ಇಂದಿನಿಂದ ಸೋಮನಳಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ಚಾಲನೆ

KannadaprabhaNewsNetwork |  
Published : Jan 30, 2026, 01:45 AM IST
29ಕೆಎಂಎನ್ ಡಿ11 | Kannada Prabha

ಸಾರಾಂಶ

ಫೆ.೮ರ ಭಾನುವಾರ ಮಧ್ಯಾಹ್ನ ಸೋಮನಹಳ್ಳಿ ಅಮ್ಮನವರ ಮೂರ್ತಿಯನ್ನು ಸರ್ವಾಲಂಕೃತ ರಥದ ಪೀಠದಲ್ಲಿರಿಸಿ ಪೂಜೆ ನೆರವೇರಿಸಿದ ಬಳಿಕ ಧಾರ್ಮಿಕ ದತ್ತಿ ಇಲಾಖೆ ಪರವಾಗಿ ತಹಸೀಲ್ದಾರ್ ಜಿ.ಆದರ್ಶ ಅವರು ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡುವರು. ರಥೋತ್ಸವದ ನಂತರ ನಡೆಯುವ ವಸಂತೋತ್ಸವದೊಂದಿಗೆ ಹತ್ತುದಿನಗಳ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.

ಫೆ.7 ರಂದು ಬಿಸಿಲು ಕೊಂಡೋತ್ಸವ, ಫೆ.8 ರಂದು ಬ್ರಹ್ಮ ರಥೋತ್ಸವ

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ಇತಿಹಾಸ ಪ್ರಸಿದ್ಧ ಶಕ್ತಿದೇವತೆ ಶ್ರೀ ಸೋಮನಳಮ್ಮ ದೇವಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನದ ಹಕ್ಕು ಹೊಂದಿರುವ ಎಲ್ಲಾ ಗ್ರಾಮಗಳಲ್ಲಿ ಜ.30ರ ಶುಕ್ರವಾರ ಕಂಬ ಹಾಕುವ ಮೂಲಕ 10 ದಿನಗಳ ಜಾತ್ರಾ ಮಹೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಾಗುತ್ತಿದೆ.

ಫೆ.7ರಂದು 12 ಹಳ್ಳಿ ಗ್ರಾಮಸ್ಥರಿಂದ ಬಿಸಿಲು ಕೊಂಡೋತ್ಸವ, ಫೆ.8ರಂದು ಭಾನುವಾರ ಮಧ್ಯಾಹ್ನ ನಡೆಯುವ ಅಮ್ಮನವರ ಬ್ರಹ್ಮರಥೋತ್ಸವಕ್ಕೆ ನಾಡಿನ ಸಹಸ್ರಾರು ಭಕ್ತರು ಸಾಕ್ಷಿಯಾಗಲಿದ್ದಾರೆ. ಈ ಬಾರಿ ವಿಶೇಷವಾಗಿ ಜ.30ರಿಂದ ಫೆ.5ರವರೆಗೆ 7ದಿನಗಳ ಕಾಲ ದನಗಳ ಜಾತ್ರೆಯನ್ನು ಆಯೋಜಿಸಲಾಗಿದೆ.

ಜ.31ರಂದು ವಡ್ಡರಹಳ್ಳಿ ಗ್ರಾಮಸ್ಥರಿಂದ ಪಂಚಾಮೃತಾಭಿಷೇಕ ನಡೆಯಲಿದೆ. ಫೆ.1ರಿಂದ 5ರವರೆಗೆ ಹೊಣಕೆರೆ, ಗಂಗನಹಳ್ಳಿ, ಅಲ್ಪಹಳ್ಳಿ, ಸೋಮನಹಳ್ಳಿ ಗ್ರಾಮಸ್ಥರಿಂದ ವಿವಿಧ ಬಗೆಯ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತವೆ.

ಫೆ.6ರ ಮಧ್ಯಾಹ್ನ ಅಮ್ಮನವರ ಮೂಲ ಸನ್ನಿಧಿ ಕಟ್ಟೇಮನೆ ಎಂದೇ ಖ್ಯಾತಿಯ ಚಿಣ್ಯ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವಿಯನ್ನು ಬಿಜಯಂಗೈಸಿದ ಬಳಿಕ ಹೊಣಕೆರೆ ಗ್ರಾಮಸ್ಥರಿಂದ ಬಿಸಿಲು ಕೊಂಡೋತ್ಸವ, ಓಕುಳಿ ಹಬ್ಬ ಸೇರಿದಂತೆ ಹಲವು ಬಗೆಯ ಕಾರ್ಯಕ್ರಮ ಜರುಗಲಿವೆ. ಅಂದು ಸಂಜೆ ಮಡೆ ಉತ್ಸವ ನಡೆಯಲಿದೆ.

ಫೆ.7 ರಂದು ಚಿಣ್ಯ ಗ್ರಾಮದ ಮೂಲ ದೇವಸ್ಥಾನದಲ್ಲಿ ಅಮ್ಮನವರ ಅಶ್ವಾರೋಹಣ ಉತ್ಸವ ಮೂರ್ತಿಗೆ ವಿಶೇಷ ಪೂಜಾ ಕಾರ್ಯಗಳು ನೆರವೇರಿದ ನಂತರ ಜಾನಪದ ಕಲಾ ತಂಡಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯುತ್ತದೆ. ಬಳಿಕ ದೇವಾಲಯದ ಹಕ್ಕು ಹೊಂದಿರುವ ಸುತ್ತಮುತ್ತಲಿನ ಗ್ರಾಮಗಳಿಂದ ತಂಬಿಟ್ಟಿನ ಆರತಿ, ಮಡೆ ಅನ್ನದ ನೈವೇದ್ಯ ನಡೆಸಲಾಗುತ್ತದೆ.

