2019ರಲ್ಲಿ ದೇವೇಗೌಡರು ಸೋಲಲು ಸೋಮಣ್ಣ ಕಾರಣ: ಎಸ್.ಪಿ.ಮುದ್ದಹನುಮೇಗೌಡ

KannadaprabhaNewsNetwork | Published : Apr 19, 2024 1:04 AM

ಸಾರಾಂಶ

ಸೋಮಣ್ಣನವರೇ ತುಮಕೂರು ಜಿಲ್ಲೆಗೆ ನಿಮ್ಮ ಕೊಡುಗೆ ಏನು?. ಕೇವಲ ಒಂದು ವರ್ಷದಲ್ಲಿ ಮೂರ್‍ನಾಲ್ಕು ಕಡೆ ಚುನಾವಣೆ ಎದುರಿಸುತ್ತಿದ್ದೀರಿ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಸೋಮಣ್ಣನವರೇ ತುಮಕೂರು ಜಿಲ್ಲೆಗೆ ನಿಮ್ಮ ಕೊಡುಗೆ ಏನು?. ಕೇವಲ ಒಂದು ವರ್ಷದಲ್ಲಿ ಮೂರ್‍ನಾಲ್ಕು ಕಡೆ ಚುನಾವಣೆ ಎದುರಿಸುತ್ತಿದ್ದೀರಿ. ನಿಮ್ಮ ಕ್ಷೇತ್ರ ಬಿಟ್ಟು ತುಮಕೂರನ್ನು ಏಕೆ ಆರಿಸಿಕೊಂಡಿದ್ದೀರಿ ಎಂದು ಕಾಂಗ್ರೆಸ್‌ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಪ್ರಶ್ನಿಸಿದರು. ತಾಲೂಕಿನ ಮಾಯಸಂದ್ರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದರು. ಈ ನಾನು ಜಿಲ್ಲೆಗೆ ಸಾಧ್ಯವಾದಷ್ಟು ಸೇವೆ ಮಾಡಿದ್ದೇನೆ. ಶಾಸಕ, ಸಂಸದನಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದೇನೆ. ಹಾಗಾಗಿ ಜನರಲ್ಲಿ ಮತ ಕೇಳಲು ನನಗೆ ನೈತಿಕತೆ ಇದೆ. ಆದರೆ ಸೋಮಣ್ಣನವರೇ ನಿಮಗೆ ಯಾವ ನೈತಿಕತೆ ಇದೆ. ನನಗೆ ಜಿಲ್ಲೆಯ ಭೌಗೋಳಿಕ ಪರಿಚಯ ಇದೆ. ಬಹುತೇಕ ಬಹುತೇಕ ಗ್ರಾಮಗಳು ಗೊತ್ತಿದೆ. ನಾನು ಸಂಸದನಾಗಿದ್ದ ವೇಳೆ ಸಾಕಷ್ಟು ಗ್ರಾಮಗಳಿಗೆ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದ್ದೇನೆ ಎಂದರು.ಸೋಮಣ್ಣ ಸೋಲು ಕಟ್ಟಿಟ್ಟ ಬುತ್ತಿ: ಕಳೆದ ಒಂದು ವರ್ಷದಿಂದ ಜನರಿಂದ ತಿರಸ್ಕೃತರಾಗಿದ್ದೀರಿ. ಅದೇ ಪ್ರಕಾರ ಈ ಬಾರಿಯೂ ನಿಮಗೆ ಸೋಲು ಕಟ್ಟಿಟ್ಟ ಬುತ್ತಿ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸೋಲಲು ನಾನು ಕಾರಣ ಎಂದು ಬಿಂಬಿಸಲಾಗುತ್ತಿದೆ. 2019ರ ಚುನಾವಣೆಯಲ್ಲಿ ದೇವೇಗೌಡರು ಸೋಲಲು ವಿ.ಸೋಮಣ್ಣ ಕಾರಣ. ಹಾಲಿ ಸಂಸದ ಜಿ.ಎಸ್.ಬಸವರಾಜು ಅವರೇ ರಾಜರೋಷವಾಗಿ ನನ್ನ ಗೆಲುವಿಗೆ ವಿ.