದಾಗಿ ಗೊತ್ತಾಗಿದೆ ಎಂದರು.

ಸರಿಯಾಗಿ ಕೆಲಸ ಮಾಡದ ಇಂಥವರಿಗೆ ತಕ್ಕ ಪಾಠ ಕಲಿಸಬೇಕಾಗಿದೆ. ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಂಟಾದ ಅಪಘಾತದಿಂದ ನೂರಾರು ಜೀವಗಳು ಪ್ರಾಣ ಕಳೆದುಕೊಂಡಿವೆ. ಇತ್ತೀಚೆಗೆ ಅಂಕೋಲಾದ ಶಿರೂರಿನಲ್ಲಿ ಆದ ಭೂಕುಸಿತಕ್ಕೆ ಐಆರ್‌ಬಿ ಕಂಪನಿಯವರ ಅವೈಜ್ಞಾನಿಕ ಕಾಮಗಾರಿಯೇ ಕಾರಣವಾಗಿದೆ. ಘಟನೆಯಲ್ಲಿ ೧೧ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಐಆರ್‌ಬಿಯವರು ಕಳೆದ ೧೦ ವರ್ಷಗಳಿಂದ ಕಾಮಗಾರಿ ಮಾಡುತ್ತಿದ್ದು, ಇನ್ನೂ ತನಕ ಪೂರ್ತಿಗೊಳಿಸದೇ ಕೇವಲ ಶೇ. ೬೦ರಷ್ಟು ಕಾಮಗಾರಿಯನ್ನು ಮಾಡಿ ಟೋಲ್ ಗೇಟುಗಳಲ್ಲಿ ಜನಸಾಮಾನ್ಯರ ಹಣವನ್ನು ಲೂಟಿ ಹೊಡೆಯುತ್ತಿದ್ದಾರೆಂದು ಆರೋಪಿಸಿದರು.

ಚುತುಷ್ಪಥ ಹೆದ್ದಾರಿ ಕಾಮಗಾರಿ ಮುಕ್ತಗೊಳ್ಳುವವರೆಗೆ ಉತ್ತರಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ಈಗ ಮುಂದುವರಿಸಿರುವ ಟೋಲ್ ವಸೂಲಾತಿಯನ್ನು ತಕ್ಷಣದಿಂದ ನಿಲ್ಲಿಸಬೇಕು. ಐಆರ್‌ಬಿ ಗುತ್ತಿಗೆದಾರ ಕಂಪನಿ ವತಿಯಿಂದ ಈವರೆಗೆ ಮುಕ್ತಾಯವಾಗಿರುವ ಮತ್ತು ಬಾಕಿ ಉಳಿದಿರುವ ಕಾಮಗಾರಿಗಳಲ್ಲಿ ಭೂವಿಜ್ಞಾನ ಸಮೀಕ್ಷಾ ವರದಿ ಶಿಫಾರಸ್ಸಿನ ಎಲ್ಲ ಮುಂಜಾಗ್ರತಾ ಸುರಕ್ಷಾ ಕ್ರಮಗಳನ್ನು ಸಂಪೂರ್ಣವಾಗಿ ಅಳವಡಿಸಬೇಕು ಎಂದು ಆಗ್ರಹಿಸಿದರು.

ಭಟ್ಕಳ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಅಧ್ಯಕ್ಷ ರಾಜೇಶ ನಾಯಕ, ಮೀನುಗಾರ ಮುಖಂಡ ರಾಮಾ ಮೊಗೇರ, ತಂಜೀಂ ಅಧ್ಯಕ್ಷ ಇನಾಯತುಲ್ಲಾ ಶಾಭಂದ್ರಿ, ಪುರಸಭೆಯ ಉಪಾಧ್ಯಕ್ಷ ಅಲ್ತಾಫ್ ಕರೂರಿ, ಜಾಲಿ ಪಪಂ ಉಪಾಧ್ಯಕ್ಷ ಇಮ್ರಾನ್ ಲಂಕಾ, ವಿ.ಎನ್. ನಾಯ್ಕ, ಸಿದ್ದಾಪುರ, ರೈತ ಸಂಘದ ಅಧ್ಯಕ್ಷ ವೀರಭದ್ರ ನಾಯ್ಕ, ಸಿದ್ದಾಪುರ, ಚಂದ್ರಪ್ಪ, ರಾಘವೇಂದ್ರ ನಾಯ್ಕ, ಸಿದ್ದಾಪುರ, ಮಾರುಕೇರಿ ಗ್ರಾಪಂ ಉಪಾಧ್ಯಕ್ಷ ಎಂ.ಡಿ. ನಾಯ್ಕ, ಗಣಪತಿ ನಾಯ್ಕ ಜಾಲಿ, ಸುಲೇಮಾನ್, ಟಿ.ಡಿ. ನಾಯ್ಕ, ಕೆ.ಎಂ. ಅಸ್ಪಾಕ್, ಪಾಂಡು ನಾಯ್ಕ ಮುಡೇಶ್ವರ, ವೆಂಕಟೇಶ ನಾಯ್ಕ ಮುಂತಾದವರಿದ್ದರು.

Share this article