ಅದ್ಧೂರಿಯಾಗಿ ಜರುಗಿದ ಸೋಮನಹಳ್ಳಿ ಅಮ್ಮನವರ ಜಾತ್ರಾ ಮಹೋತ್ಸವ

KannadaprabhaNewsNetwork |  
Published : Feb 23, 2025, 12:35 AM IST
22ಕೆಎಂಎನ್ ಡಿ19 | Kannada Prabha

ಸಾರಾಂಶ

ನಾಗಮಂಗಲ ತಾಲೂಕಿನ ಇತಿಹಾಸ ಪ್ರಸಿದ್ಧ ಸೋಮನಹಳ್ಳಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದ ಹಕ್ಕು ಹೊಂದಿರುವ 12 ತತ್ತಿನ ಗ್ರಾಮಗಳ ಗ್ರಾಮಸ್ಥರಿಂದ ಶನಿವಾರ ನಡೆದ ವೈಭವದ ಬಿಸಿಲು ಕೊಂಡೋತ್ಸವಕ್ಕೆ ಜಿಲ್ಲೆ ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯ ಭಕ್ತರು ಸಾಕ್ಷಿಯಾದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ಇತಿಹಾಸ ಪ್ರಸಿದ್ಧ ಸೋಮನಹಳ್ಳಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದ ಹಕ್ಕು ಹೊಂದಿರುವ 12 ತತ್ತಿನ ಗ್ರಾಮಗಳ ಗ್ರಾಮಸ್ಥರಿಂದ ಶನಿವಾರ ನಡೆದ ವೈಭವದ ಬಿಸಿಲು ಕೊಂಡೋತ್ಸವಕ್ಕೆ ಜಿಲ್ಲೆ ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯ ಭಕ್ತರು ಸಾಕ್ಷಿಯಾದರು.

ಚಿಣ್ಯ ಗ್ರಾಮದ ಮೂಲ ದೇವಸ್ಥಾನದಲ್ಲಿ ಸೋಮನಳಮ್ಮ ದೇವಿ ಸರ್ವಾಲಂಕೃತ ಅಶ್ವಾರೋಹಣ ಉತ್ಸವ ಮೂರ್ತಿಗೆ ವಿಶೇಷ ಪೂಜಾ ಕಾರ್ಯಗಳು ನೆರವೇರಿದ ನಂತರ, ಡೊಳ್ಳು ಕುಣಿತ, ಪೂಜಾ ಕುಣಿತ, ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಬಳಿಕ ಉತ್ಸವ ಮೂರ್ತಿಯನ್ನು ಸೋಮನಹಳ್ಳಿ ಕ್ಷೇತ್ರಕ್ಕೆ ಕರೆತರಲಾಯಿತು.

ಇದೇ ವೇಳೆ ದೇವಾಲಯದ ಹಕ್ಕು ಹೊಂದಿರುವ ವಡ್ಡರಹಳ್ಳಿ, ಗುಡ್ಡೇನಹಳ್ಳಿ, ಸೋಮನಹಳ್ಳಿ, ಅಲ್ಪಹಳ್ಳಿ, ಜೋಡಿಹೊಸೂರು, ಗಂಗನಹಳ್ಳಿ, ಕನಗೋನಹಳ್ಳಿ, ಕುಪ್ಪಹಳ್ಳಿ, ಕೆಮ್ಮನಹಳ್ಳಿ ಸೇರಿದಂತೆ ಸುತ್ತಮುತ್ತಲ 12 ಗ್ರಾಮಗಳಲ್ಲಿ ದೇವಿ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ತಂಬಿಟ್ಟಿನ ಆರತಿಯೊಂದಿಗೆ ಎಲ್ಲ ದೇವತೆಗಳನ್ನು ಕ್ಷೇತ್ರಕ್ಕೆ ಕರೆತಂದು ದೇವಾಲಯದ ಸುತ್ತ ಪ್ರದಕ್ಷಣೆ ನಡೆಸಿದ ನಂತರ ಸರತಿಯಂತೆ ಆಯಾ ಗ್ರಾಮಗಳ ದೇವಿ ಪೂಜೆ ಹೊತ್ತಿದ್ದ ದೇವರ ಗುಡ್ಡಪ್ಪನವರು ಕೊಂಡಹಾಯ್ದರು.