ಸೋಮಣ್ಣ ಕಾರಣ ಎಂದು ಹೇಳಿದ್ದಾರೆ. ಆದರೆ ನಾನು ದೇವೇಗೌಡರ ಪರವಾಗಿ ಸಾಕಷ್ಟು ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗಿಯಾಗಿದ್ದೆ. ಮನಸ್ಸಿಗಾಗಿದ್ದ ನೋವನ್ನೂ ತೋರಿಸಿಕೊಳ್ಳದೇ ಪ್ರಾಮಾಣಿಕವಾಗಿ ಮತಯಾಚನೆ ಮಾಡಿದ್ದೆ. ಆದರೆ ಬಿಜೆಪಿ ಮತ್ತು ಜೆಡಿಎಸ್ ನವರು ಸುಖಾಸುಮ್ಮನೆ ನನ್ನ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಹೇಳಿದರು.ವಿಧಾನ ಪರಿಷತ್ ನ ಮಾಜಿ ಸದಸ್ಯ ಬೆಮಲ್ ಕಾಂತರಾಜ್ ಮಾತನಾಡಿ, ಹೆಚ್.ಡಿ.ಕುಮಾರಸ್ವಾಮಿಯವರು ಮಹಿಳೆಯರ ಕುರಿತು ಆಡಿರುವ ಮಾತು ಅವರ ಯೋಗ್ಯತೆಯನ್ನು ತೋರಿಸುತ್ತದೆ. ಕಾಂಗ್ರೆಸ್ ನೀಡಿದ ಗ್ಯಾರಂಟಿ ಜೆಡಿಎಸ್ ಮತ್ತು ಬಿಜೆಪಿಯವರನ್ನು ಧೃತಿಗೆಡಿಸಿದೆ. ಇದರಿಂದ ವಿಚಲಿತರಾಗಿರುವ ಕುಮಾರಸ್ವಾಮಿ ಜನರ ದಿಕ್ಕು ತಪ್ಪಿಸಲು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಮಹಿಳೆಯರ ಬಗ್ಗೆ ಬಹಳ ಲಘುವಾಗಿ ಮಾತನಾಡಿ ಈಗ ಕ್ಷಮೆ ಯಾಚನೆ ಮಾಡಿದರೆ ಅದು ಸರಿ ಹೋಗುವುದಿಲ್ಲ. ತಮ್ಮ ಪಕ್ಷದ ಚಿಹ್ನೆ ತೆನೆ ಹೊತ್ತ ಮಹಿಳೆ. ಅಂತಹ ಗುರುತು ಇಟ್ಟುಕೊಂಡಿದ್ದರೂ ಸಹ ಅವರು ಮಹಿಳೆಯರ ಬಗ್ಗೆ ಕೆಟ್ಟ ಭಾಷೆ ಬಳಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್.ಆರ್.ಜಯರಾಮ್ ಮಾತನಾಡಿ, ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಮುಂಚೂಣಿಯಲ್ಲಿದೆ. ಈ ಲೋಕಸಭಾ ಚುನಾವಣೆಯಲ್ಲಿ ಸುಮಾರು 80 ಸಾವಿರದಷ್ಟು ಮತ ಲಭಿಸಲಿದೆ. ಗ್ಯಾರಂಟಿಗಳಿಂದ ಸಂತಸದಲ್ಲಿರುವ ಜನತೆ ಅತಿ ಹೆಚ್ಚು ಸ್ಥಾನ ನೀಡಲಿದ್ದಾರೆ ಎಂದು ಭವಿಷ್ಯ ನುಡಿದರು.ಮುಖಂಡರಾದ ಸುಬ್ರಮಣಿ ಶ್ರೀಕಂಠೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶ್ರೀನಿವಾಸ್, ಮಾಯಸಂದ್ರ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜವರೇಗೌಡಕಣಕೂರು ಚಂದ್ರಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುಡೇನಹಳ್ಳಿ ಪ್ರಸನ್ನ ಕುಮಾರ್, ಕೋಳಾಲ ನಾಗರಾಜ್ ಇದ್ದರು.

Share this article