ಸವಾಲುಗಳ ನಡುವೆ ಅಭಿವೃದ್ಧಿ ಸಾಧನೆ

KannadaprabhaNewsNetwork | Published : Oct 17, 2024 12:50 AM

ಸಾರಾಂಶ

ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ನಮ್ಮ ನೂತನ ಸಮಿತಿ ಅನೇಕ ಸವಾಲುಗಳ ನಡುವೆಯೂ ಶೈಕ್ಷಣಿಕ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಎಂ. ಹರನಾಥ ರಾವ್ ತಿಳಿಸಿದರು.

ಕನ್ನಡ ಪ್ರಭ ವಾರ್ತೆ ಸಾಗರ

ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ನಮ್ಮ ನೂತನ ಸಮಿತಿ ಅನೇಕ ಸವಾಲುಗಳ ನಡುವೆಯೂ ಶೈಕ್ಷಣಿಕ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಎಂ. ಹರನಾಥ ರಾವ್ ತಿಳಿಸಿದರು.ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2022ರ ಮಾರ್ಚ್ 17ರಂದು ನಮ್ಮ ಹೊಸ ಸಮಿತಿ ಅಧಿಕಾರಕ್ಕೆ ಬಂದಿತು. ಹಿಂದಿನ ಸಮಿತಿ ನಮ್ಮ ಆಡಳಿತಕ್ಕೆ ಸಾಕಷ್ಟು ಅಡೆತಡೆ ಉಂಟು ಮಾಡಿತು. ಬ್ಯಾಂಕ್ ಖಾತೆಯನ್ನು ಸೀಜ್ ಮಾಡಿದ್ದರಿಂದ ಉಪನ್ಯಾಸಕರು ಮತ್ತು ಉಪನ್ಯಾಸಕರೇತರರಿಗೆ ಸಂಬಳ ಕೊಡಲು ಸಹ ಕಷ್ಟಪಡುವ ಸ್ಥಿತಿ ನಿರ್ಮಾಣವಾಗಿತ್ತು ಎಂದರು.

ನ್ಯಾಯಾಲಯದಲ್ಲಿರುವ ಪ್ರಕರಣ ನಮ್ಮ ಪರವಾಗಿ ಆಗಲು ಸಮರ್ಥ ದಾಖಲೆ ನೀಡಿ, ಹೊಸ ಬ್ಯಾಂಕ್ ಖಾತೆಯನ್ನು ತೆರೆದು ಕಾಲೇಜು ಆಡಳಿತವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗಿದೆ. ಡಿಸಿಸಿ ಬ್ಯಾಂಕಿನಲ್ಲಿ ಹಿಂದಿನ ಸಮಿತಿ ಮಾಡಿದ್ದ ₹1 ಕೋಟಿ ಸಾಲವನ್ನು ಬಡ್ಡಿಸಹಿತ ತೀರಿಸಲಾಗಿದ್ದು, ಆರ್ಥಿಕವಾಗಿಯೂ ನಮ್ಮ ಸಂಸ್ಥೆ ಸುಸ್ಥಿತಿಯಲ್ಲಿದೆ ಎಂದು ಹೇಳಿದರು.ಪ್ರತಿಷ್ಠಾನದ ಉಪಾಧ್ಯಕ್ಷ ಬಿ.ಆರ್. ಜಯಂತ್ ಮಾತನಾಡಿ, ಹಿಂದಿನ ಸಮಿತಿ ವಿರುದ್ಧ ಲೋಕಾಯುಕ್ತ ಮತ್ತು ಪೊಲೀಸ್ ಠಾಣೆಗೆ ಬೇರೆಬೇರೆ ಪ್ರಕರಣದಲ್ಲಿ ದೂರು ನೀಡಲಾಗಿದೆ. ಸುಮಾರು 32 ಲಕ್ಷ ವೆಚ್ಚದಲ್ಲಿ ಸ್ಮಾರ್ಟ್ ಬೋರ್ಡ್ ಖರೀದಿಯಲ್ಲಿ ಅಕ್ರಮ ನಡೆದಿರುವ ಕುರಿತು ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಸುಮಾರು ₹1.35 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಬಿ.ಎಡ್. ಕಾಲೇಜು ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಟೆಂಡರ್ ಕರೆಯದೆ ಕಾಮಗಾರಿ ನೀಡಿರುವ ಬಗ್ಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.

ತಿಂಗಳ ಸಭೆಯ ನಡಾವಳಿ ಪುಸ್ತಕ ಹೊತ್ತೊಯ್ದಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಸುಮಾರು 2500 ವಿದ್ಯಾರ್ಥಿಗಳು ನಮ್ಮ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಪ್ರಯತ್ನ ನಡೆಸಲಾಗುತ್ತಿದೆ. ಅ. 20ರಂದು ಸಂಸ್ಥೆಯ ಸರ್ವಸದಸ್ಯರ ಸಭೆ ಕರೆಯಲಾಗಿದ್ದು, ಈ ಸಂದರ್ಭದಲ್ಲಿ ಸಂಸ್ಥೆ ಬೆಳವಣಿಗೆ ಬಗ್ಗೆ ಸದಸ್ಯರ ಗಮನ ಸೆಳೆಯಲಾಗುತ್ತದೆ ಎಂದು ಹೇಳಿದರು.

Share this article