ಮೆರವಣಿಗೆಯು ದೇಗುಲ ಪ್ರವೇಶಿಸಿದ ಬಳಿಕ 12 ಹಳ್ಳಿ ಗ್ರಾಮಸ್ಥರಿಂದ ಬಿಸಿಲು ಕೊಂಡೋತ್ಸವ ನಡೆಯುತ್ತದೆ. ನಂತರ ಕ್ಷೇತ್ರದ ಓಕಳಿ ಮಂಟಪದಲ್ಲಿ ಉತ್ಸವಮೂರ್ತಿ ಮುಂದೆ ನಡೆಯುವ ಅರಿಶಿಣ, ಕುಂಕುಮ ಮತ್ತು ಸುಣ್ಣ ಬೆರೆಸಿದ ಬಣ್ಣದ ನೀರಿನ ಓಕುಳಿಯಾಟ ಮನಮೋಹಕವಾಗಿರುತ್ತದೆ.

ಫೆ.೮ರ ಭಾನುವಾರ ಮಧ್ಯಾಹ್ನ ಸೋಮನಹಳ್ಳಿ ಅಮ್ಮನವರ ಮೂರ್ತಿಯನ್ನು ಸರ್ವಾಲಂಕೃತ ರಥದ ಪೀಠದಲ್ಲಿರಿಸಿ ಪೂಜೆ ನೆರವೇರಿಸಿದ ಬಳಿಕ ಧಾರ್ಮಿಕ ದತ್ತಿ ಇಲಾಖೆ ಪರವಾಗಿ ತಹಸೀಲ್ದಾರ್ ಜಿ.ಆದರ್ಶ ಅವರು ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡುವರು. ರಥೋತ್ಸವದ ನಂತರ ನಡೆಯುವ ವಸಂತೋತ್ಸವದೊಂದಿಗೆ ಹತ್ತುದಿನಗಳ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.

ಕ್ಷೇತ್ರದ ಶ್ರೀ ಆಂಜನೇಯಸ್ವಾಮಿ, ಶ್ರೀ ಕೋಟೆಮಾರಮ್ಮ ಮತ್ತು ಚಿಕ್ಕಮ್ಮದೇವಿಯ ದೇವಾಲಯಗಳಲ್ಲಿಯೂ ಪ್ರತಿನಿತ್ಯ ಪೂಜಾ ಕೈಂಕರ್ಯಗಳು ನಡೆಯಲಿವೆ. ಕಟ್ಟೆಮನೆ ಚಿಣ್ಯ, ಹೊಣಕೆರೆ, ಗಂಗನಹಳ್ಳಿ, ವಡ್ಡರಹಳ್ಳಿ, ಅಲ್ಪಹಳ್ಳಿ, ಜೋಡಿಹೊಸೂರು, ಸೋಮನಹಳ್ಳಿ ಸೇರಿದಂತೆ ಸುತ್ತಮುತ್ತಲ 18 ಗ್ರಾಮಗಳಿಂದ ಜಾತ್ರಾ ಮಹೋತ್ಸವ ನಡೆಯುತ್ತದೆ. ಜಿಲ್ಲೆ ಸೇರಿದಂತೆ ಬೆಂಗಳೂರು, ಮೈಸೂರು, ಹಾಸನ, ಭದ್ರಾವತಿ, ಕೋಲಾರ ಹಾಗೂ ತಮಿಳುನಾಡಿನ ಊಟಿ ಭಾಗಗಳಿಂದ ಸಾವಿರಾರು ಭಕ್ತಾದಿಗಳು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ತಮ್ಮ ಭಕ್ತಿಭಾವ ಸಮರ್ಪಿಸುವರು.

7 ದಿನಗಳ ಕಾಲ ದನಗಳ ಜಾತ್ರೆ :

ಸೋಮನಳಮ್ಮ ದೇವಿಯ ಜಾತ್ರಾ ಮಹೋತ್ಸವದ ಪ್ರಯುಕ್ತ 7 ದಿನಗಳ ಕಾಲ ನಡೆಯುವ ದನಗಳ ಜಾತ್ರೆಯಲ್ಲಿ ಉತ್ತಮ ರಾಸುಗಳಿಗೆ ಆಕರ್ಷಕ ಬಹುಮಾನ ನೀಡಲಾಗುವುದೆಂದು ಧರ್ಮದರ್ಶಿಗಳು ತಿಳಿಸಿದ್ದಾರೆ. ಈಗಾಗಲೇ ಸುತ್ತ ಮುತ್ತಲ ಗ್ರಾಮಗಳಲ್ಲಿ ವ್ಯಾಪಕ ಪ್ರಚಾರ ನಡೆಸಿರುವ ಹಿನ್ನೆಲೆಯಲ್ಲಿ ರೈತರು ತಮ್ಮ ರಾಸುಗಳೊಂದಿಗೆ ಜಾತ್ರೆ ನಡೆಯುವ ಸ್ಥಳಕ್ಕಾಗಮಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

--------

29ಕೆಎಂಎನ್ ಡಿ11

ಶ್ರೀ ಸೋಮನಹಳ್ಳಿ ಅಮ್ಮನವರ ದೇವಸ್ಥಾನ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆಗೆ ಕಾಲಿಟ್ಟಿರೋ ಹುಷಾರ್‌, ಕಚ್ಲಿಕ್ಕೆ ಕಾಯ್ತಿವೆ ಬೀದಿ ನಾಯಿ
ನಗರದಲ್ಲಿ ಡ್ರಗ್ಸ್ ಮಾರಾಟಕ್ಕೆಯತ್ನಿಸಿದ ಮೂವರ ಬಂಧನ