ನಂತರ ಕ್ಷೇತ್ರದ ಓಕಳಿ ಮಂಟಪದಲ್ಲಿ ಉತ್ಸವಮೂರ್ತಿ ಮುಂದೆ ನಡೆದ ಅರಿಶಿಣ, ಕುಂಕುಮ ಬೆರೆಸಿದ ಬಣ್ಣದ ನೀರಿನ ಓಕುಳಿಯಾಟ ಮನಮೋಹಕವಾಗಿತ್ತು. ಅಲ್ಪಹಳ್ಳಿ ಗ್ರಾಮದಿಂದ ಆಗಮಿಸಿದ್ದ ಕುರ್ಜುಬಂಡಿ ಉತ್ಸವವು ನೆರೆದಿದ್ದ ಸಹಸ್ರಾರು ಭಕ್ತರ ಗಮನ ಸೆಳೆಯಿತು. ದೇವಿಗೆ ಹರಕೆ ಹೊತ್ತ ಭಕ್ತರು ಬಾಯಿಬೀಗದೊಂದಿಗೆ ಪಾಲ್ಗೊಂಡು ತಮ್ಮ ಹರಕೆ ತೀರಿಸಿಕೊಂಡರು. ಕೊಂಡೋತ್ಸವಕ್ಕೆ ಆಗಮಿಸಿದ್ದ ಎಲ್ಲ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು.

ಮಧ್ಯಾಹ್ನದ ವೇಳೆಯಲ್ಲಿ ನಡೆಯುವ ಸೋಮನಳಮ್ಮ ದೇವಿ ಬಿಸಿಲು ಕೊಂಡೋತ್ಸವವನ್ನು ನೋಡಿ ಕಣ್ತುಂಬಿಕೊಳ್ಳಲು ಸಹಸ್ರಾರು ಭಕ್ತ ಸಮೂಹವೇ ಹರಿದುಬಂದಿತ್ತು. ಕೊಂಡೋತ್ಸವ ನಡೆಯುತ್ತಿದ್ದ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದ ದೃಶ್ಯ ಕಂಡುಬಂತು. ಅಲ್ಲದೆ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿಯೇ ಒಂದು ಆಂಬ್ಯುಲೆನ್ಸ್ ವಾಹನ ನಿಯೋಜಿಸಲಾಗಿತ್ತು.

ಜಾತ್ರೆಗೆ ಬರುವ ಭಕ್ತರಿಗೆ ಯಾವುದೇ ಸೋಂಕು ಹರಡಬಾರದೆಂಬ ಉದ್ದೇಶದಿಂದ ಆರೋಗ್ಯ ಇಲಾಖೆ ವತಿಯಿಂದ ತಾತ್ಕಾಲಿಕ ಆರೋಗ್ಯ ಹೊರಕೇಂದ್ರವನ್ನು ತೆರೆಯಲಾಗಿತ್ತು. ಸ್ವಚ್ಛತೆ ಕಾಪಾಡುವ ಕುರಿತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಧ್ವನಿರ್ವರ್ದಕದ ಮೂಲಕ ಪ್ರಚಾರ ನಡೆಸಿದರು. ಬಿಂಡಿಗನವಿಲೆ ಪೊಲೀಸ್ ಠಾಣೆ ಪಿಎಸ್‌ಐ ಮಾರುತಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.

ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಭಕ್ತರ ಪೂಜಾ ಕೈಂಕರ್ಯಗಳಿಗೆ ಅನುವು ಮಾಡಿಕೊಡುವ ಸಲುವಾಗಿ ಕಂದಾಯ ಇಲಾಖೆ ಯೋಗೇಶ್, ಚಲುವರಾಜು, ರಾಜಮ್ಮ, ಲಕ್ಷ್ಮಮ್ಮ, ಸೋಮಶೇಖರ್ ಸೇರಿದಂತೆ 15ಕ್ಕೂ ಹೆಚ್ಚು ನೌಕರರು ಕರ್ತವ್ಯ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